ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಭಾಷಣ: 34 ಪ್ರಕರಣ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ

ಪೊಲೀಸರ ಮೇಲಿನ ಹಲ್ಲೆ ಪ್ರಕರಣ ಹಿಂಪಡೆಯಲು ಗೃಹ ಸಚಿವರಿಂದಲೇ ಸೂಚನೆ
Last Updated 21 ಸೆಪ್ಟೆಂಬರ್ 2022, 2:06 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದೂ ಸಮಾಜೋತ್ಸವ, ಜನಜಾಗೃತಿ ಸಮಾವೇಶ ಮತ್ತು ‘ಲವ್‌ ಜಿಹಾದ್‌’ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಕೋಮುದ್ವೇಷದ ಭಾಷಣ ಮಾಡಿದ ಆರೋಪದಲ್ಲಿ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಗದೀಶ ಕಾರಂತ ಹಾಗೂ ಕೆಲವು ಹಿಂದುತ್ವ ಸಂಘಟನೆಗಳ ಪ್ರಮುಖರ ವಿರುದ್ಧ ದಾಖಲಾಗಿದ್ದ ಒಟ್ಟು 34 ಮೊಕದ್ದಮೆಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಮತ್ತು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಈ ಮೊಕದ್ದಮೆಗಳನ್ನುಹಿಂಪಡೆಯಬಾರದು’ ಎಂದು ಪೊಲೀಸ್‌ ಮಹಾನಿರ್ದೇಶಕ (ಡಿಜಿ, ಐಜಿಪಿ), ಅಭಿಯೋಗ ಹಾಗೂ ಸರ್ಕಾರಿ ವ್ಯಾಜ್ಯಗಳ ಇಲಾಖೆ ಮತ್ತು ಕಾನೂನು ಇಲಾಖೆ ಅಭಿಪ್ರಾಯ ನೀಡಿದ್ದವು. ಆದರೂ ಸಚಿವ ಸಂಪುಟ ಸಭೆಯಲ್ಲಿ ವಾಪಸ್‌ ಪಡೆಯಲು ತೀರ್ಮಾನಿಸಲಾಗಿದೆ. ಈ ಪೈಕಿ, ರೈತರಿಗೆ ಸಂಬಂಧಿಸಿದ ಕೆಲವು ಪ್ರಕರಣಗಳಿವೆ.

ಈ ಕುರಿತಂತೆ, ಸೋಮವಾರ (ಸೆ. 19) ನಡೆದ ಸಚಿವ ಸಂಪುಟ ಸಭೆಗೆ ಒಳಾಡಳಿತ ಇಲಾಖೆ ಮಂಡಿಸಿದ್ದ 47 ಪುಟಗಳ ಕಡತ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಸಚಿವರು, ಶಾಸಕರು ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದರು.

ಆಗಸ್ಟ್‌ 2ರಂದು ನಡೆದ ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಮೊಕದ್ದಮೆಗಳನ್ನು ಹಿಂಪಡೆಯುವ ಕುರಿತಂತೆ 46 ಮೊಕದ್ದಮೆಗಳನ್ನು ಒಳಗೊಂಡ 27 ಕಡತಗಳನ್ನು ಪರಿಶೀಲಿಸಲಾಗಿತ್ತು. ಈ ಯಾವುದೇ ಮೊಕದ್ದಮೆಗಳು ‘ಹಿಂಪಡೆಯಲು ಸೂಕ್ತ ಅಲ್ಲ’ ಎಂದು ಪೊಲೀಸ್‌ ಇಲಾಖೆ, ಅಭಿಯೋಗ ಇಲಾಖೆ ಹಾಗೂ ಕಾನೂನು ಇಲಾಖೆ ಅಭಿಪ್ರಾಯ ನೀಡಿದ್ದವು. ಆದರೆ, ಸಿಆರ್‌ಪಿಸಿ 321ರ ಅಡಿಯಲ್ಲಿ (ನ್ಯಾಯಾಲಯದಲ್ಲಿರುವ ಮೊಕದ್ದಮೆಗಳನ್ನು ಹಿಂಪಡೆಯುವ ಅಧಿಕಾರ ಅಭಿಯೋಜಕರಿಗೆ ಮಾತ್ರ) 34 ಮೊಕದ್ದಮೆಗಳನ್ನು ಹಿಂಪಡೆಯುವುದು ಸೂಕ್ತ ಎಂದು ಸಂಪುಟ ಸಭೆಗೆ ಉಪ ಸಮಿತಿ ಶಿಫಾರಸು ಮಾಡಿತ್ತು.

ಕೆಲವು ಮೊಕದ್ದಮೆಗಳು: ಹಿಂದೂ– ಮುಸ್ಲಿಂ ಗಲಭೆ ಉಂಟು ಮಾಡಲು ಮೆರವಣಿಗೆ ನೆಪದಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಪ್ರಚೋದನಕಾರಿ ಘೋಷಣೆ ಕೂಗಿದ ಆರೋಪದಲ್ಲಿ ಮಡಿಕೇರಿ ಪೊಲೀಸ್‌ ಠಾಣೆಯಲ್ಲಿ 2015ರಲ್ಲಿ ದಾಖಲಾಗಿದ್ದ ಮೊಕದ್ದಮೆಯನ್ನು ವಾಪಸು ಪಡೆಯುವಂತೆ ಶಾಸಕ ಕೆ.ಜಿ. ಬೋಪಯ್ಯ ಮನವಿ ಮಾಡಿದ್ದರು.

ರಾಷ್ಟ್ರೀಯ ಹೆದ್ದಾರಿ 4ನ್ನು ಬಂದ್‌ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಯಲ್ಲಿಹಾವೇರಿಯ ಕುಮಾರಪಟ್ಟಣಂ ಠಾಣೆಯಲ್ಲಿ 2018ರಲ್ಲಿ ರೈತರ ಮೇಲೆ ದಾಖಲಾದ ಪ್ರಕರಣವನ್ನೂ ವಾಪಸು ಪಡೆಯಲು ಮುಖ್ಯಮಂತ್ರಿ ಮತ್ತು ರೈತ ಸಂಘದವರು ಮನವಿ ಸಲ್ಲಿಸಿದ್ದರು. ಹಲಗೇರಿ ಠಾಣೆಯಲ್ಲಿ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದಾಂದಲೆ ನಡೆಸಿದ ಘಟನೆ ಸಂಬಂಧಿಸಿದಂತೆ 2016ರಲ್ಲಿ ಹಾಗೂ ಹೊಲಗಳಿಗೆ ನೀರು ನುಗ್ಗಿದೆ ಎಂದು ಆರೋಪಿಸಿ ರಸ್ತೆ ಅಡ್ಡಗಟ್ಟಿದ ರೈತರ ಮೇಲೆ 2018ರಲ್ಲಿ ದಾಖಲಾದ ಮೊಕದ್ದಮೆಗಳನ್ನು ವಾಪಸು ಪಡೆಯಲು ಸ್ಥಳೀಯ ಶಾಸಕ ಅರುಣ್‌ಕುಮಾರ್‌ ಆಗ್ರಹಿಸಿದ್ದರು.

ಬೆಂಗಳೂರಿನ ರಾಜಾನುಕುಂಟೆ ಠಾಣಾ ವ್ಯಾಪ್ತಿಯಲ್ಲಿ 2107ರಲ್ಲಿ ಯೇಸುಕ್ರಿಸ್ತನ ಪ್ರಾರ್ಥನೆ ವೇಳೆ ರೆಡ್ಡಿ ಜನಾಂಗಕ್ಕೆ ಸೇರಿದವರು ಅಕ್ರಮ ಪ್ರವೇಶ ಮಾಡಿ ಜಾತಿನಿಂದನೆ ಮಾಡಿರುವ ಪ್ರಕರಣ ತನಿಖೆಯಿಂದ ದೃಢಪಟ್ಟಿದ್ದರೂ ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ ಅವರ ಮನವಿಯಂತೆ ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.

ಹಿಂದಕ್ಕೆ ಪಡೆದ ಪ್ರಮುಖ ಮೊಕದ್ದಮೆಗಳು

l ಹಾವೇರಿಯಲ್ಲಿ ಹಲಗೇರಿ ಠಾಣೆಯಲ್ಲಿ 2015ರಲ್ಲಿ ಎರಡು ಕೋಮುಗಳಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಮೇಲಿನ ಮೊಕದ್ದಮೆ– ಗೃಹ ಸಚಿವ ಜ್ಞಾನೇಂದ್ರ ಮನವಿ

l ನಿಷೇಧಾಜ್ಞೆ ಇದ್ದರೂ ‘ಮಂಗಳೂರು ಚಲೋ‘ ಬೈಕ್‌ ರ‍್ಯಾಲಿ ನಡೆಸಿದ ಆರೋಪದಲ್ಲಿ 2017ರಲ್ಲಿ ಮೈಸೂರು ಜಿಲ್ಲೆಯ ಇಲವಾಲ ಠಾಣೆಯಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಮೇಲೆ ದಾಖಲಾದ ಮೊಕದ್ದಮೆ– ಸಚಿವ ಜೆ.ಸಿ. ಮಾಧುಸ್ವಾಮಿ ಮನವಿ.

l ಹಿಂದೂ ಜಾಗರಣ ವೇದಿಕೆಯ ಶಿವಾನಂದ ಮಲ್ಲಪ್ಪ ಬಡಿಗೇರ ಮತ್ತು ಇತರ ಎಂಟು ಮಂದಿಯ ಗಡಿಪಾರು ವಿರೋಧಿಸಿ ‘ಮುಧೋಳ ಚಲೋ’ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ‌ಜಗದೀಶ ಕಾರಂತ ಮತ್ತು ಸ್ಥಳೀಯ ಕಾರ್ಯಕರ್ತನ ವಿರುದ್ಧ ಮುಧೋಳ ಠಾಣೆಯಲ್ಲಿ 2017ರಲ್ಲಿ ದಾಖಲಾದ ಮೊಕದ್ದಮೆ– ಸಚಿವ ಎಸ್‌. ಅಂಗಾರ ಮನವಿ

l ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲುಗುಂಡಿಯಲ್ಲಿ ಹಿಂದೂ ಸಮಾಜೋತ್ಸವದಲ್ಲಿ ಕೋಮು ದ್ವೇಷದ ಭಾಷಣ ಮಾಡಿದ ಆರೋಪದಲ್ಲಿ ಸುಳ್ಯ ಠಾಣೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಡಿ.ವಿ. ಲೀಲಾಧರ, ಸುಬ್ರಹ್ಮಣ್ಯ ಉಪಾಧ್ಯಾಯ, ಕೆ.ಪಿ. ಜಗದೀಶ ಮತ್ತು ಜಗದೀಶ ಕಾರಂತ ವಿರುದ್ಧ 2013ರಲ್ಲಿ ದಾಖಲಾದ ಮೊಕದ್ದಮೆ–‌ಸಚಿವ ಎಸ್‌. ಅಂಗಾರ ಮನವಿ

l ದೊಡ್ಡಬಳ್ಳಾಪುರದಲ್ಲಿ ‘ಲವ್‌ ಜಿಹಾದ್‌’ ವಿರುದ್ಧದ ಪ್ರತಿಭಟನೆ ವೇಳೆ ಪೊಲೀಸರನ್ನು ನಿಂದಿಸಿದಕ್ಕೆ ಜಗದೀಶ ಕಾರಂತ ವಿರುದ್ಧ 2011ರಲ್ಲಿ ದಾಖಲಾದ ಮೊಕದ್ದಮೆ–ಸಚಿವ ಎಸ್‌. ಅಂಗಾರ ಮನವಿ

l ಶಿರಾದಲ್ಲಿ ಹಿಂದೂ ಜನ ಜಾಗೃತಿ ಸಮಾವೇಶದಲ್ಲಿ ದ್ವೇಷ ವೈಷಮ್ಯದ ಭಾಷಣ ಮಾಡಿದ ಆರೋಪದಲ್ಲಿ 2009ರಲ್ಲಿ ಜಗದೀಶ ಕಾರಂತ ವಿರುದ್ಧ ದಾಖಲಾದ ಮೊಕದ್ದಮೆ– ಸಚಿವ ಎಸ್‌. ಅಂಗಾರ ಮನವಿ

ವಾಪಸ್‌ಗೆ ಮನವಿ ಮಾಡಿದವರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾ‌ದ ಜೆ.ಸಿ. ಮಾಧುಸ್ವಾಮಿ, ಎಸ್‌. ಅಂಗಾರ, ಶಾಸಕರಾದ ಅರುಣ್‌ ಕುಮಾರ್‌ (ರಾಣೆಬೆನ್ನೂರು), ಕೆ.ಜಿ. ಬೋಪಯ್ಯ (ವಿರಾಜಪೇಟೆ), ದೊಡ್ಡನಗೌಡ ಜಿ. ಪಾಟೀಲ (ಹುನಗುಂದ), ವೀರಣ್ಣ ಚರಂತಿಮಠ (ಬಾಗಲಕೋಟೆ), ಎಸ್‌. ಆರ್‌. ವಿಶ್ವನಾಥ (ಯಲಹಂಕ ), ಬಿ. ಎಸ್‌. ಪಾಟೀಲ (ದೇವರಹಿಪ್ಪರಗಿ), ಸುಭಾಷ ಆರ್‌. ಗುತ್ತೇದಾರ (ಆಲಂದ), ರಾಜಕುಮಾರ ಪಾಟೀಲ ತೇಲ್ಕೂರು ( ಸೇಡಂ), ಎಸ್‌.ಎ. ರವೀಂದ್ರನಾಥ (ದಾವಣಗೆರೆ ಉತ್ತರ), ಕೆ. ಮಾಡಾಳ್‌ ವಿರೂಪಾಕ್ಷ (ಚನ್ನಗಿರಿ), ಆನಂದ ಮಾಮನಿ (ಸವದತ್ತಿ), ಶ್ರೀಮಂತ ಪಾಟೀಲ (ಕಾಗವಾಡ), ಅರವಿಂದ ಬೆಲ್ಲದ (ಹುಬ್ಬಳ್ಳಿ– ಧಾರವಾಡ ಪಶ್ಚಿಮ), ಎಸ್‌.ಕೆ. ಬೆಳ್ಳುಬ್ಬಿ (ಮಾಜಿ ಶಾಸಕ), ಎನ್‌. ರವಿಕುಮಾರ್‌ (ವಿಧಾನ ಪರಿಷತ್‌ ಸದಸ್ಯ‌)‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT