ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿಯಮ ಉಲ್ಲಂಘನೆಗೆ ₹10 ಸಾವಿರವರೆಗೆ ದಂಡ: ಹೊಸ ಮಾರ್ಗಸೂಚಿಯಲ್ಲೇನಿದೆ?

ಹೊಸ ಅಧಿಸೂಚನೆ ಬಗ್ಗೆ ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಮಾಹಿತಿ
Last Updated 24 ಮಾರ್ಚ್ 2021, 18:55 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ನಿಯಮ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಬುಧವಾರ ಹೊಸ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಧಾರ್ಮಿಕ, ರಾಜಕೀಯ ಸಮಾವೇಶಗಳಲ್ಲಿ ಮಾಸ್ಕ್ ಧರಿಸದಿದ್ದರೆ ಮತ್ತು ಅಂತರ ಕಾಪಾಡದಿದ್ದರೆ ಆಯೋಜಕರನ್ನೇ ಜವಾಬ್ದಾರಿ ಮಾಡಲಾಗುವುದು ಎಂದು ತಿಳಿಸಿದೆ.

ಮಾಸ್ಕ್ ಧರಿಸದ ಮತ್ತು ಅಂತರ ಕಾಪಾಡದವರ ವಿರುದ್ಧ ಬಿಬಿಎಂಪಿ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ₹250 ಮತ್ತು ಇತರ ಪ್ರದೇಶಗಳಲ್ಲಿ ₹100 ದಂಡ ವಿಧಿಸಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾರ್ಷಲ್‌ಗಳು, ಇತರೆಡೆ ಹೆಡ್ ಕಾನ್‌ಸ್ಟೆಬಲ್ ಹುದ್ದೆಗೂ ಮೇಲಿನ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬಿಲ್ ಕಲೆಕ್ಟರ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದಂಡ ವಸೂಲಿ ಮಾಡುವ ಅಧಿಕಾರ ನೀಡಲಾಗಿದೆ ಎಂದು ಸರ್ಕಾರ ವಿವರಿಸಿದೆ.

ಕಾರ್ಯಕ್ರಮಗಳಲ್ಲಿ ನಿಗದಿಗಿಂತ ಹೆಚ್ಚು ಜನ ಸೇರಿ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಆ ಜಾಗದ ಮಾಲೀಕರ ಜವಾಬ್ದಾರಿ. ಇಂತಹ ಉಲ್ಲಂಘನೆಗಳಿಗೆ ಹವಾನಿಯಂತ್ರಿತವಲ್ಲದ ಸಭಾಂಗಣಗಳಿಗೆ ₹5 ಸಾವಿರ, ಧಾರ್ಮಿಕ, ರಾಜಕೀಯ ರ್‍ಯಾಲಿಗಳು, ಹವಾನಿಯಂತ್ರಿತ ಸಭಾಂಗಣ, ಸ್ಟಾರ್ ಹೋಟೆಲ್‌ಗಳು, ಬ್ರಾಂಡೆಂಡ್ ಅಂಗಡಿಗಳು, ಹೊರಾಂಗಣ ಕಾರ್ಯಕ್ರಮಗಳಿಗೆ ₹10 ಸಾವಿರ ದಂಡ ವಿಧಸಲಾಗುತ್ತದೆ. ಸಭಾಂಗಣದ ಮಾಲೀಕರು ಅಥವಾ ಆಯೋಜಕರು ಈ ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.

ಮಾಹಿತಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಅಧಿಸೂಚನೆ ಬಗ್ಗೆ ಸಾಕಷ್ಟು ಪ್ರಚಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತು.

ಕಾಶಪ್ಪನವರ ವಿರುದ್ಧ ಎಫ್‌ಐಆರ್: ಇದೇ ಫೆ. 21ರಂದು ಪಂಚಮಸಾಲಿ ಸಮುದಾಯದ ರ್‍ಯಾಲಿಯಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪಂಚಮಸಾಲಿ ಮಹಾಸಭಾದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ರ್‍ಯಾಲಿಯಲ್ಲಿ 80 ಸಾವಿರ ಜನ ಜಮಾಯಿಸಿದ್ದರು ಮತ್ತು ಕಾಶಪ್ಪನವರ ಅವರು ಮೇಕ್ರಿ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದ ತನಕ 4 ಸಾವಿರ ಬಂಬಲಿಗರೊಂದಿಗೆ ತೆರಳುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಂತೆ ನೋಡಿಕೊಳ್ಳಬೇಕು ಎಂದು ಸದಾಶಿವನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮತ್ತು ವಿಚಾರಣಾ ನ್ಯಾಯಾಲಯಕ್ಕೆ ಪೀಠ ನಿರ್ದೇಶನ ನೀಡಿತು.

ಎಷ್ಟು ಜನ ಸೇರಬಹುದು?

ಮದುವೆ: ಹೊರಾಂಗಣ–500, ಒಳಾಂಗಣ–200

ಹುಟ್ಟುಹಬ್ಬದ ರೀತಿಯ ಕಾರ್ಯಕ್ರಮ; ಹೊರಾಂಗಣ–100 , ಒಳಾಂಗಣ –50

ಸಾವು ಅಥವಾ ಅಂತ್ಯಕ್ರಿಯೆ; ಹೊರಾಂಗಣ –100, ಒಳಾಂಗಣ –50

ಧಾರ್ಮಿಕ, ರಾಜಕೀಯ ಕಾರ್ಯಕ್ರಮ; ಹೊರಾಂಗಣ– 500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT