ಗುರುವಾರ , ಅಕ್ಟೋಬರ್ 22, 2020
27 °C
ನಡುಗಡ್ಡೆ ಸೃಷ್ಟಿ

ಮಳೆ: ‍‍ಪ್ರವಾಹಕ್ಕೆ ಗ್ರಾಮಗಳು ತತ್ತರ, ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆಯಿಂದಾಗಿ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿ

ಬೆಂಗಳೂರು: ರಾಜ್ಯದ ಕಲಬುರ್ಗಿ, ಯಾದಗಿರಿ, ಬೀದರ್‌ ಸೇರಿದಂತೆ ಹಲವು ಭಾಗಗಳಲ್ಲಿ ಮಂಗಳವಾರದಿಂದ ಭಾರೀ ಮಳೆಯಾಗುತ್ತಿದೆ. ಅದರ ಪರಿಣಾಮ ಕೆರೆಗಳು ತುಂಬಿ ಹರಿಯುತ್ತಿದ್ದು, ಕೆಲವು ಕಡೆ ಕೆರೆಗಳು ಒಡೆದು ಹೊಲ ಹಾಗೂ ಮನೆಗಳಿಗೆ ನೀರು ನುಗ್ಗಿದೆ. ರಾತ್ರಿ ಇಡೀ ಮಳೆ ಸುರಿದಿರುವುದರಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ.

ಪ್ರವಾಹ ಪರಿಸ್ಥಿತಿ: ನಾಗಾಈದಲಾಯಿ ಶಾಲೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಪ್ರವಾಹ ಭೀತಿಯಿಂದ ಜನರು ಮನೆ ತೊರೆಯುತ್ತಿರುವಾಗ ಧಾವಂತದಲ್ಲಿ ಹೆಜ್ಜೆ ಹಾಕಿ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದ ಗೃಹಿಣಿ ಹೆಣ್ಣು ಮಗುವಿಗೆ ಜನ್ಮ‌ನೀಡಿದ ಘಟನೆ ತಾಲ್ಲೂಕಿನ ನಾಗಾಈದಲಾಯಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಗ್ರಾಮದ ಕೆರೆ ಒಡೆದಿದ್ದರಿಂದ ಊರಿಗೆ ಪ್ರವಾಹದ ನೀರು ನುಗ್ಗಿದೆ. ಕೆರೆ ಒಡೆದ ಸುದ್ದಿ ತಿಳಿದು ಜನ ತಂಡೋಪ ತಂಡೋಪವಾಗಿ ಮನೆಗಳನ್ನು ತೊರೆದಿದ್ದಾರೆ. ಆಗ ತುಂಬು ಗರ್ಭಿಣಿ ಗೀತಾ ವೆಂಕಟ ಹೆಳವರ ಭಯದಿಂದ ಶಾಲೆಯ ಕಟ್ಟಡದತ್ತ ದೌಡಾಯಿಸಿದರು. ಇದೇ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಅವರ ತಂದೆಯ ಹಿರಿಯ ಅಜ್ಜಿ ಶತಾಯುಷಿ ನಾಗಮ್ಮ ಹೆಳವರ ಸಹಜ ಹೆರಿಗೆ ಮಾಡಿಸಿದ್ದಾರೆ.

ಗೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು,  ತಾಯಿ ಮಗು ಆರೋಗ್ಯವಾಗಿದ್ದಾರೆ. ಗೀತಾ ಅವರಿಗೆ ಇದು ಮೊದಲ ಹೆರಿಗೆಯಾಗಿದೆ.

ನಾಗಾಈದಲಾಯಿಯ ಗೀತಾ ಅವರನ್ನು ಶ್ರಿಗಿರಿ ಪೇಟೆಯ ವೆಂಕಟ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಈಚೆಗೆ ಹೆರಿಗೆಗಾಗಿ ತವರಿಗೆ ಬಂದಿದ್ದರು. ವೈದ್ಯರು ಅ.20 ನಂತರ ಹೆರಿಗೆಯಾಗಲಿದೆ ಎಂದಿದ್ದರು. ಆದರೆ ಒಂದುವಾರ ಮೊದಲೇ ಹೆರಿಗೆಯಾಗಿದೆ.  ಇಬ್ಬರನ್ನು ತಾಲ್ಲೂಕಿನ ಸಾಲೇಬೀರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.

ಹೊಸಪೇಟೆ:  ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ, 48 ಎಕರೆ ಬೆಳೆ ಹಾನಿ

ಹೊಸಪೇಟೆ: ಸದ್ಯ ಮಳೆ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ಬುಧವಾರ ಕೂಡ ನಗರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

ಬೆಳಿಗ್ಗೆಯಿಂದ ಕಾರ್ಮೋಡ ಕವಿದಿತ್ತು. ಬೆಳಿಗ್ಗೆ 10ರ ಸುಮಾರಿಗೆ ಆರಂಭಗೊಂಡ ಬಿರುಸು ಮಳೆ ಅರ್ಧಗಂಟೆಗೂ ಹೆಚ್ಚು ಕಾಲ ಸುರಿಯಿತು. ನಂತರ ಕೆಲಹೊತ್ತು ತುಂತುರು ಮಳೆಯಾಯಿತು. ಮಂಗಳವಾರ ರಾತ್ರಿ ಕೂಡ ಜಿಟಿಜಿಟಿ ಮಳೆಯಾಗಿದೆ.

ತಾಲ್ಲೂಕಿನ ಹಂಪಿ, ಕಮಲಾಪುರ, ನಲ್ಲಾಪುರ, ಚಿನ್ನಾಪುರ, ಬುಕ್ಕಸಾಗರ, ಕೊಂಡನಾಯಕನಹಳ್ಳಿ, ಮಲಪನಗುಡಿ, ನಾಗೇನಹಳ್ಳಿ, ಧರ್ಮದಗುಡ್ಡ, ಬಸವನದುರ್ಗ, ಹೊಸೂರು, ಇಪ್ಪಿತೇರಿ ಮಾಗಾಣಿ, ಸಂಕ್ಲಾಪುರ, ಕಾರಿಗನೂರು, ವಡ್ಡರಹಳ್ಳಿ, ಧರ್ಮಸಾಗರ ಸೇರಿದಂತೆ ಹಲವೆಡೆ ಮಳೆಯಾಗಿದೆ.


ಹೊಸಪೇಟೆ ಹೊರವಲಯದ ರಾಯರ ಕೆರೆ ಬಳಿಯ ಕಬ್ಬಿನ ಗದ್ದೆಯಲ್ಲಿ ನೀರು ಸಂಗ್ರಹವಾಗಿರುವುದು

ಸತತ ಮಳೆ, ಸಂಡೂರಿನ ನಾರಿಹಳ್ಳ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ನಗರ ಹೊರವಲಯದ ರಾಯರ ಕೆರೆಯಲ್ಲಿ ಬೆಳೆದು ನಿಂತಿದ್ದ ಕಬ್ಬು, ಮೆಕ್ಕೆಜೋಳ ಹಾಗೂ ತೊಗರಿಗೆ ಹಾನಿಯಾಗಿದೆ. 25 ಎಕರೆ ಕಬ್ಬು, 20 ಎಕರೆ ಮೆಕ್ಕೆಜೋಳ ಹಾಗೂ 3 ಎಕರೆ ತೊಗರಿಗೆ ಹಾನಿಯಾಗಿದೆ.

‘ಸತತ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಅಲ್ಲಲ್ಲಿ ಬೆಳೆ ಹಾನಿಯಾಗಿದೆ. ಈಗಷ್ಟೇ ಸರ್ವೇ ಕಾರ್ಯ ನಡೆಯುತ್ತಿದ್ದು, ಇನ್ನಷ್ಟೇ ಸಂಪೂರ್ಣ ಮಾಹಿತಿ ಲಭ್ಯವಾಗಬೇಕಿದೆ. ಆದರೆ, ರಾಯರ ಕೆರೆಯಲ್ಲಿ ಒಟ್ಟು 48 ಎಕರೆ ಬೆಳೆ ನಷ್ಟವಾಗಿದೆ’ ಎಂದು ಕಂದಾಯ ಅಧಿಕಾರಿ ಮಲ್ಲಿಕಾರ್ಜುನಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮೂರು ಕಡೆ ನಡುಗಡ್ಡೆ ಸೃಷ್ಟಿ: ನೀರಿನಲ್ಲಿ ಸಿಲುಕಿದ 12 ಮಂದಿ

ಕಲಬುರ್ಗಿ: ಚಿಂಚೋಳಿ ತಾಲ್ಲೂಕಿನ ನಾಗರಾಳ ಹಾಗೂ ‌ಚಂದ್ರಂಪಳ್ಳಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಬಿಟ್ಟಿದ್ದರಿಂದ ತಾಲ್ಲೂಕಿನ ಮೂರು ಕಡೆ ನಡುಗಡ್ಡೆಗಳು ನಿರ್ಮಾಣವಾಗಿದೆ. ಇವುಗಳಲ್ಲಿ 12 ಜನ ಸಿಲುಕಿಕೊಂಡಿರುವ ಮಾಹಿತಿ ಇದ್ದು, ಅವರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು (ಎನ್‌ಡಿಆರ್‌ಆಫ್) ಕಳಿಸಲಾಗಿದೆ.

ಚಿಂಚೋಳಿಯ ಬಡಿಗೇರ ಹೊಲದಲ್ಲಿ 4 ಮಂದಿ, ಐನೋಳ್ಳಿ ದೇಗಲಮಡಿ ಕ್ರಾಸ್ ಬಳಿ ಸೇತುವೆ ಕಾಮಗಾರಿ ನಡೆಸುವ ಶೆಡ್‌ನಲ್ಲಿ 4 ಮಂದಿ ಮತ್ತು ಗಾರಂಪಳ್ಳಿಯಲ್ಲಿ‌ 4 ಮಂದಿ ಪ್ರವಾಹದಡಿ ಸಿಲುಕಿದ್ದಾರೆ. ಈಗಾಗಲೇ ತಂಡ ಕಲಬುರ್ಗಿ ಬಿಟ್ಟಿದೆ ಎಂದು ತಹಶೀಲ್ದಾರ ಅರುಣಕುಮಾರ ಕುಲಕರ್ಣಿ 'ಪ್ರಜಾವಾಣಿ'ಗೆ ತಿಳಿಸಿದರು.

ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದ್ದು, ಅಗತ್ಯ ಬಿದ್ದರೆ ಹೆಚ್ಚುವರಿ ಸಿಬ್ಬಂದಿಯನ್ನು ‌ಕಳಿಸಲಾಗುವುದು. ಎಲ್ಲ ತಾಲ್ಲೂಕುಗಳ ತಹಶೀಲ್ದಾರ್‌ಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ 'ಪ್ರಜಾವಾಣಿ'ಗೆ ತಿಳಿಸಿದರು.


ಚಿಂಚೋಳಿ ಪಟ್ಟಣದ ರಸ್ತೆಗಳಲ್ಲಿ ನೀರು


ಚಿಂಚೋಳಿ–ಬೀದರ್ ಸಂಪಕ್ ಕಡಿತ

ಯರಗೋಳ: ಮನೆಗೆ ನುಗ್ಗಿದ ಮಳೆ ನೀರು

ಯರಗೋಳ (ಯಾದಗಿರಿ): ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಜೋರು ಮಳೆಗೆ ಗ್ರಾಮದ ದೊಡ್ಡ ಕೆರೆ ತುಂಬಿ ಹರಿಯುತ್ತಿದ್ದು, ಕೆರೆ ಸುತ್ತಲಿನ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ಜೋಳ, ಅಕ್ಕಿ, ಬೆಳೆ ನೀರು ಪಾಲಾಗಿವೆ. ಮನೆ ಮಾಲಿಕರು ಮನೆಗೆ ನುಗ್ಗಿದ ನೀರು ಹೊರ ತೆಗೆಯಲು ಹರ ಸಾಹಸ ಪಡುತ್ತಿದ್ದಾರೆ.

ವಾರ್ಡ್ ಸಂಖ್ಯೆ 1ರ ಕೋಡಿಹಳ್ಳದಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಜಿಲಾನಿ ಕಿರಾಣಿ ಅಂಗಡಿ ಸುತ್ತಲು ನೀರು ಆವರಿಸಿದೆ. ಹಿರಿಕೇರಿ, ಉತ್ತರಾದಿ ಮಠ, ಥಾವರು ನಾಯಕ, ಕೇಮುನಾಯಕ ತಾಂಡಾಕ್ಕೆ ತೆರಳುವ ಜನರಿಗೆ ತೊಂದರೆಯಾಗಿದೆ.

ಕೆರೆ ಕೋಡಿಯ ಮುಂದಿರುವ  ಶರಣಪ್ಪ ಭೀಮನಳ್ಳಿ ಅವರ ಮನೆ ಗೋಡೆ ಕುಸಿದಿದ್ದು, ಮಲ್ಲಿಕಾರ್ಜನ ಬಳ್ಳೊಳ್ಳಿ, ಮಲ್ಲಿಕಾರ್ಜುನ ಇದ್ದಿ, ಚಂದ್ರಪ್ಪ ಇದ್ಲಿ ಅವರ ಮನೆಗಳಿಗೆ ನೀರು ನುಗ್ಗಿವೆ.

ಗವಿಸಿದ್ದಲಿಂಗೇಶ್ವರ ಮಠಕ್ಕೆ ತೆರಳುವ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಗ್ರಾಮಸ್ಥರು ತಿರುಗಾಡಲು ತೊಂದರೆ ಪಡುತ್ತಿದ್ದಾರೆ.

ಕರೆ ಸ್ವೀಕರಿಸದ ತಹಶೀಲ್ದಾರ್: ಗ್ರಾಮದಲ್ಲಿ ಮಳೆಯಿಂದಾಗಿ ಮನೆ ಗೋಡೆಗಳು ಕುಸಿದಿದ್ದು, ಈ ಕುರಿತು ಪತ್ರಿಕೆ ಯಾದಗಿರಿ ತಹಶೀಲ್ದಾರರಿಗೆ ಮೊಬೈಲ್‌ಗೆ ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇನ್ನು ಸ್ಥಳಕ್ಕೆ ಆಗಮಿಸದಕ್ಕೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

ಯುವಕರ ಮೋಜು: ಕೆರೆ ಕೋಡಿಯಲ್ಲಿ ಹರಿಯುತ್ತಿರುವ ನೀರಿನಲ್ಲಿ ಯುವಕರು ಮೊಬೈಲ್‌ಗಳಲ್ಲಿ ಫೋಟೊ ಕ್ಲಿಕ್ಲಿಸಿ, ಫೇಸ್ ಬುಕ್‌, ವಾಟ್ಸ್ ಆ್ಯಪ್‌ಗಳಲ್ಲಿ ಹರಿಬಿಟ್ಟು ಸಂಭ್ರಮಿಸುತ್ತಿದ್ದಾರೆ.

ಶೀತಗಾಳಿ: ಮಳೆಯ ಜೊತೆಗೆ ತಂಪಾದ ಗಾಳಿ ಬೀಸುತ್ತಿದ್ದು, ವೃದ್ಧರು, ಮಕ್ಕಳು ಮನೆಯಿಂದ ಹೊರ ಬರುತ್ತಿಲ್ಲ.

ಆಳಂದ: ಕೆರೆ ಒಡೆದು ಹೊಲಗಳಿಗೆ ನುಗ್ಗಿದ ನೀರು

ಕಲಬುರ್ಗಿ: ಭಾರಿ‌ ಮಳೆಯಿಂದಾಗಿ ಜಿಲ್ಲೆಯ ‌ಆಳಂದ ತಾಲ್ಲೂಕಿನ ‌ಮಟಕಿ ಕೆರೆ ಒಡೆದು ಅಪಾರ ಪ್ರಮಾಣದ ನೀರು ಹೊಲಗಳಿಗೆ ನುಗ್ಗಿದೆ.

ಮಟಕಿ, ಹೆಬಳಿ, ಜೀರಹಳ್ಳಿ, ಶಕಾಪುರ ಗ್ರಾಮದ ಹಳ್ಳದ ದಂಡೆಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ವಿವಿಧೆಡೆ ಸಂಚಾರ ಸ್ಥಗಿತಗೊಂಡಿದ್ದು, ಅಮರ್ಜಾ ಅಣೆಕಟ್ಟೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.

1992ರಲ್ಲಿ ಮಟಕಿ ಕೆರೆ ಒಡೆದಿತ್ತು. ಈಗ ಮತ್ತೆ ಈ ಕೆರೆ ಒಡೆದ ಪರಿಣಾಮ  ಹಳ್ಳವು ತುಂಬಿ ಹರಿಯುತ್ತಿದೆ. ಸುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಕಲಬುರ್ಗಿ ಜಿಲ್ಲೆ ತತ್ತರ: ಜನಜೀವನ  ಅಸ್ತವ್ಯಸ್ತ

ಕಲಬುರ್ಗಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ಮಳೆಗೆ ಜನಜೀವನ ತತ್ತರಿಸಿದೆ. ಕಳೆದ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಳಖೇಡ ಸೇತುವೆ, ಕಾಚೂರು, ದಂಡೋತಿ‌ ಸೇತುವೆಗಳು ಮುಳುಗಡೆಯಾಗಿವೆ.


ಕಲಬುರ್ಗಿ ನಗರದ ರಸ್ತೆಗಳಲ್ಲಿ ನೀರು ತುಂಬಿರುವುದು

ಮಳಖೇಡ ಉತ್ತರಾದಿ ಮಠ ಸಂಪೂರ್ಣ ಜಲಾವೃತವಾಗಿದೆ. ಮಳೆ ನೀರು ಮನೆಯೊಳಗೆ ಹೊಕ್ಕ ಪರಿಣಾಮ ಜನರು‌ ಕಂಗಾಲಾಗಿದ್ದು, ಕಲಬುರ್ಗಿಯ ವೆಂಕಟೇಶ ‌ನಗರ, ಗೋದುತಾಯಿ ಕಾಲೊನಿ, ಪಂಚಶೀಲ ನಗರ, ಪೂಜಾ ಕಾಲೊನಿ ಸೇರಿದಂತೆ ಅನೇಕ ಬಡಾವಣೆಗಳು ಜಲಾವೃತಗೊಂಡಿವೆ.

ಮಳೆ ನೀರನ್ನು ಹೊರಹಾಕಲು ಜನರು ಪರದಾಡುತ್ತಿದ್ದಾರೆ. ಆದರೆ ನಿರಂತರವಾಗಿ ‌ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು, ಚರಂಡಿಗಳು, ಉದ್ಯಾನಗಳಲ್ಲಿ ನೀರು ತುಂಬಿ ಹರಿಯುತ್ತಿದೆ.

ಕಳೆದ 20 ವರ್ಷಗಳಲ್ಲಿ ಇಂತಹ ಭಾರಿ ಮಳೆ ಸುರಿದಿರಲಿಲ್ಲ ಎಂದು ನಗರದ ನಿವಾಸಿಗಳು ನೆನಪಿಸಿಕೊಳ್ಳುತ್ತಿದ್ದಾರೆ.ಚಿಂಚೋಳಿ ಹಾಗೂ ಕಾಳಗಿ ತಾಲ್ಲೂಕಿನ ಹಲವೆಡೆ ಮನೆಗಳಿಗೆ ‌ನೀರು ನುಗ್ಗಿದೆ. ಜಿಲ್ಲೆಯ ‌ಭೀಮಾ, ಕಾಗಿಣಾ, ಕಮಲಾವತಿ ನದಿಗಳು‌ ಉಕ್ಕಿ ಹರಿಯುತ್ತಿವೆ.

ತುಂಬಿದ ಬಸವಕಲ್ಯಾಣದ‌ ಚುಳಕಿನಾಲಾ

ಬೀದರ್: ಬೀದರ್ ತಾಲ್ಲೂಕಿನ ಚಿಮಕೋಡ್ ಕೆರೆ, ಚಿಟಗುಪ್ಪ ತಾಲ್ಲೂಕಿನ ರಾಮಪುರ ಗ್ರಾಮದ ಮಾಶಟ್ಟಿ ಕೆರೆ ಹಾಗೂ ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದ ಕೆರೆ ತುಂಬಿ ಹರಿಯುತ್ತಿವೆ.

ಬಸವಕಲ್ಯಾಣದ‌ ಚುಳಕಿನಾಲಾ ತುಂಬಿದ್ದರಿಂದ ಗೇಟುಗಳ ಮೂಲಕ ನೀರು ಹರಿಯುತ್ತಿದೆ.


ಬೀದರ್ ಕೆಇಬಿ ಸಿಬ್ಬಂದಿ ವಸತಿಗ್ರಹಗಳಿಗೆ ಮಳೆ ನೀರು ನುಗ್ಗಿದೆ

ದ.ಕ. ಜಿಲ್ಲೆಯಲ್ಲಿ ಮುಂದುವರಿದ ಮಳೆ ಅಬ್ಬರ

ಮಂಗಳೂರು: ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದೆ. ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ದಕ್ಷಿಣ ಕನ್ನಡ, ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮಂಗಳೂರಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಕೊಟ್ಟಾರ ಚೌಕಿ ಬಳಿಯ ಮಾಲೇಮಾರ್‌ನಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ಕೆಲವೊಂದು ಮನೆಗಳಿಗೆ ನೀರು ನುಗ್ಗಿದೆ. ಇದೇ ಪ್ರದೇಶದಲ್ಲಿ ತಡೆಗೋಡೆಯೊಂದು ಕುಸಿದು ಬಿದ್ದಿದೆ.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಂಗಳವಾರ ಬೆಳಿಗ್ಗೆತಯಿಂದಲೇ ಮಳೆ ಆರಂಭಗೊಂಡು ದಿನವಿಡೀ ಸುರಿಯುತ್ತಿತ್ತು. ಮಂಗಳೂರು ನಗರದ ಪಡೀಲ್‌, ಕೊಟ್ಟಾರ, ಪಂಪ್‌ವೆಲ್‌, ನಂತೂರು, ಉರ್ವಸ್ಟೋರ್‌ ಸೇರಿದಂತೆ ಸುತ್ತಮುತ್ತ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ಪಡೀಲ್‌ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿತ್ತು.

ನೀರುಮಾರ್ಗದ ಸಮೀಪ ರಾಮರಬೈಲ್ ಹಾಗೂ ಕೊಟ್ಟಾರದಲ್ಲೂ ತಡರಾತ್ರಿ ಸುರಿದ ಮಳೆಗೆ ತೋಟಗಳಿಗೆ ನೀರು ನುಗ್ಗಿದ್ದು, ಕೆಲವೊಂದೆಡೆ ಗುಡ್ಡ ಕುಸಿತ ಸಂಭವಿಸಿದೆ.

ಕಾರಿಂಜೇಶ್ವರ ದೇಗುಲದ ತಡೆಗೋಡೆ ಕುಸಿತ

ಮಂಗಳೂರು: ಭೂ ಕೈಲಾಸ ಪ್ರತೀತಿ ಹೊಂದಿರುವ ಬಂಟ್ವಾಳ ತಾಲ್ಲೂಕಿನ ಮಹತೋಭಾರ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆ ಕುಸಿದು ಬಿದ್ದಿದೆ.

ಈಶ್ವರ (ಶ್ರೀ ಕಾರಿಂಜೇಶ್ವರ) ದೇವಸ್ಥಾನದ ಎಡಭಾಗದ ಬದಿಗೆ ಕಟ್ಟಿದ್ದ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿದ್ದು, ಬುಧವಾರ ಬೆಳಿಗ್ಗೆ ಸಿಬ್ಬಂದಿ ಗಮನಕ್ಕೆ ಬಂದಿದೆ. ಈ ಅಂಗಣವನ್ನು ವಾನರಗಳಿಗೆ ನೈವೇದ್ಯ ಹಾಕಲು ಬಳಸಲಾಗುತ್ತಿದ್ದು, ಅಂಗಣದ ಇಂಟರ್ ಲಾಕ್ ಕಿತ್ತುಹೋಗಿದೆ.

ದೇವಸ್ಥಾನ ಬೃಹತ್ ಬಂಡೆಯ ಮೇಲೆ ಸ್ಥಾಪಿತಗೊಂಡಿದ್ದು, ನಾಲ್ಕು ಯುಗಗಳ ಪುರಾಣ ಇತಿಹಾಸ ಹೊಂದಿದೆ. ಕುಸಿದ ಭಾಗದ ಕೆಳಭಾಗದಲ್ಲಿ ಕಲ್ಲು, ಮಣ್ಣಿನ ದಿಬ್ಬವಿದ್ದು, ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಆಡಳಿತಾಧಿಕಾರಿ ನೋಣಯ್ಯ ನಾಯ್ಕ್ ತಿಳಿಸಿದ್ದಾರೆ.

ತಜ್ಞರ ಪರಿಶೀಲನೆ ಬಳಿಕ ಪರಿಹಾರೋಪಾಯ ನಡೆಸಬೇಕಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗುಡ್ಡ ಕುಸಿತ: ಅಪಾಯದ ಆತಂಕ

ಬಂಟ್ವಾಳ: ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಹಲವೆಡೆ ಸಣ್ಣಪುಟ್ಟ ಹಾನಿ ಸಂಭವಿಸಿದೆ. ಬಿ.ಸಿ.ರೋಡು- ಪುಂಜಾಲಕಟ್ಟೆ ರಸ್ತೆ ಬಸ್ತಿಕೋಡಿ ಬಳಿ ಅಗೆದ ಗುಡ್ಡ ಕುಸಿಯಲಾರಂಭಿಸಿದ್ದು, ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಗುಡ್ಡದ ಮೇಲೆ ಬೃಹದಾಕಾರದ ಮರಗಳಿದ್ದು, ಆತಂಕಕ್ಕೆ ಕಾರಣವಾಗಿದೆ.

ಬಾಳ್ತಿಲ ಗ್ರಾಮದ ಸಣ್ಣಕುಕ್ಕು ವನಜಾಕ್ಷಿ ಅವರ ಕಚ್ಚಾ ಮನೆಯ ಒಂದು ಭಾಗ ಕುಸಿದು ಬಿದ್ದಿದೆ‌. ಕೆದಿಲ ಗ್ರಾಮದ ಕೃಷ್ಣಮೂರ್ತಿ ಅವರ ಅಡಿಕೆ ತೋಟಕ್ಕೆ ನೀರು ನುಗ್ಗಿ ಹಾನಿಯಾಗಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟವೂ ಏರಿದ್ದು, ಬುಧವಾರ ಬೆಳಿಗ್ಗೆ 6.5 ಮೀಟರ್ ಇತ್ತು.

ಪ್ರವಾಹಕ್ಕೆ ಕುರಿಕೋಟಾ ಗ್ರಾಮ ತತ್ತರ

ಕಮಲಾಪುರ (ಕಲಬುರ್ಗಿ): ಧಾರಾಕಾರ ಮಳೆಯಿಂದಾಗಿ ತಾಲ್ಲೂಕಿನ ಕುರಿಕೋಟಾ ಗ್ರಾಮದಲ್ಲಿ ಬೆಣ್ಣೆತೊರಾ ಜಲಾಶಯದ ಹಿನ್ನೀರು ನುಗ್ಗಿ ಅಪಾರ ಹಾನಿಯಾಗಿದೆ.

ದವಸಧಾನ್ಯಗಳು ತೊಯ್ದು ತೊಪ್ಪೆಯಾಗಿವೆ. ಪ್ರವಾಹ ಏರುಗತಿಯಲ್ಲಿರುವುದರಿಂದ ಗ್ರಾಮಸ್ಥರು ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಎತ್ತಿನ ಚಕ್ಕಡಿ, ಟಂ ಟಂಗಳಲ್ಲಿ ಮನೆ ಸಾಮಾನು ಸಾಗಣೆ ಮಾಡುತ್ತಿದ್ದಾರೆ.

ಗ್ರಾಮ ಪಂಚಾಯಿತಿ, ಅಂಗನವಾಡಿ ಕೇಂದ್ರಗಳಿಗೂ ನೀರು ನುಗ್ಗಿದೆ. ಮಕ್ಕಳು, ಮಹಿಳೆಯರು, ವೃದ್ಧರೆಲ್ಲ ಮನೆ ಖಾಲಿಮಾಡುವಲ್ಲಿ ನಿರತರಾಗಿದ್ದಾರೆ. ಮಕ್ಕಳ ಪುಸ್ತಕ, ನೋಟ ಬುಕ್‌ಗಳು ತೋಯ್ದು ತೊಪ್ಪೆಯಾಗಿವೆ.

ಗಂಡೋರಿ ನಾಲಾದಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿದೆ. ಗ್ರಾಮದ ಶಾಲೆಯಲ್ಲಿ ತಾತ್ಕಾಲಿಕವಾಗಿ ‌ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ.


 ಮನೆಗಳನ್ನು ಖಾಲಿ ಮಾಡುತ್ತಿರುವ ಗ್ರಾಮಸ್ಥರು

ಮಳೆಯಿಂದ ನೆಲಕಚ್ಚಿದ ರೈತನ ಬದುಕು

ರಾಯಚೂರು: ಜಿಲ್ಲೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಭತ್ತವು ನಿರಂತರ ಮಳೆಯಿಂದಾಗಿ ನೆಲಕಚ್ಚಿದ್ದು, ಬೆಳೆ ಅವಲಂಬಿಸಿರುವ ರೈತನ ಬದುಕು ಕೂಡಾ ಕುಸಿದಂತಾಗಿದೆ.

ರಾಯಚೂರು ತಾಲ್ಲೂಕಿನ ಸರ್ಜಾಪೂರ ಗ್ರಾಮದಲ್ಲಿ ಭಾರಿ ಮಳೆಯಿಂದ ಹರಿದು ಬರುತ್ತಿರುವ ನೀರು ಹತ್ತಿ ಹಾಗೂ ಭತ್ತದ ಗದ್ದೆಗಳಲ್ಲಿ ಕಾಲುವೆಯಂತೆ ಹರಿಯುತ್ತಿದೆ. ತಗ್ಗು ಪ್ರದೇಶದ ಜಮೀನುಗಳಲ್ಲಿ ಬೆಳೆಗಳೆಲ್ಲ ಜಲಾವೃತವಾಗಿವೆ. ಜಲಾವೃತಗೊಂಡ ಮಾರ್ಗಗಳಲ್ಲಿ ರೈತರು ತಮ್ಮ ಜಮೀನುಗಳಿಗೆ ಹೋಗಲಾಗುತ್ತಿಲ್ಲ.

ಮಾನ್ವಿ ತಾಲ್ಲೂಕಿನ ಚೀಕಲಪರ್ವಿಯಲ್ಲಿ ಕಾಳುಕಟ್ಟಿದ್ದ ಭತ್ತಕ್ಕೆ, ಬಿಸಿಲು ವಾತಾವರಣ ಅಗತ್ಯವಿತ್ತು. ಆದರೆ ಮೋಡಕವಿದ ವಾತಾವರಣ ಮತ್ತು ಅಧಿಕ ಮಳೆ ಕಾರಣ ಭತ್ತವು ನೆಲಕ್ಕೆ ಒರಗಿದೆ. ಭತ್ತ ಬೆಳೆಯಲು ಸಾವಿರಾರು ರೂಪಾಯಿ ವೆಚ್ಚ ಮಾಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.


ಮಳೆಯಿಂದಾಗಿ ನೆಲಕ್ಕೆ ಒರಗಿರುವ ಭತ್ತ

ವಿಜಯಪುರ ಜಿಲ್ಲೆಯಾದ್ಯಂತ ಬಿರುಸಿನ ಮಳೆ

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದ ಬುಧವಾರ ದಿನ ಪೂರ್ತಿ ಬಿಡುವು ನೀಡದೆ  ಬಿರುಸಿನ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

ತಾಳಿಕೋಟೆ- ಹಡಗಿನಾಳ ನಡುವಿನ ನೆಲಮಟ್ಟದ ಸೇತುವೆ ಮುಳುಗಡೆಯಾಗಿದೆ. ದೇವರ ಹಿಪ್ಪರಗಿ-ಬಸವನ ಬಾಗೇವಾಡಿ ಸಂಪರ್ಕಿಸುವ ರಸ್ತೆ ಸಾತಿಹಾಳದ ಬಳಿ ಡೋನಿ ನದಿ ಪ್ರವಾಹದಲ್ಲಿ ಮುಳುಗಿದೆ.  

ಸಿಂದಗಿ ತಾಲ್ಲೂಕಿನ ಮೋರಟಗಿ ಜನತಾ ಕಾಲೊನಿಯಲ್ಲಿ ವಾಸವಾಗಿರುವ ಐದು ಗೊಂದಳಿ ಕುಟುಂಬದ ಮನೆಗಳಿಗೆ ಮಂಗಳವಾರ  ರಾತ್ರಿ ನೀರು ನುಗ್ಗಿ 25 ಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ.  ಅಕ್ಕಿ, ಗೋದಿ ಮತ್ತಿತರ ದಿನಸಿಗಳೆಲ್ಲ  ನೀರು ಪಾಲಾಗಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಇಡೀ ರಾತ್ರಿ ನೀರಲ್ಲೆ ಕಾಲ ಕಳೆದಿದ್ದು, ಬುಧವಾರ ಬೆಳಿಗ್ಗೆ ತಹಶೀಲ್ದಾರ್ ಸಂಜೀವಕುಮಾರ ದಾಸರ ಗ್ರಾಮಕ್ಕೆ ಭೇಟಿ ನೀಡಿ ಕಾಲೊನಿಯಲ್ಲಿರುವ ಶಾಲೆಯಲ್ಲಿ ತಾತ್ಕಾಲಿಕ ನಿರಾಶ್ರಿತ ಕೇಂದ್ರ ಮಾಡಿ ವಾಸ್ತವ್ಯ, ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ.

ಕೊಪ್ಪಳ: ದಿನವಿಡಿ ಸುರಿದ ಜಿಟಿಜಿಟಿ ಮಳೆ

ಕೊಪ್ಪಳ: ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಆರಂಭವಾದ ಜಿಟಿಜಿಟಿ  ಮಳೆ ಬಿಟ್ಟೂ ಬಿಡದೆ ಬರುತ್ತಿದೆ.

ಮಂಗಳವಾರ ಅಲ್ಪ ವಿರಾಮ ನೀಡಿತ್ತು. ಕೆಲಹೊತ್ತು ಪ್ರಖರ ಬಿಸಿಲಿನ ವಾತಾವರಣ ಇತ್ತು. ಸಂಜೆಯಾಗುತ್ತಿದ್ದಂತೆ ದಟ್ಟವಾದ ಮೋಡಗಳು ಆವರಿಸಿ ಮಳೆ ಶುರುವಾಯಿತು. ಜಿಟಿಜಿಟಿ ಮಳೆಯಿಂದ ವಾಹನ ಸವಾರರಿಗೆ ತೀವ್ರ ಕಿರಿಕಿರಿ ಉಂಟಾಗಿದೆ. ಕೆಲವು ಬಡಾವಣೆಯ ಮಣ್ಣಿನ ರಸ್ತೆಗಳು ಮಳೆಗೆ ಕಿತ್ತುಕೊಂಡು ಹೋಗಿವೆ.

ಅಲ್ಲದೆ ಸಂಚಾರಕ್ಕೆ ಬಾರದಷ್ಟು ರಾಡಿ, ರೊಜ್ಜಿನಿಂದ ಹದಗೆಟ್ಟು ಹೋಗಿವೆ. ಕೃಷಿ ಕಾರ್ಯ ಸಂಪೂರ್ಣ ಸ್ತಬ್ಧಗೊಂಡಿದೆ. ಹಿಂಗಾರು ಬಿತ್ತನೆಗೆ ಸಜ್ಜುಗೊಂಡಿದ್ದ ರೈತರು ಪರಿತಪಿಸುವಂತೆ ಆಗಿದೆ. ಮಳೆಗೆ ಹತ್ತಿ, ಶೇಂಗಾ, ಈರುಳ್ಳಿ ಸಂಪೂರ್ಣ ಕೊಳೆತುಹೋಗಿವೆ.

ಜಿಲ್ಲೆಯ ಕುಷ್ಟಗಿ, ಹನಮಸಾಗರ, ಗಂಗಾವತಿ, ಕಾರಟಗಿಯಲ್ಲಿ ವ್ಯಾಪಕ ಗಾಳಿ ಬೀಸಿದೆ. ಗಾಳಿ ಮಳೆಗೆ ಭತ್ತ ನೆಲಕಚ್ಚಿದೆ. ಕಪ್ಪು ಮಣ್ಣಿನ ಜಮೀನುಗಳಲ್ಲಿ ಕಾಲು ಇಡಲಾರದಷ್ಟು ರೊಜ್ಜು ತುಂಬಿಕೊಂಡಿದೆ.

ಗಂಗಾವತಿ ನಗರ ಹಾಗೂ ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿಯಿಂದ ಜಿಟಿ ಜಿಟಿ ಮಳೆ ಶುರುವಾಗಿದ್ದು, ಬುಧವಾರ ಮೋಡ ಕವಿದ ವಾತಾವರಣವಿದೆ.

ತಾಲ್ಲೂಕಿನ ಮಲ್ಲಾಪುರ, ಸಂಗಾಪುರ, ರಾಂಪುರ, ಆನೆಗೊಂದಿ, ಸಣಾಪುರ ಭಾಗದಲ್ಲಿ ಮಳೆ-ಗಾಳಿಗೆ ಭತ್ತವು ನೆಲಕ್ಕುರಳಿದ್ದ ವರದಿಯಾಗಿದೆ.

ಕುಕನೂರು ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಜಿಟಿಜಿಟಿ ಮಳೆ ಯಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಇಂದು ಬೆಳಗ್ಗೆ ಗಾಳಿ ಹಾಗೂ ಜಿಟಿಜಿಟಿ ಮಳೆಯಾಗುತ್ತಿದೆ. ಜಿಲ್ಲೆಯಾದ್ಯಂತ ಸಂಪೂರ್ಣ ಮೋಡ ಕವಿದ ವಾತಾವರಣವಿದೆ.


ಕೊಪ್ಪಳ ತಾಲ್ಲೂಕಿನ ಗಂಗಾವತಿ ರಸ್ತೆಯಲ್ಲಿ ಗಾಳಿ ಮಳೆಗೆ ನೆಲಕಚ್ಚಿರುವ ಭತ್ತ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು