ಶುಕ್ರವಾರ, ಮಾರ್ಚ್ 31, 2023
29 °C
ನಗರದಲ್ಲಿ 8.60 ಸೆಂ.ಮೀ ಮಳೆ * ತೇಲಿಹೋದ ಪೀಠೋಪಕರಣ, ವಾಹನಗಳು

ಬೆಂಗಳೂರಿನಲ್ಲಿ ಮಳೆ ಅಬ್ಬರ: ತುಂಬಿ ಹರಿದ ಕಾಲುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಳೆಗಾಲ ಆರಂಭವಾದ ದಿನದಿಂದಲೂ ಸಾಧಾರಣ ಪ್ರಮಾಣದಲ್ಲಿದ್ದ ಮಳೆಯ ಅಬ್ಬರ ಸೋಮವಾರ ರಾತ್ರಿ ಹೆಚ್ಚಾಗಿತ್ತು. ನಗರದ ಹಲವೆಡೆ ಕಾಲುವೆಗಳು ತುಂಬಿ ಹರಿದವು. ಕೆಲವೆಡೆ ಮನೆಗಳಿಗೂ ನೀರು ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸಿದರು.

ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಭಾನುವಾರ ರಾತ್ರಿಯೂ ಜೋರು ಮಳೆಯಾಗಿತ್ತು. ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೋಮವಾರ ರಾತ್ರಿ ಮಳೆ ಸುರಿದಿದೆ. ರಾತ್ರಿ ಶುರುವಾಗಿದ್ದ ಧಾರಾಕಾರ ಮಳೆ ಮಂಗಳವಾರ ಬೆಳಿಗ್ಗೆವರೆಗೂ ಇತ್ತು.

ಕಾಲುವೆ ಹಾಗೂ ರಾಜಕಾಲುವೆ ಹಾದುಹೋಗಿರುವ ಕೆಲ ಪ್ರದೇಶಗಳಲ್ಲಿ ನೀರು ಹೊಳೆಯಂತೆ ಹರಿಯಿತು. ರಸ್ತೆ ಮೇಲೂ ಅಪಾರ ಪ್ರಮಾಣದಲ್ಲಿ ನೀರಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯುವ ನೀರಿನಲ್ಲೇ ವಾಹನಗಳು ಸಂಚರಿಸಿದವು.

ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ, ಮೆಜೆಸ್ಟಿಕ್, ಗಾಂಧಿನಗರ, ಕೋರಮಂಗಲ, ಮಡಿವಾಳ, ಎಚ್‌ಎಸ್‌ಆರ್‌ ಲೇಔಟ್, ಜೆ.ಪಿ.ನಗರ, ಜಯನಗರ, ಬನಶಂಕರಿ, ಬಸವನಗುಡಿ, ಚಾಮರಾಜಪೇಟೆ, ಹೊಸಕೆರೆಹಳ್ಳಿ, ಕೆಂಗೇರಿ, ರಾಜರಾಜೇಶ್ವರಿನಗರ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಹೆಗ್ಗನಹಳ್ಳಿ, ನಾಗರಬಾವಿ, ಜ್ಞಾನಭಾರತಿ, ಯಲಹಂಕ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಆಗಿದೆ.

ಬೆಲ್ಮಾರ್ ಬಡಾವಣೆಯಲ್ಲಿ ಮನೆಗಳಿಗೆ ನುಗ್ಗಿದ ನೀರು: ದಾಸರಹಳ್ಳಿ, ಪೀಣ್ಯ, ಯಶವಂತಪುರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ನೀರು ಹರಿಯುವಿಕೆ ಕಂಡುಬಂತು. ಚೊಕ್ಕಸಂದ್ರ ವಾರ್ಡ್‌ನ ಬೆಲ್ಮಾರ್ ಬಡಾವಣೆಯಲ್ಲಿ ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ. ಅರ್ಧ ನಿರ್ಮಿಸಿದ್ದ ತಡೆಗೋಡೆ ಒಡೆದು, ಅದರ ನೀರು 15 ಮನೆಗಳಿಗೆ ನುಗ್ಗಿತ್ತು.

‘ಕೆರೆಕೋಡಿ ಹಾಗೂ ನೆಲಗೆದರಹಳ್ಳಿ ಕಡೆಯಿಂದ ಎರಡು ಪ್ರತ್ಯೇಕ ರಾಜಕಾಲುವೆಗಳು ಬೆಲ್ಮಾರ್ ಬಡಾವಣೆ ಮೂಲಕ ಹರಿಯುತ್ತವೆ. ಈ ಪೈಕಿ ನೆಲಗೆದರಹಳ್ಳಿ ಕಡೆಯ ರಾಜಕಾಲುವೆ ಕಾಮಗಾರಿ ನಡೆಯುತ್ತಿದೆ’ ಎಂದು ಸ್ಥಳೀಯ ನಿವಾಸಿ ರಂಗಸ್ವಾಮಿ ಹೇಳಿದರು.

‘ಹಲವು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಇದುವರೆಗೂ ಮುಗಿದಿಲ್ಲ. ಅರ್ಧ ನಿರ್ಮಿಸಿದ ತಡೆಗೋಡೆಯೂ ಒಡೆದುಹೋಗಿದೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ನೀರು ಮನೆಗಳಿಗೆ ನುಗ್ಗಿದೆ. ಕೆಲ ಮನೆಯ ಪೀಠೋಪಕರಣ ಹಾಗೂ ಇತರೆ ವಸ್ತುಗಳು ನೀರಿನಲ್ಲಿ ತೇಲಿ ಹೋಗಿವೆ’ ಎಂದೂ ಅವರು ದೂರಿದರು.

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆರ್. ಮಂಜುನಾಥ್, ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಂಡರು. ಆದಷ್ಟು ಬೇಗ ಕೆಲಸ ಮುಗಿಸುವಂತೆ ತಾಕೀತು ಮಾಡಿದರು.

ಬಿಬಿಎಂಪಿ ಅಧಿಕಾರಿಯೊಬ್ಬರು, ‘ಕೆಲಸಕ್ಕೆ ಮಂಜೂರಾಗಿದ್ದ ಹಣ ಬಿಡುಗಡೆಯಾಗಿಲ್ಲ. ವಾಪಸು ಹೋಗಿದೆ. ಕೆಲ ತಾಂತ್ರಿಕ ಕಾರಣಗಳಿಂದ ಕಾಮಗಾರಿ ತಡವಾಗುತ್ತಿದೆ’ ಎಂದರು.

ಆರ್‌.ಮಂಜುನಾಥ್‌, ’ರಾಜಕಾಲುವೆ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವಂತೆ ಈ ಹಿಂದೆ ಮನವಿ ಮಾಡಿದ್ದೆ. ಬಿಬಿಎಂಪಿ ಆಯುಕ್ತರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ದ್ವೇಷದ ರಾಜಕಾರಣದಿಂದ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಈ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದೇನೆ. ಅನುದಾನ ಬಿಡುಗಡೆ ಮಾಡದಿದ್ದರೆ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ವಿಧಾನಸೌಧಕ್ಕೆ ಪಾದಯಾತ್ರೆ ಮಾಡಲಾಗುತ್ತದೆ‘ ಎಂದರು.

ಮೈಸೂರು ರಸ್ತೆಯಲ್ಲೂ ನೀರು: ರಾಜರಾಜೇಶ್ವರಿನಗರ, ಕೆಂಗೇರಿ, ದೀಪಾಂಜಲಿನಗರ, ನಾಯಂಡನಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಜೋರು ಮಳೆ ಆಯಿತು. ವೃಷಭಾವತಿ ಕಾಲುವೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯಿತು.

ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ ಕಾಲುವೆಗಳಲ್ಲಿ ನೀರು ತುಂಬಿ ಹರಿಯಿತು. ಅಕ್ಕ– ಪಕ್ಕದ ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿತ್ತು. ನಿವಾಸಿಗಳು ರಾತ್ರಿಯಿಡೀ ಮನೆಯೊಳಗಿನ ನೀರನ್ನು ಹೊರ ಹಾಕುವುದರಲ್ಲಿ ನಿರತರಾಗಿದ್ದರು. ಕೆಲ ರಸ್ತೆಗಳಲ್ಲಿ ಬೈಕ್, ಆಟೊ ಹಾಗೂ ಕಾರುಗಳು ಸಹ ನೀರಿನಲ್ಲಿ ಮುಳುಗಿದ್ದು ಕಂಡುಬಂತು.

‘ರಸ್ತೆಯಲ್ಲಿ ಹರಿದ ನೀರು ಹಾಗೂ ಮನೆಗೆ ನುಗ್ಗಿದ ನೀರು ನೋಡಿ ಆತಂಕವಾಗಿತ್ತು. ಮಳೆಯ ನೀರು ಹರಿದುಹೋಗಲು ಕಾಲುವೆಯಲ್ಲಿ ಜಾಗವೇ ಇಲ್ಲ. ಹೀಗಾಗಿ, ನೀರು ಅಕ್ಕ–ಪಕ್ಕದ ಪ್ರದೇಶಗಳಿಗೆ ನುಗ್ಗುತ್ತಿದೆ’ ಎಂದು ಸ್ಥಳೀಯರು ಹೇಳಿದರು.

‘ಕಾಲುವೆಗಳ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಕೆಲವೆಡೆ, ಹೂಳು ತುಂಬಿಕೊಂಡಿದೆ’ ಎಂದೂ ತಿಳಿಸಿದರು.

ವಾಹನಗಳಿಗೆ ಹುಡುಕಾಟ: ಕೆಂಗೇರಿ ಹಾಗೂ ರಾಜರಾಜೇಶ್ವರಿನಗರದಲ್ಲಿ ರಸ್ತೆ ಮೇಲೆ ನಿಲ್ಲಿಸಿದ್ದ ವಾಹನಗಳು ನೀರಿನೊಂದಿಗೆ ತೇಲಿ ಮುಂದಕ್ಕೆ ಹೋಗಿದ್ದವು. ನೀರಿನಲ್ಲಿ ನಿಂತಿದ್ದರಿಂದ ವಾಹನಗಳು ಕೆಟ್ಟಿದ್ದವು. ಅವುಗಳನ್ನು ತಳ್ಳಿಕೊಂಡೇ ನಿವಾಸಿಗಳು ದುರಸ್ತಿ ಕೇಂದ್ರಕ್ಕೆ ತೆಗೆದುಕೊಂಡು ಹೋದರು.

ನೆಲಕ್ಕುರುಳಿದ ಮರ, ಕೊಂಬೆಗಳು
ನಗರದ ವೈಟ್‌ಫೀಲ್ಡ್, ಎಚ್‌ಎಸ್‌ಆರ್ ಲೇಔಟ್, ಮಡಿವಾಳ, ವಿಜಯನಗರದಲ್ಲಿ ಮರಗಳು ನೆಲಕ್ಕುರುಳಿದ್ದವು. ರಾಜಾಜಿನಗರ, ಮಲ್ಲೇಶ್ವರ, ಯಶವಂತಪುರ, ಪೀಣ್ಯ, ದಾಸರಹಳ್ಳಿ, ರಾಜರಾಜೇಶ್ವರಿನಗರ, ಕೆಂಗೇರಿ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಮರದ ಕೊಂಬೆಗಳು ಬಿದ್ದಿದ್ದವು.

ಮರ ಹಾಗೂ ಕೊಂಬೆಗಳು ರಸ್ತೆ ಮೇಲೆಯೇ ಬಿದ್ದಿದ್ದರಿಂದ ಮಂಗಳವಾರ ನಸುಕಿನಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಆಗಿತ್ತು. ಸ್ಥಳೀಯರು ಮರ ಹಾಗೂ ಕೊಂಬೆ ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು