ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆಗೆ ಧರ್ಮವಿಲ್ಲ, ಕೊಲೆಗಡುಕ ಶಕ್ತಿಗಳ ಮುಂದೆ ಸರ್ಕಾರ ಮಂಡಿಯೂರಿದೆ: ಎಚ್‌ಡಿಕೆ

ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಬಜರಂಗದಳದ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಖಂಡಿಸಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹತ್ಯೆ ಪ್ರಕರಣಗಳನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ರಾಜ್ಯದಲ್ಲಿ ಯುವಕರ ಕೊಲೆಗಳ ಸರಣಿಯೇ ಮುಂದುವರಿದಿದ್ದು, ಇನ್ನೊಂದು ಜೀವ ಹೋಗಿದೆ. ಈ ಹತ್ಯಾಕಾಂಡಕ್ಕೆ ಕೊನೆಯೇ ಇಲ್ಲವೇ? ಕೊಲೆ ಅದ ಮೇಲೆ ನಡೆಯುವ ಹೇಳಿಕೆಗಳ ಭರಾಟೆ, ಕೂಗಾಟದಿಂದ ಪ್ರಯೋಜನ ಏನು? ಶಿವಮೊಗ್ಗದಲ್ಲಿ ಹರ್ಷ ಕೊಲೆ ಅದ ಮೇಲೆ ಬಿಜೆಪಿ ಸರ್ಕಾರ ಮೈಮರೆತಿದ್ದು ಯಾಕೆ’ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

‘ಪ್ರತಿ ಕೊಲೆ ಅದ ಮೇಲೆಯೂ ಮೈ ಕೊಡವಿಕೊಂಡು ಎದ್ದೇಳುವ ಬಿಜೆಪಿ ಸರ್ಕಾರ, ಕೊಲೆಯೇ ಆಗದಂತೆ ತಡೆಯುವ ಪ್ರಯತ್ನ ಮಾಡುತ್ತಿಲ್ಲ, ಏಕೆ? ಕೊಲೆಗಳೆಂದರೆ ಕೆಲವರಿಗೇಕೆ ಇಷ್ಟೊಂದು ಇಷ್ಟ? ಚುನಾವಣೆ ಹತ್ತಿರ ಆದಂತೆಲ್ಲ ನೆತ್ತರ ಓಕುಳಿ ಹರಿಯುತ್ತಿದೆ! ಈ ನೆತ್ತರ ಮೇಲೆ ರಾಜಕೀಯ ಆಟ ವಿಜೃಂಭಿಸುತ್ತಿದೆ’ ಎಂದು ಎಚ್‌ಡಿಕೆ ಆಕ್ರೋಶ ಹೊರಹಾಕಿದ್ದಾರೆ.

‘ಈ ಮೊದಲು ಕೊಲೆಯಾಗಿದ್ದ ಮಸೂದ್ ಕೂಡ ಬಡವ. ಈಗ ಕೊಲೆಯಾದ ಪ್ರವೀಣ್ ನೆಟ್ಟಾರು ಕೂಡ ಬಡ ಕುಟುಂಬದವರೇ. ಶ್ರಮಜೀವಿಗಳ ಕುಟುಂಬದ ಮಕ್ಕಳೇ ಸಾವಿಗೆ ತುತ್ತಾಗುತ್ತಿದ್ದಾರೆ! ರಾಜಕಾರಣಿಗಳು, ಸಂಘಟನೆಗಳ ಮುಖಂಡರ ಮಕ್ಕಳು ಇಂಥ ಗಲಾಟೆಗಳಲ್ಲಿ ಕಾಣುವುದೇ ಇಲ್ಲ’ ಎಂದು ಎಚ್‌ಡಿಕೆ ಕುಟುಕಿದ್ದಾರೆ.

‘ಹಿಂಸೆಗೆ ಜಾತಿ, ಧರ್ಮ ಎಂಬುದಿಲ್ಲ. ರಕ್ತಪಿಪಾಸುಗಳಿಗೆ ಮಾನವೀಯತೆ ಇಲ್ಲ. ಕೊಲೆಗಡುಕ ಶಕ್ತಿಗಳ ಮುಂದೆ ಸರ್ಕಾರ ಕೋಲೆ ಬಸವನಂತೆ ಆಗಿದೆ. ಈ ಕೊಲೆಗಳ ಹಿಂದಿರುವ ಕಾಣದ ಕೈಗಳಿಗೆ ಕೊಳ ಹಾಕಲು ಧೈರ್ಯ ಇಲ್ಲ. ಈ ಅಸಹಾಯಕತೆಗೆ ಕಾರಣ ಏನು’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಅಂಕೆಯೇ ಇಲ್ಲದ ಹಂತಕರ ಆಟಕ್ಕೆ ಇತಿಶ್ರೀ ಹಾಡಿ, ಹೆಡೆಮುರಿ ಕಟ್ಟಬೇಕು. ಅದು ಬಿಟ್ಟು ಅಬ್ಬರದ ಹೇಳಿಕೆಗಳಿಂದ ಉಪಯೋಗವೇನು? ಪ್ರತಿ ಕೊಲೆಗೂ ಕೋಮು ಬಣ್ಣ ಹಚ್ಚುವ ನಾಯಕರ ರಾಜಕೀಯ ತಲೆಯಲ್ಲಿ ಭಯಂಕರ ದುರುದ್ದೇಶವೇ ಅಡಗಿದೆ’ ಎಂದು ಎಚ್‌ಡಿಕೆ ಗುಡುಗಿದ್ದಾರೆ.

‘ಕರ್ನಾಟವು ಸರ್ವ ಜನಾಂಗದ ಶಾಂತಿಯ ತೋಟ. ಶಾಂತಿ, ಸೌಹಾರ್ದತೆ, ಸಹಿಷ್ಣುತೆಯ ಬೀಡು. ಭಾವನಾತ್ಮಕ ವಿಷಯಗಳಿಂದ ಬಂಡವಾಳ ಹೂಡಿಕೆಯಲ್ಲಿ ಈಗಾಗಲೇ ರಾಜ್ಯಕ್ಕೆ ಹೊಡೆತ ಬಿದ್ದಿದೆ. ಹೊಸ ಕೈಗಾರಿಕೆಗಳು ಬರುತ್ತಿಲ್ಲ’ ಎಂದು ಕುಮಾಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

‘ಶಾಂತಿ, ಸುವ್ಯಸ್ಥೆ ಸಮಸ್ಯೆಯಿಂದ ಆರ್ಥಿಕ ಹಿಂಜರಿತ ಉಂಟಾಗಿ ಕೈಗಾರಿಕೆಗಳು ವಲಸೆ ಹೋದರೆ ಎದುರಾಗುವ ನಿರುದ್ಯೋಗ ಸಮಸ್ಯೆಗೆ ಯಾರು ಹೊಣೆ ಆಗುತ್ತಾರೆ? ನಿರುದ್ಯೋಗವೇ ಇಂಥ ಘಟನೆಗಳಿಗೆ ಕಾರಣ. ಹತಾಶ ಯುವಕರ ಮನಸ್ಸು ಕೆಡಿಸಲಾಗುತ್ತಿದೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT