ಗುರುವಾರ , ಆಗಸ್ಟ್ 11, 2022
21 °C
ಅಪರೂಪದ ಪ್ರತಿಭೆ ಹೊಂದಿರುವ ಬಸವರಾಜ ಉಮರಾಣಿ

‘ಕಣ್ಣು ಕಾಣದ್ದೇ ವರವಾಯಿತು !’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಎಲ್ಲರಂತೆ ಕಣ್ಣಿನ ದೃಷ್ಟಿ ಇದ್ದಿದ್ದರೆ ನನಗೆ ಇಂಥದ್ದೊಂದು ಪ್ರತಿಭೆ ಪ್ರಾಪ್ತವಾಗುತ್ತಿರಲೇ ಇಲ್ಲವೆನಿಸುತ್ತದೆ. ದೇವರು ಒಂದು ಕಿತ್ತುಕೊಂಡರೆ ಮತ್ತೆನಾದರೂ ಕೊಡುತ್ತಾನೆ ಎಂಬುದಕ್ಕೆ ನಾನೇ ಸಾಕ್ಷಿ. ಕಣ್ಣು ಕಾಣದ್ದೇ ನನಗೆ ವರವಾಗಿದೆ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಬಸವರಾಜ ಶಂಕರ ಉಮರಾಣಿ.

‘ಮಾನವ ಕಂಪ್ಯೂಟರ್‌’ ಎಂದೇ ಖ್ಯಾತರಾಗಿದ್ದ ಶಕುಂತಲಾದೇವಿಯವರನ್ನು ಸ್ಫೂರ್ತಿಯಾಗಿಸಿಕೊಂಡಿರುವ ಬಸವರಾಜ, ಅದೇ ರೀತಿಯ ಪ್ರತಿಭೆಯನ್ನು ಹೊಂದಿದ್ದಾರೆ. ಜನ್ಮತಃ ಅಂಧರಾಗಿರುವ ಅವರು, 1900 ರಿಂದ 2100ವರೆಗಿನ ಯಾವುದೇ ವರ್ಷದ ಕ್ಯಾಲೆಂಡರ್‌ ದಿನವನ್ನು ಕ್ಷಣಾರ್ಧದಲ್ಲಿಯೇ ಹೇಳುತ್ತಾರೆ. ಕೋಟಿಗಳವರೆಗಿನ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮುಂತಾದವುಗಳನ್ನು ಮನಸಿನಲ್ಲಿಯೇ ಲೆಕ್ಕ ಮಾಡಿ ಕೂಡಲೇ ಹೇಳುವ ಕೌಶಲ ಹೊಂದಿದ್ದಾರೆ. 30 ಅಂಕಿಗಳನ್ನು ಒಟ್ಟಿಗೇ ಹೇಳಿದರೂ ಅದನ್ನು ಏರಿಕೆ ಮತ್ತು ಇಳಿಕೆ ಕ್ರಮದಲ್ಲಿ ಹೇಳುವ ಬಸವರಾಜ ಅವರಿಗೆ, ಗಡಿಯಾರದ ಸಹಾಯವಿಲ್ಲದೆ ನಿಖರವಾಗಿ ಸಮಯ ಹೇಳುವ ಶಕ್ತಿಯೂ ಒಲಿದಿದೆ.

‘ದೃಷ್ಟಿ ಇದ್ದವರಿಗೆ ಏಕಾಗ್ರತೆ ಸಾಧಿಸಲು ಕಷ್ಟವಾಗುತ್ತದೆ. ಹಾಗಿದ್ದೂ ಶಕುಂತಲಾದೇವಿ ಅಷ್ಟು ಸಾಧನೆ ಮಾಡಿದ್ದರು. ಅವರನ್ನೇ ಪ್ರೇರಣೆಯಾಗಿಸಿಕೊಂಡು ಎಂಟನೆಯ ವಯಸ್ಸಿನಿಂದಲೇ ಈ ನಿಟ್ಟಿನಲ್ಲಿ ಅಭ್ಯಾಸ ಮಾಡಲು ಆರಂಭಿಸಿದೆ. ಈವರೆಗೆ 5 ಸಾವಿರಕ್ಕೂ ಹೆಚ್ಚು ಶಾಲಾ–ಕಾಲೇಜುಗಳಿಗೆ ಹೋಗಿ ಕಾರ್ಯಾಗಾರ, ಭಾಷಣ ಮಾಡುತ್ತಿದ್ದೇನೆ. ನನ್ನಿಂದ ಸ್ಫೂರ್ತಿ ಪಡೆದ ಹಲವು ಮಕ್ಕಳು ಈ ನಿಟ್ಟಿನಲ್ಲಿ ಅಭ್ಯಾಸ ಮುಂದುವರಿಸಿದ್ದಾರೆ’ ಎಂದು ಅವರು ಹೇಳುತ್ತಾರೆ.

ಶಾಲಾ– ಕಾಲೇಜು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳಿಗೆ ತೆರಳಿ ತಮ್ಮ ಪ್ರತಿಭೆ ಪ್ರದರ್ಶಿಸುವ ಬಸವರಾಜ, ಗಣಿತದ ಬಗ್ಗೆ, ಏಕಾಗ್ರತೆ ಸಾಧಿಸುವ, ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವ ಬಗ್ಗೆ ಪಾಠ ಮಾಡುತ್ತಾರೆ. ಸಂಪನ್ಮೂಲ ವ್ಯಕ್ತಿಯಾಗಿಯೂ ಹಲವು ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದಾರೆ. ಪರೀಕ್ಷಾ ಸಿದ್ಧತೆಯ ಕುರಿತೂ ಅವರು ಉಪನ್ಯಾಸ ನೀಡುತ್ತಿದ್ದಾರೆ. 26 ವರ್ಷದ ಬಸವರಾಜ ಸದ್ಯ, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆದರ್ಶ ಕಾಲೇಜಿನ ಪ್ರಚಾರ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುವ ಅವರು, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರ–ಅಂತರರಾಷ್ಟ್ರೀಯ ಮಟ್ಟದ ನಾಯಕರಿಂದ ಸನ್ಮಾನಿತರಾಗಿದ್ದಾರೆ.

ಬಸವರಾಜ ಅವರ ಸಂಪರ್ಕಕ್ಕೆ– 81979–22802.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು