ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಟ್ರೋ ರವಿ ಜತೆ ಸಚಿವರ ನಂಟು: ಎಚ್‌.ಡಿ.ಕುಮಾರಸ್ವಾಮಿ

Last Updated 4 ಜನವರಿ 2023, 16:05 IST
ಅಕ್ಷರ ಗಾತ್ರ

ಬೆಂಗಳೂರು: ‘ಮೈಸೂರಿನಲ್ಲಿ ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿಯ ಮಹಿಳೆಯನ್ನು ಮದುವೆಯಾಗಿ ವಂಚಿಸಿರುವ ಪ್ರಕರಣದ ಆರೋಪಿಯಾಗಿರುವ ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಜತೆ ರಾಜ್ಯ ಸರ್ಕಾರದ ಹಲವು ಸಚಿವರು ನಂಟು ಹೊಂದಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘2018ರಲ್ಲಿ ನನ್ನ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿಸಲು ಯಾರನ್ನು ಬಳಸಿಕೊಳ್ಳಲಾಗಿತ್ತು? ಮುಂಬೈಗೆ ಹೋಗಿದ್ದವರ ಮೋಜು, ಮಸ್ತಿಗೆ ಸಕಲ ವ್ಯವಸ್ಥೆ ಮಾಡಿದವರು ಯಾರು? ಸ್ಯಾಂಟ್ರೋ ರವಿ ಮತ್ತು ರಾಜ್ಯದ ಕೆಲವು ಪ್ರಭಾವಿ ಸಚಿವರ ನಡುವೆ ಇರುವ ಸಂಬಂಧವೇನು? ಎಂಬುದರ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ನನ್ನ ಸರ್ಕಾರ ಉರುಳಿಸಲು 17 ಮಂದಿಯನ್ನು ಮುಂಬೈಗೆ ಕರೆದುಕೊಂಡು ಹೋದ ವ್ಯಕ್ತಿ ಯಾರು? ಕರ್ನಾಟಕವನ್ನು ರಕ್ಷಣೆ ಮಾಡುವುದು ಜೆಡಿಎಸ್‌ ಪಕ್ಷದಿಂದ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಿದ್ದರು. ಈ ರಾಜ್ಯವು ಬಿಜೆಪಿ ನಾಯಕರಿಂದ ಉಳಿಯಲು ಸಾಧ್ಯವಿಲ್ಲ. ಈ ಸರ್ಕಾರದ ಮಂತ್ರಿಗಳ ಹಣೆಬರಹ ಇಲ್ಲಿದೆ ನೋಡಿ’ ಎಂದು ಹಲವು ಸಚಿವರು ಸ್ಯಾಂಟ್ರೋ ರವಿ ಜತೆಗಿರುವ ಫೋಟೊಗಳನ್ನು ಪ್ರದರ್ಶಿಸಿದರು.

‘ಸ್ಯಾಂಟ್ರೋ ರವಿಗೆ ಐದು ಹೆಸರುಗಳಿವೆ. ಮೈಸೂರು, ಬೆಂಗಳೂರಿನಲ್ಲಿ ಆತನ ವಿರುದ್ಧ ಪ್ರಕರಣಗಳಿವೆ. ಇತ್ತೀಚಿನವರೆಗೂ ಕುಮಾರಕೃಪಾ ಅತಿಥಿ ಗೃಹದಲ್ಲೇ ಕುಳಿತು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಿದ್ದಾನೆ. ಆತನಿಗೆ ಅಲ್ಲಿ ಕೊಠಡಿ ನೀಡಿದವರು ಯಾರು? ಅದಕ್ಕೆ ಶಿಫಾರಸು ಮಾಡಿದ್ದವರು ಯಾರು? ಎಂಬುದನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ರಾಜ್ಯದ ಜನತೆಗೆ ತಿಳಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಚಾರದಲ್ಲಿ ಧಮ್‌, ತಾಕತ್ತು ಪ್ರದರ್ಶಿಬೇಕು’ ಎಂದು ಒತ್ತಾಯಿಸಿದರು.

‘ಪೊಲೀಸ್‌ ಅಧಿಕಾರಿಗಳಿಗೆ ಆ ವ್ಯಕ್ತಿ ಬೆದರಿಕೆ ಹಾಕಿರುವ ದಾಖಲೆಗಳಿವೆ. ಮುಖ್ಯಮಂತ್ರಿಯೇ ನನ್ನನ್ನು ಸರ್‌ ಎನ್ನುತ್ತಾರೆ. ನೀನೂ ನನ್ನನ್ನು ಸರ್‌ ಎಂದು ಕರೆಯಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದ. ಈತನ ಹಿಂದೆ ಅಡಗಿ ಕುಳಿತಿದ್ದ ವ್ಯಕ್ತಿ ಯಾರು? ಅಧಿಕಾರಿಗಳ ವರ್ಗಾವಣೆ ಹೆಸರಿನಲ್ಲಿ ಆತ ನಡೆಸಿದ್ದ ವ್ಯವಹಾರಗಳು ಏನು? ಎಲ್ಲವೂ ತನಿಖೆಯಾಗಲಿ’ ಎಂದರು.

‘ಲಿಂಬಾವಳಿ ಆಪ್ತ ಯಾರು?’

‘ಉದ್ಯಮಿ ಪ್ರದೀಪ್‌ ಆತ್ಮಹತ್ಯೆ ಪ್ರಕರಣದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಗೋಪಿ ಮತ್ತು ಶಾಸಕ ಅರವಿಂದ ಲಿಂಬಾವಳಿ ನಡುವಿನ ಸಂಬಂಧವೇನು? ಆ ವ್ಯಕ್ತಿಯ ಮೂಲಕ ಬಿಲ್ಡರ್‌ಗಳಿಂದ ₹ 50 ಕೋಟಿಯಿಂದ ₹ 60 ಕೋಟಿ ಸಂಗ್ರಹ ಆಗಿರುವ ಮಾಹಿತಿ ಇದೆ’ ಎಂದು ಕುಮಾರಸ್ವಾಮಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT