ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಮಳೆ: ಮೂವರ ಸಾವು

Last Updated 4 ಮೇ 2022, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬುಧವಾರ ರಭಸದ ಮಳೆ ಸುರಿದಿದ್ದು, ಸಿಡಿಲು ಬಡಿದು ಇಬ್ಬರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಮೊಳಕಾಲ್ಮುರು ತಾಲ್ಲೂಕಿನ ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗಳಹಟ್ಟಿಯಲ್ಲಿ ಬುಧವಾರ ಕುರಿ ಮೇಯಿಸಲು ತೆರಳಿದ್ದ ತಾಯಿ, ಮಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಮೇಗಳಹಟ್ಟಿಯ ಮಾರಕ್ಕ (40), ಮಗ ವೆಂಕಟೇಶ (17) ಮೃತರು. ಬುಧವಾರ ಸಂಜೆ ಕುರಿ ಮೇಯಿಸಿಕೊಂಡು ಮನೆಗೆ ಮರಳುವಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಮರವೊಂದು ಆಟೊ ಮೇಲೆ ಬಿದ್ದಿದ್ದರಿಂದ ಚಾಲಕ, ಸೋನಿಯಾಗಾಂಧಿ ನಗರದ ರಾಬಿನ್ ಮರೋಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುಮಾರು ಅರ್ಧ ತಾಸು ಸುರಿದ ಮಳೆಯ ಅಬ್ಬರಕ್ಕೆ ಹುಬ್ಬಳ್ಳಿ ನಗರದಲ್ಲಿ ವಿವಿಧೆಡೆ ಮರಗಳು, ಕೊಂಬೆಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದವು. ಮೂರ್ನಾಲ್ಕು ಮನೆಗಳ ಗೋಡೆಗಳು ಕುಸಿದಿವೆ. ಮರಗಳು ರಸ್ತೆಗೆ ಅಡ್ಡವಾಗಿ ಬಿದ್ದಿದ್ದರಿಂದಾಗಿ ಹಲವು ರಸ್ತೆಗಳಲ್ಲಿ ಗಂಟೆಗಟ್ಟಲೆ ವಾಹನಗಳ ಸಂಚಾರ ಬಂದ್ ಆಯಿತು. ಕೆಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಮಡಿಕೇರಿ, ಹಾಸನ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು.

ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ಭಾಗಗಳಲ್ಲಿ ಬುಧವಾರ ಸಂಜೆ ಮಳೆ ಸುರಿದಿದೆ.

ಕೆಲವೆಡೆ ಮಂಗಳವಾರ ರಾತ್ರಿಯಿಂದಲೇ ಮಳೆ ಆರಂಭವಾಗಿದೆ. ಬುಧವಾರ ಸಂಜೆಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆಮರಗಳು ನೆಲಕ್ಕುರುಳಿದ್ದು, ಮೇಲ್ಛಾವಣಿಯ ಸಿಮೆಂಟ್‌ ಶೀಟ್‌ ಹಾರಿಹೋಗಿವೆ. ತಾಸುಗಟ್ಟಲೇ ರಭಸದಿಂದ ಸುರಿದ ಆಲಿಕಲ್ಲು ಮಳೆಗೆ ಮಾವಿನ ಕಾಯಿಗಳು ಉದುರಿದ್ದು, ಬಾಳೆತೋಟಗಳು ನಾಶವಾಗಿವೆ.

ರಾಮನಗರ ಜಿಲ್ಲೆಯಲ್ಲಿ ಬಿರುಗಾಳಿ–ಆಲಿಕಲ್ಲಿನ ಹೊಡೆತಕ್ಕೆ ನೂರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಮಾವಿನ ಕೊಯ್ಲು ನಡೆದಿದ್ದು, ತೋಟಗಳಲ್ಲಿ ಫಸಲು ತುಂಬಿದೆ. ಎರಡು ದಿನದ ಹಿಂದೆ ಬೀಸಿದ ಬಿರುಗಾಳಿಯಿಂದಾಗಿ ನೂರಾರು ಮರಗಳು ನೆಲಕ್ಕೆ ಉರುಳಿವೆ. ಟನ್‌ಗಟ್ಟಲೆ ಕಾಯಿ ನೆಲಕ್ಕೆ ಬಿದ್ದಿವೆ.

ಮಡಿಕೇರಿಯಲ್ಲಿ ಒಂದು ತಾಸು ಮಳೆ ಅಬ್ಬರಿಸಿತು. ಗುಡುಗು, ಸಿಡಿಲಿನ ಆರ್ಭಟ ಜೋರಾಗಿತ್ತು. ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ದೊಡ್ಡ ಗಾತ್ರದ ಆಲಿಕಲ್ಲು ಬಿದ್ದ ಪರಿಣಾಮ ಕೆಲವು ಮನೆಗಳ ಹೆಂಚುಗಳಿಗೆ ಹಾನಿಯಾಗಿದೆ. ತಲಕಾವೇರಿ, ಭಾಗಮಂಡಲ ಭಾಗದಲ್ಲಿ ಮಂಗಳವಾರ ರಾತ್ರಿಯೂ ಧಾರಾಕಾರ ಮಳೆಯಾಗಿದೆ.

ಹಾಸನ ನಗರ ಸೇರಿದಂತೆ ವಿವಿಧೆಡೆ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಜೋರು ಮಳೆಯಾಗಿದೆ. ನಗರದಲ್ಲಿ ಒಂದು ತಾಸು ಮಳೆಯಾದರೆ, ಸಕಲೇಶಪುರ, ಹೆತ್ತೂರು, ಆಲೂರು, ಹಳೇಬೀಡು, ಬೇಲೂರು, ಚನ್ನರಾಯಪಟ್ಟಣ, ಅರಸೀಕೆರೆಯಲ್ಲಿ ಅರ್ಧ ತಾಸು ಧಾರಾಕಾರ ಮಳೆಯಾಗಿದೆ. ಬಾಣಾವರದಲ್ಲಿ ಆಲಿಕಲ್ಲು ಮಳೆಯಾಗಿದೆ.

ಕಲಬುರಗಿ ನಗರ ಮತ್ತು ಬೀದರ್ ಜಿಲ್ಲೆಯ ಹುಲಸೂರಿನಲ್ಲಿ ಬುಧವಾರ ಮಳೆಯಾಯಿತು. ಕೆಲ ದಿನಗಳಿಂದ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 43 ಡಿಗ್ರಿ ಸೆಲ್ಸಿಯಸ್ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT