ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿದ್ದ ನಿಮ್ಮನ್ನು ಅಂದು ರಕ್ಷಿಸಿದ್ದು ನಾನು: ಸಿ.ಟಿ ರವಿಗೆ ಎಚ್‌ಡಿಕೆ

Last Updated 7 ಅಕ್ಟೋಬರ್ 2021, 13:17 IST
ಅಕ್ಷರ ಗಾತ್ರ

ಬೆಂಗಳೂರು:ನನ್ನ ಸೇವಾ ಗುಣ, ನಿಸ್ವಾರ್ಥತೆ ಏನೆಂಬುದು ಜನರಿಗಿಂತ ಒಮ್ಮೆ ಸಂಕಷ್ಟಕ್ಕೆ ಸಿಲುಕಿದ್ದ ನಿಮಗೇ ಚನ್ನಾಗಿ ಗೊತ್ತಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಅವರು ಬಿಜೆಪಿ ನಾಯಕ ಸಿ.ಟಿ ರವಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಆರ್‌ಎಸ್‌ಎಸ್‌ ವಿರುದ್ಧದ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗುರುವಾರ ಬೆಳಗ್ಗೆ ಟ್ವೀಟ್‌ ಮಾಡಿ ಟೀಕೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಆರ್‌ಎಸ್‌ಎಸ್‌ನ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರು.

ಜೊತೆಗೇ, ದೇವೇಗೌಡರು ಒಮ್ಮೆ ಆರ್‌ಎಸ್‌ಎಸ್‌ ಅನ್ನು ಹೊಗಳಿದ ವಿಚಾರವನ್ನು ಪ್ರಸ್ತಾಪಿಸಿದ್ದ ಸಿ.ಟಿ ರವಿ, ಸಂಘದ ಬಗ್ಗೆ ದೇವೇಗೌಡರಿಂದ ತಿಳಿದುಕೊಳ್ಳುವಂತೆ ಕುಮಾರಸ್ವಾಮಿ ಅವರಿಗೆ ಕಿವಿಮಾತೂ ಹೇಳಿದ್ದರು.

‘ಸ್ವಜನಪಕ್ಷಪಾತ, ಕುಟುಂಬ ರಾಜಕಾರಣವನ್ನು ಸರ್ವಸ್ವ, ಸ್ವಾರ್ಥವನ್ನು ಹಕ್ಕೆಂದು ಭಾವಿಸಿರುವವರಿಗೆ ಸಂಘದ ಸಿದ್ದಾಂತಗಳು ಅರ್ಥವಾಗುವುದಿಲ್ಲ. ಆರ್‌ಎಸ್‌ಎಸ್‌ನ ನಿಷ್ಠೆ, ದೇಶ ಭಕ್ತಿ, ಸಂಕಷ್ಟದಲ್ಲಿರುವ ಜನರಿಗೆ ನಿಸ್ವಾರ್ಥ ಸೇವಾ ನೀಡುವ ಮನೋಭಾವ ಹೆಚ್‌ಡಿಕೆ ಅವರಿಗೆ ಅರ್ಥವಾಗುವುದಿಲ್ಲ ಬಿಡಿ,‘ ಎಂದು ಅವರು ತಮ್ಮ ಟ್ವೀಟ್‌ವೊಂದರಲ್ಲಿ ಹೇಳಿದ್ದರು. ಎಚ್‌ಡಿಕೆ ಅವರ ಹೇಳಿಕೆ ಖಂಡಿಸಲು ರವಿ 14 ಟ್ವೀಟ್‌ಗಳನ್ನು ಮಾಡಿದ್ದರು.

ಸಿ.ಟಿ ರವಿ ಅವರ ದೀರ್ಘ ಟ್ವೀಟ್‌ಗೆ, ಅಷ್ಟೇ ದೀರ್ಘದ ಟ್ವೀಟ್‌ಗಳ ಮೂಲಕ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

‘ನನ್ನ ಸೇವಾ ಗುಣ, ನಿಸ್ವಾರ್ಥತೆ ಏನೆಂಬುದು ಜನರಿಗಿಂತ ಒಮ್ಮೆ ಸಂಕಷ್ಟಕ್ಕೆ ಸಿಲುಕಿದ್ದ ನಿಮಗೇ ಚನ್ನಾಗಿ ಗೊತ್ತಿದೆ ಎಂಬುದು ನನ್ನ ಭಾವನೆ. ಅಂದು ಆರೆಸ್ಸೆಸ್ ಮೇಲಿನ ನಿಷ್ಠೆ ನಿಮ್ಮನ್ನು ರಕ್ಷಣೆ ಮಾಡಲಿಲ್ಲ. ಹೆಚ್.ಡಿ.ಕುಮಾರಸ್ವಾಮಿಯ ನಿಸ್ವಾರ್ಥತೆಯ ಫಲಾನುಭವಿ ನೀವು. ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಿ ಸಿ.ಟಿ.ರವಿಯವರೇ,‘ ಎಂದು ಕುಮಾರಸ್ವಾಮಿ ಅವರು ಟ್ವೀಟ್‌ ಮಾಡಿದ್ದಾರೆ. ಈ ಮೂಲಕ ತಮ್ಮಿಬ್ಬರ ನಡುವಿನ ಯಾವುದೋ ಘಟನೆಯನ್ನು ಸಿ.ಟಿ ರವಿಗೆ ಮನವರಿಕೆ ಮಾಡಲು ಕುಮಾರಸ್ವಾಮಿ ಪ್ರಯತ್ನಿಸಿದ್ದಾರೆ.

ಆರ್‌ಎಸ್‌ಎಸ್‌ ಬಗ್ಗೆ ದೇವೇಗೌಡರಿಂದ ಕೇಳಿ ತಿಳಿಯಬೇಕು ಎಂಬ ಮಾತಿಗೂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.‘1975ರಲ್ಲಿ ಜನಸಂಘವೂ ಜನತಾ ಪಕ್ಷದ ಮೈತ್ರಿ ಭಾಗವಾಗಿತ್ತು. ಆಗ ಜನಸಂಘದ ನಾಯಕರ ಜತೆ ದೇವೇಗೌಡರೂ ವೇದಿಕೆ ಹಂಚಿಕೊಂಡಿದ್ದರು. ಅಟಲ್, ಅಡ್ವಾಣಿ ಅವರಂತೆ ಗೌಡರೂ ತುರ್ತುಪರಿಸ್ಥಿತಿ ವಿರುದ್ಧ ದನಿಯೆತ್ತಿ ಜೈಲಿಗೆ ಹೋಗಿದ್ದರು. ಆದರೆ, 1975ರ ಆರ್‌ಎಸ್‌ಎಸ್‌ಗೂ ಈಗಿನ ಆರ್‌ಎಸ್‌ಎಸ್‌ಗೂ ಅಜಗಜಾಂತರ ವ್ಯತ್ಯಾಸವಿದೆ. ಇದು ನಿಮಗಿಂತ ಗೌಡರಿಗೇ ಚೆನ್ನಾಗಿ ಗೊತ್ತು,‘ ಎಂದು ಹೇಳಿದ್ದಾರೆ.

‘ತುರ್ತು ಪರಿಸ್ಥಿತಿ ವೇಳೆ ಜನಸಂಘವಷ್ಟೇ ಅಲ್ಲ, ಅನೇಕ ನಾಯಕರು ಜೈಲಿಗೆ ಹೋಗಿದ್ದರು. ಅಡ್ವಾಣಿ ಅವರು ಬೆಂಗಳೂರು ಜೈಲಿನಲ್ಲೇ ಇದ್ದರು. ಅಲ್ಲಿ ಅಡ್ವಾಣಿ ಅವರೊಂದಿಗಿನ ಒಡನಾಟದಿಂದ ಗೌಡರು ಹಾಗೆ ಹೇಳಿರಬಹುದು. ಎಮರ್ಜೆನ್ಸಿ ಬಳಿಕ ಆರ್‌ಎಸ್‌ಎಸ್‌ ಹೇಗೆ ಬದಲಾಯಿತೆಂಬುದು ಅವರಿಗೆ ತಿಳಿದಿದೆ. ಮೈಸೂರಿನಲ್ಲಿ ಗೌಡರು ಹೇಳಿದ್ದನ್ನೇ ಇವತ್ತು ತಿರುಚಿ ಹೇಳಬೇಡಿ,‘ ಎಂದು ತಿಳಿಸಿದ್ದಾರೆ.

‘ಗೌಡರು ಎಂದೂ ಆರ್‌ಎಸ್‌ಎಸ್‌ ಒಪ್ಪಿಲ್ಲ. ಹಾಗಿದ್ದಿದ್ದರೆ, ಪ್ರಧಾನಿ ಆಗಿದ್ದ ಅವರಿಗೆ ಕಾಂಗ್ರೆಸ್ ʼಕೈʼಕೊಟ್ಟಾಗ ಬೆಂಬಲಕ್ಕೆ ಬಂದ ವಾಜಪೇಯಿ ಅವರ ಪ್ರಸ್ತಾವ ಒಪ್ಪುತ್ತಿದ್ದರು. ಅಷ್ಟೇ ಏಕೆ, ಬಿಜೆಪಿ ಜತೆ ನಾನು ಸರಕಾರ ರಚಿಸಿದ ಕಾರಣಕ್ಕೆ ಅವರ ಆರೋಗ್ಯ ಹಾಳಾಯಿತು. ಇದು ಆರ್‌ಎಸ್‌ಎಸ್‌ ಬಗ್ಗೆ ಗೌಡರು ಕಾಯ್ದುಕೊಂಡಿರುವ ಅಂತರ. ಅಪ್ರಬುದ್ಧತೆ ಇರುವುದು ಯಾರಿಗೆ?’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT