ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಭಾರಿ ಮಳೆ: ಕೊಡಗಿನಲ್ಲಿ ಜನಜೀವನ ಅಸ್ತವ್ಯಸ್ತ

ದಕ್ಷಿಣ ಕನ್ನಡದಲ್ಲಿ ತಡೆಗೋಡೆ ಕುಸಿದು ಕಾರ್ಮಿಕ ಸಾವು
Last Updated 19 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಶನಿವಾರ ಭಾರಿ ಮಳೆ ಆಗಿದೆ. ಹಳ್ಳ–ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕೊಡಗಿ ನಲ್ಲಿ ಧಾರಾಕಾರವಾಗಿ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ದಕ್ಷಿಣ ಕನ್ನಡ ಜಿಲ್ಲೆಯ ಕೂಳೂರಿನಲ್ಲಿ ತಡೆಗೋಡೆ ಕುಸಿದು, ಕಾರ್ಮಿಕ ಉಮೇಶ (38) ಮೃತಪಟ್ಟಿದ್ದಾರೆ. ಇಬ್ಬರು ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.

ರಾಯಚೂರು ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಿಗ್ಗೆಯ ವರೆಗೆ ಮಳೆ ಸುರಿದಿದ್ದು, ಸರಾಸರಿ 48 ಮಿ.ಮೀ. ಮಳೆ ದಾಖಲಾ ಗಿದೆ. ರಾಯಚೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ನಗರದ ತಗ್ಗು ಪ್ರದೇಶದ ಜಹೀರಾ ಬಾದ್‌, ಸಿಯಾ ತಾಲಾಬ್‌, ಜಲಾಲನಗರ, ನೀರಭಾವಿ ಕುಂಟಾಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ದವಸಧಾನ್ಯ ನೀರುಪಾಲಾಗಿವೆ.ರಾಯಚೂರು ತಾಲ್ಲೂಕಿನ ಯರಗುಂಟಾ ಬಳಿ ನಾರಾಯಣಪುರ ಬಲದಂಡೆ ನಾಲೆ (ಎನ್‌ಆರ್‌ಬಿಸಿ) ಒಡೆದಿದ್ದು, ಹತ್ತಿ, ಮೆಣಸಿನಕಾಯಿ ಬೆಳೆ ಕೊಚ್ಚಿ ಹೋಗಿದೆ.ಯರಗುಂಟಾ, ಶಾಖವಾದಿ, ಯದ್ಲಾಪುರ, ಬೂರ್ದಿಪಾಡ, ಆತ್ಕೂರು, ಡಿ.ರಾಂಪೂರ ಗ್ರಾಮಗಳಲ್ಲಿ ಹಳ್ಳಗಳು ಉಕ್ಕಿ ಹರಿಯುತ್ತಿವೆ.

ಕಲಬುರ್ಗಿ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಚಿತ್ತಾಪುರ ತಾಲ್ಲೂಕಿನ ದಂಡೋತಿ ಬಳಿಯ ಕಾಗಿಣಾ ನದಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.ಕಾರಂಜಾ ಜಲಾನಯನ ಪ್ರದೇಶದಲ್ಲಿ ನಿರಂತವಾಗಿ ಮಳೆಯಾಗುತ್ತಿದ್ದು, ಬೀದರ್ ಜಿಲ್ಲೆಯ ಕಾರಂಜಾ ಜಲಾಶಯಕ್ಕೆ 1,851 ಕ್ಯುಸೆಕ್‌ ನೀರು ಹರಿದು ಬರುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದಲೂ ಧಾರಾಕಾರವಾಗಿ ಮಳೆ ಸುರಿಯು ತ್ತಿದೆ.ಕಾವೇರಿ, ಲಕ್ಷ್ಮಣತೀರ್ಥ ನದಿಗಳಲ್ಲಿ ಮತ್ತೆ ನೀರಿನಮಟ್ಟ ಏರಿಕೆಯಾಗಿದೆ. ಮಡಿಕೇರಿ, ಭಾಗ ಮಂಡಲ, ತಲಕಾವೇರಿ, ನಾಪೋಕ್ಲು ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಭರ್ತಿಯಾಗಿದೆ. ಇದೇ ರೀತಿ ಮಳೆಯ ಅಬ್ಬರ ಮುಂದು ವರಿದರೆ ಕೊಡಗಿನಲ್ಲಿ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ.

ತಿತಿಮತಿಯ ಕೋಣನಕಟ್ಟೆ ರಸ್ತೆಯ ಮರಪಾಲದ ಬಳಿ ಭಾರಿ ಗಾತ್ರದ ಮರ ಉರುಳಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಹಾರಂಗಿ ಜಲಾನಯನ ಪ್ರದೇಶದಲ್ಲೂ ನಿರಂತರ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯದ ಒಳಹರಿವು ಹೆಚ್ಚಿದೆ.ಮೈಸೂರು ಜಿಲ್ಲೆಯ ಹುಣಸೂರು ಮತ್ತು ಎಚ್‌.ಡಿ. ಕೋಟೆ ತಾಲ್ಲೂಕಿನಾದ್ಯಂತ ಧಾರಾಕಾರ ಮಳೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಮಳೆ ಬಿರುಸಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ಹುಬ್ಬಳ್ಳಿ ನಗರವೂ ಸೇರಿದಂತೆ ಧಾರವಾಡ, ಗದಗ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ ಸುರಿದಿದೆ. ಶಿವಮೊಗ್ಗ, ದಾವಣಗೆರೆ ಜಿಲ್ಲೆಯಲ್ಲಿ ಸಾಧಾರಣ ಮಳೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT