ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರೀಯ ಭಾಷೆ ಅನುದಾನ ತಾರತಮ್ಯ: ಕನ್ನಡ ತಬ್ಬಲಿ ಮಕ್ಕಳ ಭಾಷೆಯೇ ಎಂದ ಎಚ್‌ಡಿಕೆ

Last Updated 7 ಜನವರಿ 2023, 6:11 IST
ಅಕ್ಷರ ಗಾತ್ರ

ಬೆಂಗಳೂರು: ಶಾಸ್ತ್ರೀಯ ಭಾಷೆಗಳಿಗೆ ಕೇಂದ್ರದಿಂದ ಸಿಗುವ ಅನುದಾದ ವಿಚಾರದಲ್ಲಿ ಕನ್ನಡ ಎದುರಿಸುತ್ತಿರುವ ತಾರತಮ್ಯವನ್ನು ಸಾಹಿತ್ಯ ಸಮ್ಮೇಳನದಲ್ಲಿ ಪ್ರಶ್ನೆ ಮಾಡಿದ್ದ ಸಾಹಿತಿ ದೊಡ್ಡರಂಗೇಗೌಡರಿಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಬೆಂಬಲ ಸೂಚಿಸಿದ್ದಾರೆ. ಅನುದಾದನ ವಿಚಾರದಲ್ಲಿ ಆಗುತ್ತಿರುವ ತಾರತಮ್ಯವನ್ನು ಪ್ರಶ್ನೆ ಮಾಡಿರುವ ಎಚ್‌ಡಿಕೆ, ‘ಕನ್ನಡ ತಬ್ಬಲಿ ಮಕ್ಕಳ ಭಾಷೆಯೇ’ ಎಂದೂ ಪ್ರಶ್ನೆ ಮಾಡಿದ್ದಾರೆ.

‘ಡಬಲ್‌ ಎಂಜಿನ್‌ ಸರ್ಕಾರದ ಅನುಕೂಲಗಳ ಬಗ್ಗೆ ಪದೇಪದೆ ಹೇಳುವ ಸರ್ಕಾರ ಕನ್ನಡಕ್ಕೆ ಮಾಡಿದ್ದೇನು. ಸಂಸ್ಕೃತ ಮತ್ತು ತಮಿಳು ಭಾಷೆಗೆ ಕಳೆದ ಮೂರು ವರ್ಷಗಳಲ್ಲಿ ಸುಮಾರು ₹40–50 ಕೋಟಿ ಅನುದಾನ ನೀಡಲಾಗಿದೆ. ಕನ್ನಡಕ್ಕೆ ನಾಲ್ಕಾರು ಕೋಟಿಯೂ ದಾಟಿಲ್ಲ, ಶಾಸ್ತ್ರೀಯ ಭಾಷೆಯ ಅಧ್ಯಯನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲರಾಗಿದ್ದೇವೆ, ಇದು ನಮ್ಮ ಜಡತ್ವದ ಕುರುಹು ಅಲ್ಲವೇನು? ಎಂದು ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಸಾಹಿತಿ ದೊಡ್ಡರಂಗೇಗೌಡರು ಪ್ರಶ್ನೆ ಮಾಡಿದ್ದರು.

ಈ ವಿಚಾರಕ್ಕೆ ಧ್ವನಿಗೂಡಿಸಿರುವ ಶಾಸಕ ಎಚ್‌.ಡಿ ಕುಮಾರಸ್ವಾಮಿ ಕೇಂದ್ರದ ವಿರುದ್ಧ ಗುಡುಗಿದ್ದಾರೆ.

‘ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿ 15 ವರ್ಷಗಳೇ ಆಯಿತು. 13 ವರ್ಷಗಳಲ್ಲಿ ಕನ್ನಡಕ್ಕೆ ಸಿಕ್ಕಿದ ಅನುದಾನ ಕೇವಲ ₹3 ಕೋಟಿ. ತಮಿಳಿಗೆ ಸಿಕ್ಕಿದ್ದು ₹43 ಕೋಟಿ. ಆದರೆ, ಸಂಸ್ಕೃತಕ್ಕೆ ಇವರು ಕೊಟ್ಟಿದ್ದು ಬರೋಬ್ಬರಿ ₹643 ಕೋಟಿ. ಕನ್ನಡದ ಕಣ್ಣಿಗೆ ಸುಣ್ಣ, ಬೇರೆ ಭಾಷೆಗಳಿಗೆ ಬೆಣ್ಣೆ. ಕನ್ನಡ ತಬ್ಬಲಿ ಮಕ್ಕಳ ಭಾಷೆಯೇ?’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ಕೇಂದ್ರದಿಂದ ಕನ್ನಡಕ್ಕೆ ಆಗುತ್ತಿರುವ ಅನುದಾನದ ಅನ್ಯಾಯದ ವಿರುದ್ಧ ನಾನು ಅನೇಕ ಸಲ ದನಿ ಎತ್ತಿದ್ದೇನೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಆಡಳಿತಕ್ಕೆ ಅದು ಕೇಳಲೇ ಇಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಸಂಸ್ಕೃತ, ಹಿಂದಿ ತುಷ್ಟೀಕರಣದಿಂದ ಕನ್ನಡಕ್ಕೆ ಅದೆಷ್ಟು ವಂಚನೆ ಆಗಿದೆ ಎನ್ನುವುದಕ್ಕೆ ಅನುದಾನದ ತಾರತಮ್ಯವೇ ಸಾಕ್ಷಿ. ಈಗ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ದೊಡ್ದರಂಗೇಗೌಡ ಅವರೇ ಸಮ್ಮೇಳನದ ತಮ್ಮ ಭಾಷಣದಲ್ಲಿ ಅನುದಾನದ ಅನ್ಯಾಯವನ್ನು ಮುಖ್ಯಮಂತ್ರಿ ಬೊಮ್ಮಾಯಿ ಎದುರೇ ಬಿಜೆಪಿ ಸರಕಾರದ ಮುಖಕ್ಕೆ ರಾಚುವಂತೆ ಹೇಳಿದ್ದಾರೆ. ಈ ವಿಷಯ ಪ್ರಸ್ತಾಪ ಮಾಡಿದ ಅವರನ್ನು ಮನಸಾರೆ ಅಭಿನಂದಿಸುತ್ತೇನೆ’ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

‘ಹಿಂದಿ ಹೇರಿಕೆ ಮೂಲಕ ಸದಾ ಕನ್ನಡದ ಮೇಲೆ ಪ್ರಹಾರ ನಡೆಸುತ್ತಲೇ ಇರುವ ಬಿಜೆಪಿ, ಅವಕಾಶ ಸಿಕ್ಕಾಗಲೆಲ್ಲ ಕನ್ನಡದ ಬೇರುಗಳಿಗೆ ಕೊಡಲಿಪೆಟ್ಟು ಕೊಡುತ್ತಿದೆ. ನೆಲ, ಜಲ, ಭಾಷೆ ವಿಷಯದಲ್ಲಿ ಕರ್ನಾಟಕಕ್ಕೆ ಆ ಪಕ್ಷವು ಅನ್ಯಾಯದ ಸರಣಿಯನ್ನೇ ಮುಂದುವರಿಸಿದೆ. ಬೆಳಗಾವಿ ವಿಷಯದಲ್ಲಿ ಬಿಜೆಪಿ ವರ್ತಿಸುತ್ತಿರುವ ರೀತಿ ಕಳವಳಕಾರಿ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಒಕ್ಕೂಟ ಭಾಷೆಗಳ ನಡುವೆ ಅನುದಾನದಲ್ಲಿ ಮಾತ್ರವಲ್ಲ, ಯಾವ ವಿಷಯದಲ್ಲೂ ತಾರತಮ್ಯ ಎಸಗಬಾರದು. ಈ ವ್ಯವಸ್ಥೆಯಲ್ಲಿ ಆಡಳಿತ ನಡೆಸುವವರಿಗೆ ರಾಜಧರ್ಮ ಪಾಲನೆ ಅತ್ಯಗತ್ಯ. ದೇಶಕ್ಕೆ ಅತಿಹೆಚ್ಚು ತೆರಿಗೆ ತೆರುತ್ತಿರುವ ಕರ್ನಾಟಕದ ವಿಷಯದಲ್ಲಿ ಇಂಥ ರಾಜಧರ್ಮ ಪಾಲನೆ ಆಗುತ್ತಿಲ್ಲ‘ ಎಂದು ಮಾಜಿ ಸಿಎಂ ಎಚ್‌ಡಿಕೆ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT