ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಕಲ್ಯಾಣ ಕರ್ನಾಟಕ, ಕರಾವಳಿಯಲ್ಲಿ ಉತ್ತಮ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ/ಮಂಗಳೂರು/ಮಡಿಕೇರಿ: ಕಲ್ಯಾಣ ಕರ್ನಾಟಕ, ಕರಾವಳಿ ಜಿಲ್ಲೆಗಳು ಹಾಗೂ ಕೊಡಗಿನಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ.

ಮಹಾರಾಷ್ಟ್ರದ ಹಲವೆಡೆ ಭಾರಿ ಮಳೆ ಸುರಿಯುತ್ತಿರುವುದರಿಂದ ಭೀಮಾ ನದಿ ತುಂಬಿ ಹರಿಯು
ತ್ತಿದೆ. ಮಂಗಳವಾರ 95 ಸಾವಿರ ‌ಕ್ಯುಸೆಕ್‌ ನೀರನ್ನು ಸನ್ನತಿ ಬ್ರಿಜ್‌ ಕಂ ಬ್ಯಾರೇಜ್‌ನಿಂದ ಭೀಮಾ ನದಿಗೆ ಹರಿಸಲಾಗುತ್ತಿದೆ.

ಯಾದಗಿರಿ ಜಿಲ್ಲೆಯ ಭೀಮಾ ನದಿ ಸೇತುವೆ ಬಳಿ ಇರುವ ಕಂಗಳೇಶ್ವರ ಹಾಗೂ ವಿರಾಂಜನೇಯ ದೇಗುಲಗಳು ಜಲಾವೃತವಾಗಿವೆ. ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ಶಹಾಪುರ, ಸುರಪುರ, ಯಾದಗಿರಿ, ಗುರುಮಠಕಲ್‌, ವಡಗೇರಾ, ಹುಣಸಗಿ ತಾಲ್ಲೂಕಿನಲ್ಲಿ ಮಳೆಯಾಗಿದೆ.

ಕಲಬುರ್ಗಿ ನಗರ ಸೇರಿದಂತೆ ಆಳಂದ, ಚಿಂಚೋಳಿ, ಕಾಳಗಿ, ಯಡ್ರಾಮಿ, ಸೇಡಂ, ಚಿತ್ತಾಪುರ ತಾಲ್ಲೂಕಿನ ಹಲವೆಡೆ ಮಳೆಯಾಗಿದೆ. ಚಿಂಚೋಳಿ ತಾಲ್ಲೂಕಿನ 20 ಕೆರೆಗಳು ಈಚೆಗೆ ಸುರಿದ ಮಳೆಯಿಂದಾಗಿ ಭರ್ತಿಯಾಗಿವೆ. 

ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕಾರಂಜಾ ಜಲಾಶಯ, ಬಸವಕಲ್ಯಾಣ ತಾಲ್ಲೂಕಿನ ಚುಳಕಿನಾಲಾ, ಮೇಲ್ದಂಡೆ ಮುಲ್ಲಾಮರಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹರಿಯ ಬಿಡಲಾಗುತ್ತಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬೆಳೆಗಳು ನೀರಿನಲ್ಲಿ ಮುಳುಗಿವೆ. ಮಳೆ ಕಾರಣ ಬೆಳೆ ಸಮೀಕ್ಷೆಗೆ ತೊಡಕಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕರಾವಳಿಯಲ್ಲಿ ಉತ್ತಮ ಮಳೆ: ಕರಾವಳಿ ಜಿಲ್ಲೆಗಳಲ್ಲಿ ನಿರಂತರ ಮಳೆ ಮುಂದುವರಿದಿದ್ದು, ಒಂದು ಮನೆಗೆ ಭಾಗಶಃ ಹಾನಿಯಾಗಿದೆ. 4 ವಿದ್ಯುತ್‌ ಕಂಬಗಳು ಹಾಗೂ 200
ಮೀಟರ್ ವಿದ್ಯುತ್‌ ಮಾರ್ಗಕ್ಕೆ ಹಾನಿಯಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಣಿಯಲ್ಲಿ 10.9 ಸೆಂ.ಮೀ ಮಳೆಯಾಗಿದೆ. ಬೈಂದೂರು ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಮರಬಿದ್ದು ಮನೆಗೆ ಹಾನಿಯಾಗಿದೆ. ಸೆ.12ರವರೆಗೆ ಕರಾವಳಿಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವ್ಯಕ್ತಿ ಸಾವು (ಶಿವಮೊಗ್ಗ ವರದಿ):  ಸಂತೇಬೆನ್ನೂರು ಸಮೀಪದ ದೊಡ್ಡಮಲ್ಲಾಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಮನಗೋಡೆ ಕುಸಿದು ದೇವೇಂದ್ರಪ್ಪ (65) ಸಾವನ್ನಪ್ಪಿದ್ದಾರೆ.

ಕೊಡಗಿನ ವಿವಿಧೆಡೆ ಧಾರಾಕಾರ ಮಳೆ: ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಭಾಗಮಂಡಲ, ಮಾದಾಪುರ, ಸುಂಟಿಕೊಪ್ಪ, ಗರ್ವಾಲೆ, ಸೂರ್ಲಬ್ಬಿ ಭಾಗದಲ್ಲಿ ಮಂಗಳವಾರ ದಿನವಿಡೀ ಧಾರಾಕಾರ ಮಳೆಯಾಗಿದೆ. ಜಿಲ್ಲೆಯಲ್ಲಿ ಮತ್ತೆ ಬಿರುಸಿನ ಮಳೆಯಾಗುತ್ತಿದ್ದು
ನದಿಗಳಲ್ಲಿ ನೀರಿನಮಟ್ಟ ಏರಿಕೆ ಕಂಡು
ಬಂದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು