ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ಜ್ವರಕ್ಕೆ ಲಸಿಕೆ ನೀಡದೇ ಗೋವುಗಳನ್ನು ಸಾವಿಗೆ ದೂಡಿದ ಕೇಂದ್ರ: ಎಚ್‌ಡಿಕೆ

Last Updated 5 ಜೂನ್ 2021, 8:11 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಂಕ್ರಾಮಿಕ ರೋಗ ಕಾಲುಬಾಯಿ ಜ್ವರ ಭೀಕರ ಕಾಯಿಲೆಯಾಗಿದ್ದು, ಅದು ಬಹುಬೇಗ ಹರಡುತ್ತದೆ. ಹಸುಗಳು ನರಳಾಡಿ ಸಾಯುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಲಸಿಕಾ ಅಭಿಯಾನ ನಡೆಸದೇ ಇರುವುದೇ ಇದಕ್ಕೆ ಕಾರಣ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಅವರು, ‘ಗೋವುಗಳ ಪಾಡು ನೋಡಲಾಗದೇ ರೈತ ಕೊರಗಿ ಕುಗ್ಗಿಹೋಗುತ್ತಾನೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸದೇ ಇರುವುದೇ ಇದಕ್ಕೆ ಕಾರಣ ಎಂಬ ಅಂಶ ಬಯಲಾಗಿದೆ’ ಎಂದಿದ್ದಾರೆ.

‘ಗೋ’ ರಕ್ಷಣೆ ಬಗ್ಗೆ ಬಿಜೆಪಿಯವರು ಹಾದಿಬೀದಿಯಲ್ಲಿ ಅರಚುತ್ತಾರೆ ಹೊರತು, ಗೋವುಗಳ ರಕ್ಷಣೆ ಮಾಡುವುದಿಲ್ಲ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಹಸುಗಳಲ್ಲಿ ಕಾಣಿಸಿಕೊಳ್ಳುವ ಗಂಭೀರ ಕಾಯಿಲೆಯಾದ ಕಾಲುಬಾಯಿ ಜ್ವರದ ಎಫ್‌ಎಂಡಿ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸಿಯೇ ಇಲ್ಲ. ರಾಜ್ಯ ಸರ್ಕಾರ ಕೇಳಿಲ್ಲ. ಈಗ ರಾಸುಗಳು ನರಳುತ್ತಿವೆ’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

‘ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ರಾಸುಗಳಿಗೆ ಲಸಿಕೆ ಅಭಿಯಾನ ನಡೆಸಬೇಕಿತ್ತು. ಆದರೆ, ಕೋವಿಡ್‌ –19 ಕಾರಣದಿಂದ ಲಸಿಕೆ ಹಾಕಿಲ್ಲ ಎಂದು ಪಶುವೈದ್ಯರು ಹೇಳಿದ್ದಾರೆ. ಲಸಿಕೆ ಅಭಿಯಾನ ನಡೆಸದೇ ಈಗ ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ಗೋರಕ್ಷಣೆ? ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದೆ ನಿಂತು ಮಾಡಿದ ಗೋವಧೆಯಲ್ಲವೇ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾ. ಮತ್ತು ರಾಮನಗರ ಜಿಲ್ಲೆಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದೆ. ಹೈನೋದ್ಯಮವನ್ನು ಕಂಗೆಡಿಸುವ ಈ ಕಾಯಿಲೆ ಸಾಂಕ್ರಾಮಿಕವಾಗುವುದನ್ನು ತಡೆಯಲು ಸರ್ಕಾರ ಕೂಡಲೇ ಕಾರ್ಯಪ್ರವೃತ್ತವಾಗಬೇಕು. ಮುಂದೆ ಜೂನ್‌ನಲ್ಲಿ ನಡೆಯಲಿರುವ ಲಸಿಕೆ ಅಭಿಯಾನವನ್ನು ಯಾವ ಕಾರಣಕ್ಕೂ ತಪ್ಪಿಸದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

‘ಕಾಯಿಲೆಗೆ ಬಲಿಯಾಗಿರುವ ರಾಸುಗಳ ಮಾಲೀಕರಿಗೆ ಸರ್ಕಾರ ಪರಿಹಾರ ನೀಡಲಿ. ಹಿಂದೆ ಬಿಜೆಪಿಯೇ ಅಧಿಕಾರದಲ್ಲಿದ್ದಾಗಲೂ ಕಾಲುಬಾಯಿ ಜ್ವರಬಂದಿತ್ತು. ಆಗ ನಾನೇ ವೈಯಕ್ತಿಕವಾಗಿ ರೈತರಿಗೆ ಪರಿಹಾರ ಹಣ ನೀಡಿದ್ದೆ. ಅದರಿಂದ ಎಚ್ಚೆತ್ತ ಸರ್ಕಾರ ತಾನೂ ಪರಿಹಾರ ನೀಡಿತ್ತು. ಗೋವುಗಳ ಬಗ್ಗೆ ದೊಡ್ಡದಾಗಿ ಮಾತಾಡುವ ಬಿಜೆಪಿ ಈಗ ಗೋವುಗಳ ರಕ್ಷಣೆ ಮಾಡಲಿ’ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT