ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ತೀರ್ಮಾನ ‘ಕೇಶವ ಕೃಪಾ’ದಲ್ಲಿ: ಎಚ್‌.ಡಿ.ಕುಮಾರಸ್ವಾಮಿ

Last Updated 25 ಮೇ 2022, 20:08 IST
ಅಕ್ಷರ ಗಾತ್ರ

ಮೈಸೂರು/ಹಾಸನ: ‘ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಕೇಶವಕೃಪಾದಲ್ಲಿ ತೆಗೆದುಕೊಳ್ಳುವ ತೀರ್ಮಾನದಂತೆ ನಡೆದುಕೊಳ್ಳುತ್ತಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಮಂಗಳೂರಿನ ಮಳಲಿ ಮಸೀದಿ ತಾಂಬೂಲ ಪ್ರಶ್ನೆ ವಿಚಾರದ ಕುರಿತು ಬುಧವಾರ ಇಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ‘ತಾಂಬೂಲ ಪ್ರಶ್ನೆಗಿಂತ ಕೇಶವಕೃ‍ಪಾದಲ್ಲಿ ತೆಗೆದುಕೊಳ್ಳುವ ನಿರ್ಧಾರವೇ ಮುಖ್ಯವಾಗುತ್ತದೆ. ಅಲ್ಲಿಂದ ಬರುವ ಸಂದೇಶಗಳನ್ನು ಇವರು ಪಾಲಿಸುವರು. ಇಂತಹ ವಾತಾವರಣದಿಂದ ದೇಶಕ್ಕೆ ಉತ್ತಮ ಭವಿಷ್ಯ ಇಲ್ಲ. ಇನ್ನೂ ಒಂದು ವರ್ಷ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿರುತ್ತವೆ‌. ಶಾಂತಿ, ಸಾಮರಸ್ಯ ಮತ್ತಷ್ಟು ಹದಗೆಡಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ‘ದೇವರು ಕನಸಲ್ಲಿ ಬಂದು ನನ್ನ ಮೂಲ ಸ್ಥಾನ ಇಲ್ಲಿದೆ ಅಂತ ಇವರಿಗೆ ಹೇಳಿದನಾ? ಟಿಪ್ಪು ಕಾಲದಲ್ಲಿ ಹಲವು ಹಿಂದೂ ದೇವಾಲಯಗಳಿಗೆ ಭೂಮಿ ದಾನ ಮಾಡಿದ್ದ. ಆ ಸಮಾಜದವರು ಬಂದು ಕೇಳಿದರೆ ನೀವು ಭೂಮಿ ಬಿಟ್ಟುಕೊಡ್ತೀರಾ? ಇಂತಹ ವಿವಾದಗಳನ್ನು ಬದಿಗಿಟ್ಟು, ಜನರ ಬದುಕು ಕಟ್ಟಿಕೊಡಿ’ ಎಂದು ಸಲಹೆ ನೀಡಿದರು.

ತಮ್ಮ ಪಾಠ ಕೈಬಿಡಬೇಕೆಂಬ ದೇವನೂರ ಮಹಾದೇವ ಮನವಿ ಕುರಿತು ಪ್ರತಿಕ್ರಿಯಿಸಿ, ‘ಇದು ಅವರ ವೈಯಕ್ತಿಕ ವಿಚಾರ. ತಮ್ಮ ಭಾವನೆಗಳನ್ನು ಯಾವುದಕ್ಕೂ ಉಪಯೋಗ ಮಾಡಿಕೊಳ್ಳಬಾರದೆಂದು ಲೇಖಕರು ಹೇಳಿದ್ದರೆ ಅದನ್ನು ಗೌರವಿಸಬೇಕು’ ಎಂದರು.

‘ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಭಾವೈಕ್ಯ ಹಾಳುಗೆಡುವುವ ಸನ್ನಿವೇಶವನ್ನು ಸರ್ಕಾರ ಹುಟ್ಟು ಹಾಕಿದೆ’ ಎಂದು ದೂರಿದರು.

‘ಪಠ್ಯ ಪುಸ್ತಕಗಳಲ್ಲಿ ಕೆಲವರ ವಿಷಯಗಳನ್ನು ವೈಭವೀಕರಿಸಲಾಗುತ್ತಿದೆ. ಹಲವು ಮಹನೀಯರ ಸಂಗತಿಗಳನ್ನು ಕೈ ಬಿಡಲಾಗುತ್ತಿದೆ. ಸತ್ಯಾಂಶ ತಿರುಚುವ ಮೂಲಕ ಶಾಲಾ ಪಠ್ಯ ಪುಸ್ತಕದಲ್ಲಿ ಬದಲಾವಣೆ ತರಲು ಹೊರಟಿದ್ದಾರೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT