ಮಂಗಳವಾರ, ಆಗಸ್ಟ್ 16, 2022
30 °C

ಡ್ರಗ್‌ ಮಾಫಿಯಾ | ಅಪ್ರಸ್ತುತ ವಿಷಯಗಳಿಂದ ತನಿಖೆ ದಿಕ್ಕು ತಪ್ಪದಿರಲಿ: ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಡ್ರಗ್ಸ್‌ ಪ್ರಕರಣದ ತನಿಖೆಯ ದಿಕ್ಕು ತಪ್ಪಬಾರದು. ತನಿಖೆಯನ್ನು ಹಳಿ ತಪ್ಪಿಸುವುದಕ್ಕಾಗಿ ಸಂಬಂಧವಿಲ್ಲದ ವಿಷಯಗಳನ್ನು ಯಾರೂ ಪ್ರಸ್ತಾಪ ಮಾಡಬಾರದು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

‘ಕುಮಾರಸ್ವಾಮಿ ಅವರ ಜತೆಯಲ್ಲೇ ನಾನು ಕ್ಯಾಸಿನೋಗೆ ಹೋಗಿದ್ದೆ’ ಎಂಬ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮ್ಮದ್ ಅವರ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಈಗ ಡ್ರಗ್ಸ್‌ ದಂಧೆಯ ಕುರಿತು ತನಿಖೆ ನಡೆಯುತ್ತಿದೆ. ಅದಕ್ಕೂ ನಮ್ಮ ಶ್ರೀಲಂಕಾ ಪ್ರವಾಸಕ್ಕೂ ಸಂಬಂಧವಿಲ್ಲ. 14 ವರ್ಷಗಳ ಹಿಂದಿನ ವಿಷಯವನ್ನು ನಮ್ಮ ಹಳೆಯ ಸ್ನೇಹಿತರು ಏಕೆ ಪ್ರಸ್ತಾಪಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಿ’ ಎಂದರು.

‘ಕನ್ನಡ ಚಿತ್ರರಂಗದಲ್ಲಷ್ಟೇ ಡ್ರಗ್ಸ್‌ ಬಳಕೆ ಇದೆ ಎಂದು ಯಾರೂ ಭಾವಿಸಬೇಡಿ. ಸ್ವತಃ ಚಿತ್ರ ನಿರ್ಮಾಪಕನಾಗಿದ್ದು, ಯಾವತ್ತೂ ನನ್ನ ಗಮನಕ್ಕೆ ಈ ವಿಷಯ ಬಂದಿಲ್ಲ. ಡ್ರಗ್ಸ್‌ ದಂಧೆ ನಿಲ್ಲಬೇಕು ಎಂಬುದು ರಾಜ್ಯದ ಜನತೆಯ ಬಯಕೆ. ಅದಕ್ಕೆ ಪೂರಕವಾಗಿ ಸಮಗ್ರವಾಗಿ ತನಿಖೆ ನಡೆಯಲಿ’ ಎಂದು ಹೇಳಿದರು.

‘ಕ್ಯಾಸಿನೋಗಳಲ್ಲಿ ಡ್ರಗ್ಸ್‌ ಬಳಸುತ್ತಾರೆ ಎಂಬುದು ತಪ್ಪು ಕಲ್ಪನೆ. ಬಹಳ ಹಿಂದೆಯೆ ಪತ್ನಿ ಜತೆ ಮಲೇಷ್ಯಾ ಪ್ರವಾಸ ಮಾಡಿದ್ದೆ. ಆಗಲೇ ಕ್ಯಾಸಿನೋಗೆ ಭೇಟಿ ನೀಡಿದ್ದೆ. ಅಲ್ಲಿ ಅಂತಹದ್ದೇನೂ ಕಂಡು ಬಂದಿರಲಿಲ್ಲ. ಬೆಂಗಳೂರಿನಲ್ಲಿ ಬೆಳಗಿನ ಜಾವ ಐದು ಗಂಟೆಯವರೆಗೂ ನಡೆಯುವ ಡಾನ್ಸ್ ಬಾರ್‌ಗಳಲ್ಲಿ ಡ್ರಗ್ಸ್‌ ಬಳಕೆ ಇದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು