ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ಬನ್ನಿ: ಹಿಂದೂ ಸಂಘಟನೆಗಳಿಗೆ ಎಚ್‌ಡಿಕೆ ಸವಾಲು

Last Updated 4 ಏಪ್ರಿಲ್ 2022, 18:38 IST
ಅಕ್ಷರ ಗಾತ್ರ

ಬೆಂಗಳೂರು:‘ಬೆಲೆ ಏರಿಕೆ ಬಗ್ಗೆ ಮಾತನಾಡದ ಹಿಂದೂ ಸಂಘಟನೆಗಳು ಹಿಜಾಬ್, ಹಲಾಲ್ ಬಗ್ಗೆ ಮಾತನಾಡುತ್ತಿವೆ. ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡೋಣ ಬನ್ನಿ, ನಿಮ್ಮ ಜತೆ ನಾನೂ ಬರುತ್ತೇನೆ‘ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು,ಬೆಲೆ ಏರಿಕೆ ದಿನೆ ದಿನೇ ಹೆಚ್ಚುತ್ತಲೇ ಇದೆ. ತೈಲ ಬೆಲೆ ಪ್ರತಿದಿನವೂ ಹೆಚ್ಚುತ್ತಿದೆ. ಸಿಮೆಂಟ್, ಕಬ್ಬಿಣದ ಬೆಲೆ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ಬಗ್ಗೆ ಮಾತನಾಡದ ಹಿಂದೂ ಸಂಘಟನೆಗಳು ಹಿಜಾಬ್, ಹಲಾಲ್ ಬಗ್ಗೆ ಮಾತನಾಡುತ್ತಿವೆ ಎಂದು
ಟೀಕಿಸಿದರು.

‘ಬಿಜೆಪಿ ಹಾಗೂ ಅದರ ಅಂಗಸಂಸ್ಥೆಗಳಿಗಿಂತ ನಾವೇ ಧರ್ಮವನ್ನು ಹೆಚ್ಚು ನಂಬುತ್ತೇವೆ. ನಾವು ಕನ್ನಡಿಗರ ಸ್ವಾಭಿಮಾನ, ಕನ್ನಡ ಅಸ್ಮಿತೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಹನುಮ ಜಯಂತಿಯಂದು ಹೋರಾಟ ಆರಂಭಿಸುತ್ತೇವೆ’ ಎಂದರು.

‘ಒಂದು ತಿಂಗಳಿನಿಂದ ವಿವಾದಗಳು ಸೃಷ್ಟಿಯಾಗಿವೆ. ಹಿಜಾಬ್‌ನಿಂದ ಹಲಾಲ್‌ವರೆಗೆ ಬಂದಿದೆ. ಹೊಸದಾಗಿ ಆಜಾನ್ ವಿಷಯವೂ ಬಂದಿದೆ. ಕಾಂಗ್ರೆಸ್ ನಾಯಕರು ಇದರ ಬಗ್ಗೆಯೂ ಮಾತನಾಡಬೇಕಲ್ಲವೇ?’ ಎಂದು ಪ್ರಶ್ನಿಸಿದರು.

‘ಹಲಾಲ್, ಜಟ್ಕಾ ಹಿಡಿದುಕೊಂಡು ಬಿಜೆಪಿ ಕುಳಿತಿದೆ. ಅದಕ್ಕೆ ಅಂಜಿಕೊಂಡು ಕಾಂಗ್ರೆಸ್‌ ಸುಮ್ಮನಿದೆ. ಕಾಂಗ್ರೆಸ್‌ ನಾಯಕರಿಗೆ ಧ್ವನಿಯೇ ಇಲ್ಲ. ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಅಹಿತಕರ ಬೆಳವಣಿಗೆಗಳಿಗೆ ಬಿಜೆಪಿಯಷ್ಟೇ ಕಾಂಗ್ರೆಸ್ ಕೂಡಾ ಕಾರಣ’ ಎಂದರು.

‘ಹಿಜಾಬ್, ಹಲಾಲ್ ವಿಷಯಕ್ಕೆ ಬೆಂಕಿ ಹಚ್ಚಿಕೊಟ್ಟವರು ಕಾಂಗ್ರೆಸ್‌ನವರು. ಮುಸ್ಲಿಮರು ಯಾಕೆ ಕಾಂಗ್ರೆಸ್ ಪಕ್ಷವನ್ನು ನಂಬಬೇಕು’ ಎಂದು ಪ್ರಶ್ನಿಸಿದ ಅವರು, ‘ನಾವು ಈ ವಿಚಾರವಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ. ಕಾಂಗ್ರೆಸ್ ಅಲ್ಪಸಂಖ್ಯಾತರ ನಂಬಿಕೆ ಕಳೆದುಕೊಂಡಿದೆ’
ಎಂದರು.

‘ಒಬ್ಬ ಹೊರಟ್ಟಿ ಹೋದರೆ ಇನ್ನೊಬ್ಬ ಹೊರಟ್ಟಿ ಬರುತ್ತಾರೆ’: ‘ಹೊರಟ್ಟಿ, ಕೋನರಡ್ಡಿ ಇದ್ದಾಗ ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಪಕ್ಷ ಹೇಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಹೊರಟ್ಟಿ ಹೋದರೆ ಇನ್ನೊಬ್ಬರು ಹೊರಟ್ಟಿ ಬರುತ್ತಾರೆ’ ಎಂದು ಕುಮಾರಸ್ವಾಮಿ ಹೇಳಿದರು.

ಬಸವರಾಜ ಹೊರಟ್ಟಿ ಬಿಜೆಪಿಯತ್ತ ಮುಖ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸಲಿದೆ. ಅದನ್ನು ಎದುರಿಸುವುದು ಕಷ್ಟವಾಗಲಿದೆ, ಏನು ಮಾಡಲಿ ಎಂದು ಹೊರಟ್ಟಿ ಕೇಳಿದ್ದರು. ನಿಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಿ ಎಂದು ನಾನು ಸಲಹೆ ನೀಡಿದ್ದೆ‘ ಎಂದರು.

‘ಹೊರಟ್ಟಿ ಅವರನ್ನು ಸಭಾಪತಿ ಮಾಡಿದ್ದು ಬಿಜೆಪಿಗೆ ಹೋಗುವುದಕ್ಕಾ? ಬಿಜೆಪಿಗೆ ಸೇರಲು ಅವರೇ ತೀರ್ಮಾನ ಮಾಡಿರುವಾಗ ನಾನೇನು ಮಾಡಲಿ? ಯಾರೂ ಇಲ್ಲದಿದ್ದರೂ ನಮ್ಮ ಪಕ್ಷ ಉಳಿದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT