ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಷುಗರ್ ಕಾರ್ಖಾನೆ ಖಾಸಗಿಗೆ ವಹಿಸದಂತೆ ಎಚ್.ಡಿ. ಕುಮಾರಸ್ವಾಮಿ ಆಗ್ರಹ

Last Updated 5 ಜುಲೈ 2021, 7:14 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸೋಮವಾರ ಬೆಳಿಗ್ಗೆ ಭೇಟಿ ಮಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗಿಗೆ ನೀಡದಂತೆ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಮೈಷುಗರ್ ಕಾರ್ಖಾನೆಯನ್ನು ಖಾಸಗಿಗೆ ವಹಿಸುವ ಕುರಿತು ಚರ್ಚೆ ನಡೆಯುತ್ತಿದೆ. ಖಾಸಗಿಗೆ ವಹಿಸದೇ ಸರ್ಕಾರಿ ಸ್ವಾಮ್ಯದಲ್ಲೇ ಸಕ್ಕರೆ ಕಾರ್ಖಾನೆ ಪುನರಾರಂಭ‌ ಮಾಡುವಂತೆ ಒತ್ತಾಯಿಸಿದ್ದೇನೆ. ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆಯನ್ನು ಖಾಸಗಿಗೆ ವಹಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡುವುದಿಲ್ಲ ಎಂಬ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ' ಎಂದರು.

40 ವರ್ಷಗಳ ಅವಧಿಗೆ ಸಕ್ಕರೆ ಕಾರ್ಖಾನೆಯನ್ನು ಖಾಸಗಿಗೆ ಗುತ್ತಿಗೆ ನೀಡುವ ಕುರಿತು ಚರ್ಚೆ ಆಗುತ್ತಿದೆ. ಯಾವುದೇ ಒತ್ತಡಕ್ಕೆ ಮಣಿದು ನಿರ್ಧಾರ ಕೈಗೊಳ್ಳಬಾರದು ಎಂದು ಮನವಿ ಮಾಡಲಾಗಿದೆ ಎಂದರು.

ಸುಮಲತಾ ವಿರುದ್ಧ ಆಕ್ರೋಶ:
ಯಾರ ಒತ್ತಡದಿಂದ ಸಕ್ಕರೆ ಕಾರ್ಖಾನೆಯ ಖಾಸಗೀಕರಣ ನಡೆಯುತ್ತಿದೆ ಎಂಬ ಪ್ರಶ್ನೆಗೆ, 'ಮಂಡ್ಯ ಸಂಸದರನ್ನೇ ಕೇಳಬೇಕು. ಕೆ ಆರ್ ಎಸ್ ಅಣೆಕಟ್ಟೆಯನ್ನು ಅವರೇ ರಕ್ಷಣೆ ಮಾಡ್ತಾರಂತಲ್ಲ. ನೀರು ಹೋಗದ ಹಾಗೆ ಅಣೆಕಟ್ಟೆ ಬಾಗಿಲಿಗೆ ಸಂಸದರನ್ನೇ ಅಡ್ಡ ಮಲಗಿಸಿಬಿಟ್ಟರೆ ಕಾರ್ಖಾನೆ ಬಿಗಿಯಾಗಿಬಿಡುತ್ತಾ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಹಿತಿ ಇಲ್ಲದೇ ಕೆಲಸ ಮಾಡೋದಲ್ಲ. ಯಾರದ್ದೋ ವೈಯಕ್ತಿಕ ದ್ವೇಷಕ್ಕೆ ಹೇಳಿಕೆ ನೀಡುವುದಲ್ಲ. ಯಾವುದೋ ಅನುಕಂಪದ‌ ಮೇಲೆ ಗೆದ್ದು ಬಂದಿದ್ದಾರೆ. ಜನರ ಋಣ ತೀರಿಸುವ ಕೆಲಸ ಮಾಡಬೇಕು ಎಂದರು.

ಬಾಲಿಶ ಹೇಳಿಕೆ:
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಮೀಸಲಾತಿ ನಿಗದಿ ಮಾಡುವುದು ಸರ್ಕಾರವಲ್ಲ, ಚುನಾವಣಾ ಆಯೋಗ. ಈ ವಿಚಾರದಲ್ಲಿ ಸಚಿವ ಸಿ.ಪಿ. ಯೋಗೇಶ್ವರ್ ಬಾಲಿಶ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಕೇಳಿದರು.

ತಮಿಳುನಾಡಿಗೆ ತೊಂದರೆ ಇಲ್ಲ:
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ತೊಂದರೆ ಆಗುವುದಿಲ್ಲ. ಕರ್ನಾಟಕ ತನ್ನ ಪಾಲಿನ‌ ನೀರನ್ನಷ್ಟೇ ಬಳಸಿಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ತಮಿಳುನಾಡು ಹೊಗೇನಕಲ್ ಅಣೆಕಟ್ಟೆ ನಿರ್ಮಿಸುವಾಗ ಯಾರ ಒಪ್ಪಿಗೆ ಪಡೆದಿತ್ತು? ನ್ಯಾಯಮಂಡಳಿ ಆದೇಶದಂತೆ ತಮಿಳುನಾಡಿಗೆ ಕರ್ನಾಟಕ 193 ಟಿಎಂಸಿ ಅಡಿ ನೀರು ಬಿಡಬೇಕು. ಅದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT