ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ಅಧಿಕಾರದ ನಶೆ ಏರಿಲ್ಲ: ಎಚ್‌ಡಿಕೆ

Last Updated 2 ಸೆಪ್ಟೆಂಬರ್ 2020, 20:20 IST
ಅಕ್ಷರ ಗಾತ್ರ

ರಾಮನಗರ: ‘ನನಗೆ ಯಾವುದೇ ರೀತಿಯ ಅಧಿಕಾರದ ನಶೆ ಏರಿಲ್ಲ. ಅದನ್ನು ಏರಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.‌ ಕುಮಾರಸ್ವಾಮಿ ಸಚಿವ ಸಿ.ಟಿ. ರವಿ ಹೇಳಿಕೆಗೆ ತಿರುಗೇಟು ನೀಡಿದರು.

ಚನ್ನಪಟ್ಟಣದಲ್ಲಿ ಬುಧವಾರ ಪತ್ರಕರ್ತರ ‌ ಜೊತೆಯಲ್ಲಿ ಮಾತನಾಡಿದ ಅವರು ‘ನನ್ನ ಸರ್ಕಾರ ಪತನ ಆಗಲು ಅಕ್ರಮ ಮಾಫಿಯಾ ಹಣವೇ ಕಾರಣ ಎಂದು ಹೇಳಿರುವುದು ನಿಜ. ಆದರೆ ಅದಕ್ಕೆ ಬಿಜೆಪಿಯವರೇ ಕಾರಣ ಎಂದು ಎಲ್ಲಿಯೂ ಹೇಳಿಲ್ಲ. ಅಕ್ರಮ ಕ್ರಿಕೆಟ್ ಬೆಟ್ಟಿಂಗ್‌, ಅಕ್ರಮ ಡಾನ್ಸ್‌ ಬಾರ್‌ ಮೊದಲಾದ ಮಾಫಿಯಾಗಳಿಂದ ಹಣ ಸಂಗ್ರಹಿಸಿ ಅದನ್ನು ಕಾಂಗ್ರೆಸ್‌ನ ಅತೃಪ್ತರನ್ನು ಸೆಳೆಯಲು ಬಳಸಿಕೊಳ್ಳಲಾಗಿತ್ತು. ಆದರೆ ಬಿಜೆಪಿಯವರೇ ಹಣ ಸಂಗ್ರಹಿಸಿದ್ದಾರೆ ಎಂದು ಹೇಳಿಲ್ಲ. ಬಿಜೆಪಿಯವರು ತಾವು ಹೆಗಲು ಮುಟ್ಟಿಕೊಳ್ಳುವುದು ಬೇಡ’ ಎಂದರು.

ಕಾಂಗ್ರೆಸ್ ವಿಫಲ: ‘ಯಾವುದೇ ಆರೋಪ‌ ಮಾಡಿದರೆ ಅದಕ್ಕೆ ಸೂಕ್ತ ದಾಖಲೆ ಇರಬೇಕು. ಆದರೆ ಈ ವಿಚಾರದಲ್ಲಿ ಸರಿಯಾದ ದಾಖಲೆ ತೋರಿಸುವಲ್ಲಿ ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್ ವಿಫಲವಾಗಿದೆ. ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ‌ ಕೆಲಸ‌‌ ಮಾಡಿದ್ದು‌ ನಾನು. ₹25 ಸಾವಿರ ಕೋಟಿ ಸಾಲ ಮನ್ನಾ ಮಾಡಿದರೂ ಯಾರೂ ನನ್ನನ್ನು ನೆನಪಿಸಿಕೊಳ್ಳಲಿಲ್ಲ. ಆದರೆ ಹೆಸರು‌ ಮಾಡಿದ್ದು ಮಾತ್ರ ಕಾಂಗ್ರೆಸ್’ ಎಂದರು.

ತನಿಖೆ ಮೇಲೆ ಭರವಸೆ ಇಲ್ಲ‌:‘ಸದ್ಯ ನಡೆದಿರುವ ಚಿತ್ರರಂಗದಲ್ಲಿನ ಡ್ರಗ್‌ ದಂಧೆಯ ತನಿಖೆ ಬಗ್ಗೆ ನನಗೆ ಭರವಸೆ ಇಲ್ಲ. ಉಳಿದ ತನಿಖೆಗಳಂತೆಯೇ ಇದೂ ಹಳ್ಳ ಹಿಡಿಯಬಹುದು’ ಎಂದು ಎಚ್.ಡಿ.‌ ಕುಮಾರಸ್ವಾಮಿ ಹೇಳಿದರು.
‘ಮಂಗಳೂರು ಗಲಭೆ ಆಗಿ ವರ್ಷ ಆಯಿತು. ಅದರ ಮ್ಯಾಜಿಸ್ಟ್ರೇಟ್‌ ತನಿಖೆ ಹಳ್ಳ ಹಿಡಿಯಿತು. ಮೊನ್ನೆ ಡಿ.ಜೆ. ಹಳ್ಳಿ ಗಲಭೆ ಆಯ್ತು. ಈಗ ಡ್ರಗ್‌ ದಂಧೆ ತನಿಖೆ ನಡೆದಿದೆ. ಆದರೆ ಈ ಘಟನೆಗಳ ಕಿಂಗ್ ಪಿನ್ ಗಳನ್ನು ಬಂಧಿಸಲು ಸರ್ಕಾರಕ್ಕೆ ದಿಟ್ಟತನ ಇಲ್ಲ’ ಎಂದು ಕುಟುಕಿದರು‌.

ಯೋಗೇಶ್ವರ್‌ಗೆ ತಿರುಗೇಟು:'ಕ್ಷೇತ್ರದ ಸಮಸ್ಯೆ ಬಗೆಹರಿಸಲು ಶಾಸಕನಾಗಿ ನಾನಿದ್ದೇನೆ. ಯೋಗೇಶ್ವರ್‌ ಸಿನಿಮಾ ರಂಗದಲ್ಲಿನ ಸೇವೆಗಾಗಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಅವರು ಕ್ಷೇತ್ರದ ಜನರ ಚಿಂತೆ ಬಿಟ್ಟು ಕಲಾವಿದರ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT