ಶನಿವಾರ, ಮೇ 15, 2021
26 °C
ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ

ನೈಟ್ ಕರ್ಫ್ಯೂ ನಿರ್ಧಾರ ಬಹಳ ವಿವೇಚನೆಯಿಂದ ಕೈಗೊಳ್ಳಲಾಗಿತ್ತು: ಡಾ.ಕೆ.ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೈಟ್ ಕರ್ಫ್ಯೂ ನಿರ್ಧಾರವನ್ನು ಬಹಳ ವಿವೇಚನೆಯಿಂದಲೇ‌ ಕೈಗೊಳ್ಳಲಾಗಿತ್ತು. ಅದೇನೂ ರಾಜಕೀಯ ನಿರ್ಧಾರ ಅಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು,‌ ಮಾಧ್ಯಮಗಳಲ್ಲಿ ಎಡಬಿಡಂಗಿ ಸರ್ಕಾರ ಎನ್ನಲಾಗಿದೆ. ಆದರೆ ಇದೇ‌ ನಮ್ಮ ಸರ್ಕಾರ ಉತ್ತಮವಾದ ನಿರ್ಧಾರಗಳಿಂದ ಕೊರೊನಾ ನಿಯಂತ್ರಣಕ್ಕೆ ತಂದಿದೆ. ರಾಜ್ಯ ಸರ್ಕಾರದ ಕ್ರಮಗಳಿಂದಾಗಿ ಕೊರೊನಾ ಸೋಂಕಿಗೊಳಗಾದವರಲ್ಲಿ 97.5% ರಷ್ಟು ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ 1.22% ಗೆ ಇಳಿಕೆಯಾಗಿದೆ. ಯುಕೆಯಲ್ಲಿ ಲಾಕ್‌ಡೌನ್ ಆಗಿದೆ ಹಾಗೂ ಜರ್ಮನಿಯಲ್ಲಿ ರಾತ್ರಿ ಕರ್ಫ್ಯೂ ಆಗಿದೆ. ಹಾಗೆಂದು ಅಲ್ಲಿ ಇರುವವರಿಗೆ ಬುದ್ಧಿ ಇಲ್ಲ ಎಂದರ್ಥವಲ್ಲ. ನಮ್ಮ ಸರ್ಕಾರ ಯಾವುದೇ ರಾಜಕೀಯ ತೀರ್ಮಾನ ಕೈಗೊಂಡಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದವರ ಜೊತೆ ಕೂಲಕಂಷವಾಗಿ ಚರ್ಚಿಸಿ ಪ್ರತಿಯೊಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾತ್ರಿ ಕರ್ಫ್ಯೂ ಕುರಿತು ಕೂಡ ಹಲವಾರು ಬಾರಿ ಚರ್ಚಿಸಿ, ಜನರ ಆರೋಗ್ಯದ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದರು.

ಆರ್ಥಿಕ ಚಟುವಟಿಕೆ ಬಂದ್ ಮಾಡಿದರೆ ಸರ್ಕಾರಕ್ಕೆ ನಷ್ಟವಾಗುತ್ತದೆ. ಆದರೂ ಜನರ ಆರೋಗ್ಯಕ್ಕಾಗಿ ಕೆಲ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ. ಅನೇಕರು ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ಮರೆತಿದ್ದಾರೆ. ಇಂತಹ ಸಮಯದಲ್ಲಿ ಜನರನ್ನು ಎಚ್ಚರಿಸುವುದು ನಮ್ಮ ಕರ್ತವ್ಯ ಎಂದರು.

ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರಲ್ಲಿ 15 ಜನರಿಗೆ ಕೊರೊನಾ ಪಾಟಿಸಿವ್ ಆಗಿದೆ ಎಂದು ತಿಳಿದುಬಂದಿದ್ದು, ಹತ್ತು ಜನರ ಮಾದರಿಯನ್ನು ನಿಮ್ಹಾನ್ಸ್‌ಗೆ ಕಳುಹಿಸಲಾಗಿದೆ ಎಂದು ಹೇಳಿದರು.

ಜೆನೆಟಿಕ್ ಸ್ವೀಕೆನ್ಸ್ ಮಾಡಲು 2-3 ದಿನ ಬೇಕಾಗುತ್ತದೆ. ಒಂದು ವೇಳೆ ಅವರಲ್ಲಿ ಹೊಸ ಪ್ರಭೇದದ ವೈರಸ್ ಇರುವುದು ಖಚಿತವಾದರೆ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ದಸರಾ, ದೀಪಾವಳಿ, ಗಣೇಶ ಚತುರ್ಥಿ ಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ. ಆದರೆ ಹೊಸ ವರ್ಷದಂದು ಯುವಜನತೆ ಮೋಜು ಮಸ್ತಿ ಮಾಡಲೇಬೆಕೆನ್ನುವಂತೆ ಪ್ರತಿಪಕ್ಷಗಳವರು ವ್ಯಾಖ್ಯಾನ ಮಾಡಿದ್ದಾರೆ. ಜನರಿಗೆ ತೊಂದರೆಯಾದರೆ ಅವರೇ ಜವಾಬ್ದಾರಿ ಹೊರುತ್ತಾರೆಯೇ? ಎಂದು ಸುಧಾಕರ್ ಪ್ರಶ್ನಿಸಿದರು. 

ಸಂಸದ ಡಿ.ಕೆ.ಸುರೇಶ್ ನೀಡುವ ಸರ್ಟಿಫಿಕೇಟ್ ಅಗತ್ಯವಿಲ್ಲ. ಜಾಮೀನಿನ ಮೇಲೆ ಹೊರಗೆ ಇರುವವರೇ ಆರೋಪ ಮಾಡುತ್ತಾರೆ. ಮೋಜು, ಮಸ್ತಿ, ಭ್ರಷ್ಟಾಚಾರದ ಆರೋಪ ಹೊತ್ತುಕೊಂಡು ಜಾಮೀನಿನ ಮೇಲೆ ಹೊರಗೆ ಇರುವವರು ಯಾರು ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು