ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗ್ರೀವಾಜ್ಞೆ ಹಿಂದೆ ದುರುದ್ದೇಶ: ಸಿದ್ದರಾಮಯ್ಯ

Last Updated 29 ಡಿಸೆಂಬರ್ 2020, 20:10 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಮಂಡಲದಲ್ಲಿ ಚರ್ಚೆಯನ್ನೇ ಮಾಡದೆ ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಮಸೂದೆಯನ್ನು ಜಾರಿಗೊಳಿಸುತ್ತಿರುವುದರ ಹಿಂದೆ ದುರುದ್ದೇಶವಿದೆ. ಇದು ಬಿಜೆಪಿ ಸರ್ಕಾರದ ಹೇಡಿತನವನ್ನು ತೋರಿಸುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಈ ಕುರಿತು ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಚರ್ಚೆ ಮಾಡಿದರೆ ಮಸೂದೆಯ ಹಿಂದಿನ ದುರುದ್ದೇಶ ಅನಾವರಣಗೊಂಡು ಬಣ್ಣ ಬಯಲಾಗುತ್ತದೆ ಎಂಬ ಭಯ ಬಿಜೆಪಿಯವರಿಗೆ ಇದೆ. ಮತೀಯ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಲು ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಪುಂಡಾಟಿಕೆ ನಡೆಸುವವರಿಗೆ ರಕ್ಷಣೆ ನೀಡುವ ದುರುದ್ದೇಶದಿಂದ ಈ ಮಸೂದೆ ರೂಪಿಸಲಾಗಿದೆ’ ಎಂದು ಆರೋಪಿಸಿದರು.

ಗೋಹತ್ಯೆ ಮಾತ್ರ ನಿಷೇಧ, ಗೋಮಾಂಸ ಮಾರಾಟ ನಿಷೇಧ ಇಲ್ಲ ಎನ್ನುತ್ತಿದ್ದಾರೆ. ಮಾರಾಟ ಮಾಡಲು ಗೋಮಾಂಸ ಆಮದು ಮಾಡಿಕೊಳ್ಳುತ್ತಾರಾ? ಈ ಕಾಯ್ದೆ ಜಾರಿಯಾದರೆ ರೈತರಿಗೆ ಮಾತ್ರವಲ್ಲ ಚರ್ಮೋದ್ಯಮಕ್ಕೂ ತೊಂದರೆ ಆಗಲಿದೆ. ವಯಸ್ಸಾದ ಗೋವುಗಳ ನಿರ್ವಹಣೆಯನ್ನು ಸರ್ಕಾರ ಮಾಡಲಿದೆ ಎಂದು ಹೇಳುತ್ತಿದ್ದಾರೆ. ಇದಕ್ಕಾಗಿ ಎಷ್ಟು ಗೋಶಾಲೆಗಳನ್ನು ತೆರೆಯಲಾಗಿದೆ? ಎಷ್ಟು ಅನುದಾನ ಒದಗಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

‘ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂದು ಹೇಳುವ ಬಿಜೆಪಿಯವರು ದೇಶಕ್ಕೆಲ್ಲ ಅನ್ವಯವಾಗುವ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲಿ. ಬಿಜೆಪಿ ಆಡಳಿತವಿರುವ ಗೋವಾ, ಈಶಾನ್ಯ ರಾಜ್ಯಗಳಿಗೂ ಆ ಕಾಯ್ದೆಯನ್ನು ಅನ್ವಯಿಸಲಿ’ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT