ಶುಕ್ರವಾರ, ಆಗಸ್ಟ್ 12, 2022
24 °C
ಮೂಲ್ಕಿಯಲ್ಲಿ ವಿದ್ಯುತ್ ತಂತಿ ತಗುಲಿ ಒಬ್ಬ ಸಾವು

ರಾಜ್ಯದ ವಿವಿಧೆಡೆ ಮುಂದುವರಿದ ವರುಣನ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಸೋಮವಾರ ಧಾರಾಕಾರ ಮಳೆಯಾಗಿದೆ. ಕೆಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲ್ಲೂಕಿನಲ್ಲಿ ಮನೆ ಮೇಲೆ ಬಿದ್ದಿದ್ದ ಮರ ತೆರವು ಮಾಡುವ ವೇಳೆ ವಿದ್ಯುತ್‌ ಸ್ಪರ್ಶದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಕರಾವಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸೋಮವಾರ ನಿರಂತರ ಮಳೆ ಸುರಿಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನವಿಡೀ ಮಳೆ ಸುರಿದಿದೆ. ಮೂಲ್ಕಿ ತಾಲ್ಲೂಕಿನ ಐಕಳದಲ್ಲಿ ಮನೆಯ ಮೇಲೆ ಬಿದ್ದ ಮರ ತೆರವು ಮಾಡುವ ವೇಳೆ ವಿದ್ಯುತ್‌ ಸ್ಪರ್ಶದಿಂದ ಮಾಧವ ಆಚಾರ್ಯ (55) ಮೃತಪಟ್ಟಿದ್ದಾರೆ. ತಾಲ್ಲೂಕಿನಲ್ಲಿ ಹಲವೆಡೆ ವಿದ್ಯುತ್‌ ಕಂಬ ಧರೆಗುರುಳಿವೆ.

ಪುತ್ತೂರು- ಉಪ್ಪಿನಂಗಡಿ ರಸ್ತೆಗೆ ಸೇಡಿಯಾಪು ಬಳಿ ಮರವೊಂದು ಉರುಳಿ ಬಿದ್ದಿದ್ದರಿಂದ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.‌

ಉಪ್ಪಿನಂಗಡಿಯಲ್ಲಿ ಕುಮಾರಧಾರಾ ಮತ್ತು ನೇತ್ರಾವತಿ ಎರಡೂ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಮಳೆಗೆ 20ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಚಿಕ್ಕಮಗಳೂರು ಜಿಲ್ಲೆಯ ಗಿರಿ ಶ್ರೇಣಿ ಭಾಗದಲ್ಲಿ 10, ಮಲೆನಾಡಿನ ವಿವಿಧೆಡೆ 20 ವಿದ್ಯುತ್‌ ಕಂಬಗಳು ಬಿದ್ದಿವೆ. ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆ ಕಡಿತವಾಗಿದೆ.

ಧಾರಾಕಾರ ಮಳೆ: ಕೊಡಗು ಜಿಲ್ಲೆಯಲ್ಲಿ ಸೋಮವಾರವೂ ಧಾರಾಕಾರ ಮಳೆಯಾಗಿದೆ. ಸುಂಟಿಕೊಪ್ಪ ಭಾಗದಲ್ಲಿ ಗಾಳಿ, ಮಳೆಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಹಾಗೂ ಕಾಫಿ ತೋಟದಲ್ಲಿ ಬೃಹತ್ ಮರಗಳು ಧರೆಗುರುಳಿವೆ. ನಿರಂತರ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಏರಿಕೆಯಾಗಿದೆ.

ಮೈಸೂರು ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದೆ.

ಉತ್ತಮ ಮಳೆ: ಧಾರವಾಡ, ಬೆಳಗಾವಿ, ವಿಜಯನಗರ, ಗದಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದ್ದರೆ ಉತ್ತರ ಕನ್ನಡ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮುಂಗಾರು ಮಳೆ ಮತ್ತಷ್ಟು ಚುರುಕುಗೊಂಡಿದೆ. ಹೊನ್ನಾವರ, ಭಟ್ಕಳ, ಕಾರವಾರದಲ್ಲಿ ಧಾರಾಕಾರವಾಗಿ ಮಳೆ ಸುರಿಯಿತು. ಅರಬ್ಬಿ ಸಮುದ್ರದಲ್ಲಿ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಅಂಕೋಲಾ, ಹೊನ್ನಾವರದ ಕೆಲವೆಡೆ ಕಡಲ್ಕೊರೆತದ ಆತಂಕ ಉಂಟಾಗಿದೆ.

ಕುಮಟಾ, ಭಟ್ಕಳ, ಅಂಕೋಲಾ ಭಾಗದಲ್ಲಿ ಭಾನುವಾರ ರಾತ್ರಿಯಿಂದಲೇ ಮಳೆ ಮುಂದುವರಿಯಿತು. ಗೋಕರ್ಣದಲ್ಲಿ ಬೆಳಿಗ್ಗೆಯಿಂದಲೇ ಬೀಸಿದ ರಭಸದ ಗಾಳಿ ಮಳೆಗೆ ಹಲವು ಕಡೆ ನೀರು ನಿಂತಿದೆ. ಮಹಾಬಲೇಶ್ವರ ದೇಗುಲದ ಶಿವನ ಆತ್ಮಲಿಂಗ ಸಹ ಅರ್ಧ ಗಂಟೆ ಮುಳುಗಿತ್ತು. ಆ ಸಮಯದಲ್ಲಿ ಸ್ಥಳೀಯರಿಗೆ ಪೂಜೆಗೆ ಅವಕಾಶ ನಿಲ್ಲಿಸಲಾಗಿತ್ತು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆ: ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.

ಕಲಬುರ್ಗಿ ನಗರದಲ್ಲಿ ಮಧ್ಯಾಹ್ನ ಸುಮಾರು 45 ನಿಮಿಷ ಸುರಿದ ಬಿರುಸಿನ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿಯಿತು. ಚಿಂಚೋಳಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವರುಣನ ಆರ್ಭಟ ಜೋರಾಗಿತ್ತು.

ಬೀದರ್ ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗಿದ್ದರಿಂದ ಮಾಂಜ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಔರಾದ್ ತಾಲ್ಲೂಕಿನ ನಾಗೂರ ಬಳಿ ಸಂತಪುರ–ಸಂಗಮ ರಸ್ತೆಯಲ್ಲಿರುವ ಚಿಕ್ಕ ಹಳ್ಳ ಉಕ್ಕಿ ಹರಿದು ಸೇತುವೆ ಪಕ್ಕದ ಕಚ್ಚಾ ರಸ್ತೆ ಕಿತ್ತುಕೊಂಡು ಹೋಗಿ ಸಂಚಾರ ಸ್ಥಗಿತಗೊಂಡಿತ್ತು. ಸಂಜೆ ಜೆಸಿಬಿಯಿಂದ ಮಣ್ಣು ಹಾಕಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ವಡಗಾಂವ ಹಾಗೂ ಕಂದಗೂಳ ರಸ್ತೆಯಲ್ಲಿ ಹಳ್ಳ ತುಂಬಿ ಬೆಳಿಗ್ಗೆ ಕೆಲ ಹೊತ್ತು ಸಂಚಾರ ಸ್ಥಗಿತಗೊಂಡಿತ್ತು.

ತುಂಗಾ ಜಲಾಶಯ ಭರ್ತಿ 9,500 ಕ್ಯುಸೆಕ್ ನೀರು ಬಿಡುಗಡೆ:

ಶಿವಮೊಗ್ಗ: ಗಾಜನೂರು ಗ್ರಾಮದ ಬಳಿಯ ತುಂಗಾ ಅಣೆಕಟ್ಟು ಭರ್ತಿಯಾಗಿದ್ದು, ಸೋಮವಾರ ಹೆಚ್ಚುವರಿ ನೀರು ಹೊರಗಡೆ ಹರಿಸಲಾಯಿತು.

ಹಿನ್ನೀರು ಭಾಗದಲ್ಲಿ ಜೋರು ಮಳೆಯಾಗುತ್ತಿದ್ದು, ತುಂಗಾ ಅಣೆಕಟ್ಟು ಭರ್ತಿಯಾಗಿದೆ. 21 ಕ್ರಸ್ಟ್ ಗೇಟ್‌ಗಳ ಮೂಲಕ 9,500 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ‌ಗಾಜನೂರು ಜಲಾಶಯ ರಾಜ್ಯದ ಅತಿ ಚಿಕ್ಕ ಅಣೆಕಟ್ಟಾಗಿದ್ದು, ಈ ಅಣೆಕಟ್ಟು 2.85 ಕ್ಯುಸೆಕ್ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಜಿಲ್ಲೆಯಲ್ಲಿ ಎರಡು ತಿಂಗಳಿಂದ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಈ ಬಾರಿ ಅಣೆಕಟ್ಟು ಜೂನ್ ಎರಡನೇ ವಾರಕ್ಕೇ ತುಂಬಿದೆ. ನದಿಗೆ ನೀರು ಬಿಡುವ ಬಗ್ಗೆ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಕರಾವಳಿಯಲ್ಲಿ ರೆಡ್ ಅಲರ್ಟ್

ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ತೀವ್ರಗೊಂಡಿರುವುದರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜೂ.16ರವರೆಗೆ ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೂ.19ರವರೆಗೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ. ಕರಾವಳಿ ಭಾಗದಲ್ಲಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯಬಾರದು’ ಎಂದು ಎಚ್ಚರಿಸಿದೆ.

ಏಳು ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್‌’: ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದೇ 16ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಆರೆಂಜ್ ಅಲರ್ಟ್‌’ ಘೋಷಿಸಲಾಗಿದೆ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಗದಗ ಹಾಗೂ ಬಾಗಲಕೋಟೆಗೆ ‘ಯೆಲ್ಲೊ ಅಲರ್ಟ್‌’ ನೀಡಲಾಗಿದೆ.

ಮಳೆ–ಎಲ್ಲಿ,ಎಷ್ಟು?: ಉಡುಪಿ ಜಿಲ್ಲೆಯ ಪಣಂಬೂರು, ಭಾಗಮಂಡಲ, ಆಗುಂಬೆಯಲ್ಲಿ ತಲಾ 9 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಮಂಗಳೂರು 8, ಕಾರ್ಕಳ 7, ಕುಂದಾಪುರ, ಮೂಡುಬಿದರೆ, ಸುಳ್ಯ 6, ಪುತ್ತೂರು 5, ಚಿಂಚೋಳಿ, ಮಡಿಕೇರಿ 4, ಕಾರವಾರ, ಬೀದರ್, ತೀರ್ಥಹಳ್ಳಿ 3, ಹಾಸನ, ತರೀಕೆರೆ, ಸಾಗರ 2, ಗದಗ, ಕೊಪ್ಪಳ, ಧಾರವಾಡ, ಭದ್ರಾವತಿ, ಕೆಜಿಎಫ್, ಹೊಸಕೋಟೆ, ಸೊರಬ, ಶಿವಮೊಗ್ಗ ಹಾಗೂ ಮಳವಳ್ಳಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ರಾಯಚೂರಿನಲ್ಲಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು