ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ: ಮೀಸಲಾತಿ ನಿಯಮ ಗಾಳಿಗೆ ತೂರಿ ಬೋಧಕ ಹುದ್ದೆ ನೇಮಕ

ಸಂವಿಧಾನದ ಅನುಚ್ಛೇದ 16(4), 1995ರ ಸರ್ಕಾರದ ಗೆಜೆಟ್‌ ನೋಟಿಫಿಕೇಶನ್‌ಗಿಲ್ಲ ಕಿಮ್ಮತ್ತು
Last Updated 17 ನವೆಂಬರ್ 2021, 20:09 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 17 ಬೋಧಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸರ್ಕಾರದ ಮೀಸಲಾತಿ ನಿಯಮಗಳಿಗೆ ಸಂಪೂರ್ಣ ತದ್ವಿರುದ್ಧವಾಗಿರುವುದು ಗೊತ್ತಾಗಿದೆ.

ಸಂವಿಧಾನದ ಅನುಚ್ಛೇದ 16 (4)ರ ಪ್ರಕಾರ, ನೇಮಕಾತಿಯಲ್ಲಿ ಶೇ 50ರಷ್ಟು ನೇರ ಮೀಸಲಾತಿ ಕೊಡ
ಬೇಕು. 1995ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಗೆಜೆಟ್‌ ಅಧಿಸೂಚನೆ ಕೂಡ ಇದನ್ನೇ ಹೇಳುತ್ತದೆ. ಆದರೆ, ಅದರ ಪಾಲನೆಯಾಗಿಲ್ಲ.

ಸರ್ಕಾರದ ಆದೇಶದ ಪ್ರಕಾರ, ಕನ್ನಡ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಮಾಡಲು ಉದ್ದೇಶಿಸಿರುವ ಒಟ್ಟು 17 ಹುದ್ದೆಗಳ ಪೈಕಿ 9 ಹುದ್ದೆಗಳು ಸಾಮಾನ್ಯ ವರ್ಗಗಳಿಗೆ, ಮಿಕ್ಕುಳಿದ 8 ಹುದ್ದೆಗಳು ಮೀಸಲು ವರ್ಗಕ್ಕೆ ಮೀಸಲಿಡಬೇಕು. ಪರಿಶಿಷ್ಟ ಜಾತಿ–3, ಪರಿಶಿಷ್ಟ ಪಂಗಡ ಅಥವಾ ಪ್ರವರ್ಗ–1ಕ್ಕೆ 1 ಹುದ್ದೆ, 2ಎ–2, 3ಎ–1, 3ಬಿ–1 ಹುದ್ದೆ ಮೀಸಲಿಡಬೇಕು. ಆದರೆ, ವಿಶ್ವವಿದ್ಯಾಲಯದ ಅಧಿಸೂಚನೆ ಪ್ರಕಾರ, ಒಟ್ಟು 17 ಹುದ್ದೆಗಳಲ್ಲಿ 14 ಸಾಮಾನ್ಯ, ಪರಿಶಿಷ್ಟ ಜಾತಿ, ಪ್ರವರ್ಗ–1, ಪ್ರವರ್ಗ–2ಕ್ಕೆ ತಲಾ ಒಂದೊಂದು ಹುದ್ದೆ ಮೀಸಲಿಡಲಾಗಿದೆ. ಇದು ಸರ್ಕಾರದ ಆದೇಶದ ನೇರಾನೇರ ಉಲ್ಲಂಘನೆ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ.

ರೋಸ್ಟರ್‌ ಬಿಂದುವಿಗಿಲ್ಲ ಬೆಲೆ:
1991ರಿಂದ ಇದುವರೆಗೆ ವಿಶ್ವವಿದ್ಯಾಲಯದಲ್ಲಿ 87 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆರಂಭದಲ್ಲಿ 66 ಹುದ್ದೆಗಳನ್ನು ಸರ್ಕಾರವೇ ನೇರ ಸೃಜನೆ ಮಾಡಿದೆ. ಏಳು ಪರಿವರ್ತಿತ ಹುದ್ದೆಗಳಿವೆ. 66 ಹುದ್ದೆಗಳ ನೇರ ನೇಮಕಾತಿ ಬಳಿಕ 2018ರಲ್ಲಿ 21 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಈ ಪೈಕಿ 9 ಹುದ್ದೆಗಳನ್ನು ತುಂಬಲಾಗಿದೆ. ಮಿಕ್ಕುಳಿದ ಹುದ್ದೆಗಳಿಗೆ ಅರ್ಜಿ ಬರದ ಕಾರಣ ತುಂಬಿರಲಿಲ್ಲ.

ಇದುವರೆಗೆ 87 ಹುದ್ದೆಗಳಿಗೆ ಅರ್ಜಿ ಕರೆದು, ತುಂಬುವ ಪ್ರಕ್ರಿಯೆ ನಡೆಸಿದ್ದರಿಂದ ರೋಸ್ಟರ್‌ ಬಿಂದು ಕೂಡ ಅದೇ ಸಂಖ್ಯೆಗೆ ನಿಂತಿದೆ. ಈಗ 88ನೇ ಬಿಂದುವಿನ ಪ್ರಕಾರ, ಮೀಸಲು ನಿಯಮ ಅನುಸರಿಸಬೇಕು. ಆದರೆ, ಅದನ್ನು ಅನುಸರಿಸುತ್ತಿಲ್ಲ. 2018ರಲ್ಲಿ ಭರ್ತಿಯಾಗದ ಹುದ್ದೆಗಳನ್ನು ಹಾಲಿ ಅಧಿಸೂಚನೆಯಲ್ಲಿ ಪ್ರತ್ಯೇಕ ತೋರಿಸಬೇಕು. ಅವುಗಳನ್ನು ತೋರಿಸಿದರೆ ಆ ಹುದ್ದೆಗಳು ಬ್ಯಾಕ್‌ಲಾಗ್‌ಗೆ ಒಳಪಡುತ್ತಿದ್ದವು. ಅವುಗಳನ್ನು ತೋರಿಸಿಲ್ಲ. ವಿಶ್ವವಿದ್ಯಾಲಯವು ರೋಸ್ಟರ್‌ ಲೆಡ್ಜರ್‌ ಕೂಡ ನಿರ್ವಹಿಸಿಲ್ಲ ಎಂಬ ಆರೋಪ ಇದೆ.

‘ಯಾವುದೇ ನೇಮಕಾತಿಯಲ್ಲಿ ಸಾಮಾನ್ಯ ವರ್ಗದ ಹುದ್ದೆಗಳನ್ನು ಮೊದಲು ಭರ್ತಿ ಮಾಡಬೇಕು. ಅನಂತರ ಮೀಸಲಾತಿ ಹುದ್ದೆಗಳನ್ನು ತುಂಬಬೇಕು. ಒಂದುವೇಳೆ ಹುದ್ದೆ ಭರ್ತಿಯಾಗದಿದ್ದಲ್ಲಿ ‘ಮಿಸ್ಸಿಂಗ್‌ ರೋಸ್ಟರ್‌’ ಅನುಸರಿಸಬೇಕು. ಆದರೆ, ಆರಂಭದಿಂದಲೂ ಸಾಮಾನ್ಯ ವರ್ಗದ ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂದು ವಿಶ್ವವಿದ್ಯಾಲಯವು ಹೇಳುತ್ತಿದೆ. ಸಾಮಾನ್ಯ ವರ್ಗದಲ್ಲಿ ನೇಮಕಗೊಂಡ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗದವರನ್ನು ಅವರ ಮೀಸಲಾತಿ ವರ್ಗಗಳಲ್ಲಿಯೇ ನೇಮಕ ಮಾಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಅವರು ಸಾಮಾನ್ಯ ವರ್ಗದಡಿ ನೇಮಕಗೊಂಡಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಸೋಮಶೇಖರ್‌ ಬಣ್ಣದಮನೆ ತಿಳಿಸಿದ್ದಾರೆ.

‘ಮಿಸ್ಸಿಂಗ್‌ ರೋಸ್ಟರ್‌, ಮೀಸಲಾತಿ ಬಯಸುವ ವರ್ಗಗಳಿಗೆ ಅನ್ವಯವಾಗುತ್ತದೆಯೇ ಹೊರತು ಸಾಮಾನ್ಯ ವರ್ಗಗಳಿಗೆ ಆಗುವುದಿಲ್ಲ. ಈಗಾಗಲೇ ಕೆಲ ಅಭ್ಯರ್ಥಿಗಳಿಂದ ಹಣದ ಹೊಂದಾಣಿಕೆ ಆಗಿರುವುದರಿಂದ ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ತಪ್ಪು ಮೀಸಲಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಸಾಮಾನ್ಯ ವರ್ಗದಲ್ಲಿ ಹೆಚ್ಚು ಹುದ್ದೆಗಳಿದ್ದರೆ ಸಹಜವಾಗಿಯೇ ಅಭ್ಯರ್ಥಿಗಳು ಹೆಚ್ಚಾಗುತ್ತಾರೆ. ಹೆಚ್ಚಿನ ಹಣಕ್ಕೆ ಬೇಡಿಕೆ ಇಡಬಹುದು ಎಂಬ ಲೆಕ್ಕಾಚಾರ ಇದರ ಹಿಂದಿದೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT