ಗುರುವಾರ , ಜನವರಿ 28, 2021
15 °C
ಕುರುಬ ಸಮುದಾಯದ ಕಲೆ–ಸಂಸ್ಕೃತಿ ಅನಾವರಣ

‘ಹಾಲುಮತ ಸಂಸ್ಕೃತಿ ವೈಭವ’ ಜ.12ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಯಚೂರಿನ ದೇವದುರ್ಗ ತಾಲ್ಲೂಕು ತಿಂಥಣಿಯ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಆವರಣದಲ್ಲಿ ಇದೇ 12ರಿಂದ 14ರವರೆಗೆ ‘ಹಾಲುಮತ ಸಂಸ್ಕೃತಿ ವೈಭವ’ ಹಮ್ಮಿಕೊಳ್ಳಲಾಗಿದೆ. 

ಮೂರು ದಿನಗಳ ಈ ಉತ್ಸವದಲ್ಲಿ ಕುರುಬ ಸಮುದಾಯದ ಕಲೆ-ಸಂಸ್ಕೃತಿ ಅನಾವರಣಗೊಳ್ಳಲಿದೆ ಎಂದು ಕುರುಬ ಸಮುದಾಯ ಮುಖಂಡ, ಕಾಂಗ್ರೆಸ್‌ ನಾಯಕ ಎಚ್.ಎಂ. ರೇವಣ್ಣ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

ಉತ್ಸವದ ಅಂಗವಾಗಿ ಟಗರುಗಳ ಕಾಳಗ, ಹೆಳವ-ಸುಡುಗಾಡಸಿದ್ಧ-ಟಗರು ಜೋಗಿ ಸಮಾವೇಶ, ಬೊಮ್ಮಗೊಂಡೇಶ್ವರ-ಸಿದ್ದರಾಮೇಶ್ವರ ಉತ್ಸವ, ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ, ಬೀರದೇವರ ಉತ್ಸವ ನಡೆಯಲಿದೆ. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಆಕರ್ಷಕ ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಹೇಳಿದರು. 

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು,  ತಿಂಥಿಣಿ ಬ್ರಿಜ್ ಕನಕ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗೋವಾದ ಉಪ ಮುಖ್ಯಮಂತ್ರಿ ಚಂದ್ರಕಾಂತ್ ಕವಳೇಕರ್, ಮಹಾರಾಷ್ಟ್ರದ ಆರ್‌ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಮಹದೇವ ಜಾನಕರ್ ಭಾಗವಹಿಸಲಿದ್ದಾರೆ ಎಂದರು.

‘ಸುಡುಗಾಡು ಸಿದ್ಧರು ಹಾಲುಮತದ ಒಂದು ಭಾಗ. ಸಹಸ್ರಾರು ವರ್ಷಗಳಿಂದ ನಮ್ಮ ಪರಂಪರೆಯ ಪವಾಡಗಳನ್ನು ಜೀವಂತವಾಗಿರಿಸಿಕೊಂಡು ಬಂದಿದ್ದಾರೆ. ಅದೇ ರೀತಿ, ಟಗರು ಜೋಗಿಗಳು ಕೂಡ ಊರೂರು ಸಂಚರಿಸುತ್ತಾ, ಇತಿಹಾಸವನ್ನು ತಿಳಿಸುತ್ತಾ ಬಂದಿದ್ದಾರೆ’ ಎಂದರು.

ಈ ಬಾರಿಯ ಉತ್ಸವದಲ್ಲಿ ಹೆಳವ-ಸುಡುಗಾಡು ಸಿದ್ಧರು ಮತ್ತು ಟಗರು ಜೋಗಿ ಸಮಾವೇಶ ಪ್ರಮುಖ ಆಕರ್ಷಣೆ ಆಗಿರಲಿದ್ದು, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಜ. 13ರಂದು ಈ ಉತ್ಸವವನ್ನು ಉದ್ಘಾಟಿಸಲಿದ್ದಾರೆ. 14ರಂದು ನಡೆಯುವ ಬೊಮ್ಮಗೊಂಡೇಶ್ವರ- ಸಿದ್ದರಾಮೇಶ್ವರ ಉತ್ಸವವನ್ನು ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸುವರು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು