'ಕೋಲಾರ' ಬದಲಿಸುವಂತೆ ಸಿದ್ದರಾಮಯ್ಯಗೆ ಸಲಹೆ; ಹೈಕಮಾಂಡ್ ನಿಲುವಿನಿಂದ ‘ಕೈ’ ತಳಮಳ

ಕೋಲಾರ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ವಿಷಯ ಜಿಲ್ಲೆಯ ರಾಜಕಾರಣದಲ್ಲಿ ಒಂದೂವರೆ ತಿಂಗಳಿನಿಂದ ಹೊಸ ಅಲೆ ಸೃಷ್ಟಿಸಿತ್ತು. ಈಗ ಅವರಿಗೆ ಕ್ಷೇತ್ರ ಬದಲಿಸುವಂತೆ ಪಕ್ಷದ ಹೈಕಮಾಂಡ್ ಸಲಹೆ ನೀಡಿರುವ ಸಂಗತಿ ಕಾಂಗ್ರೆಸ್‌ನಲ್ಲಿ ತಳಮಳ ಸೃಷ್ಟಿಸಿದೆ.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರನ್ನು ವರ್ಷದಿಂದ ಒತ್ತಾಯಿಸುತ್ತಿದ್ದ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮುಖಂಡರು ಈಗ ಹೈಕಮಾಂಡ್ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಯಕರ್ತರೂ ಗೊಂದಲಕ್ಕೆ ಒಳಗಾಗಿದ್ದಾರೆ. ‘ಹೆದರಿ ಓಡಿಹೋದ ಸಿದ್ದರಾಮಯ್ಯ’ ಎಂದು ಪ್ರತಿಪಕ್ಷಗಳು ಟೀಕಾ ಪ್ರಹಾರ ನಡೆಸಿದರೆ, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
‘ಬಾದಾಮಿ ಕ್ಷೇತ್ರ ಬೆಂಗಳೂರಿಗೆ ಬಹಳ ದೂರವಿರುವುದರಿಂದ ಸಂಚರಿಸಲು ಕಷ್ಟವಾಗುತ್ತದೆ. ಈ ಬಾರಿ ಕೋಲಾರದಲ್ಲೇ ಸ್ಪರ್ಧೆ ಮಾಡುತ್ತೇನೆ’ ಎಂದು ಸಿದ್ದರಾಮಯ್ಯ ಸಾರ್ವಜನಿಕ ಸಭೆಯಲ್ಲಿ ಘೋಷಿಸಿದ್ದರು. ಆದರೆ, ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದಾಗಿಯೂ ಹೇಳಿದ್ದರು. ಸ್ಪರ್ಧೆಗೆ ಈಗ ಹೈಕಮಾಂಡ್ ಒಪ್ಪಿಗೆ ನೀಡಿಲ್ಲವೋ ಅಥವಾ ಆಂತರಿಕ ಸಮೀಕ್ಷೆಗಳು ಸಿದ್ದರಾಮಯ್ಯ ಪರವಾಗಿ ಇರಲಿಲ್ಲವೋ ಎಂಬ ಚರ್ಚೆಗಳು ಕ್ಷೇತ್ರದಲ್ಲಿ ನಡೆಯುತ್ತಿವೆ.
ಕ್ಷೇತ್ರದಲ್ಲಿ 20 ವರ್ಷಗಳಿಂದ ಗೆಲ್ಲದ ಕಾಂಗ್ರೆಸ್‌ಗೆ ಮತಗಟ್ಟೆ ಹಂತದಲ್ಲಿ ಕಾರ್ಯಕರ್ತರ ಕೊರತೆ ಇದೆ. ಇದು ಕೂಡ ಅವರು ಹಿಂದೆ ಸರಿಯಲು ಕಾರಣವಾಗಿರಬಹುದೆಂದು ಹೇಳಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ನಡುವೆ ಹೊಂದಾಣಿಕೆ ಇಲ್ಲ. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಸಿದ್ದರಾಮಯ್ಯ ನಡುವೆ ಸಂಬಂಧ ಸುಧಾರಿಸಿದ್ದರೂ, ಮುನಿಯಪ್ಪ ಹಾಗೂ ಶಾಸಕ ಕೆ.ಆರ್.ರಮೇಶ್ ಕುಮಾರ್ ಬೆಂಬಲಿಗರ ನಡುವೆ ವೈಮನಸ್ಸು ಶಮನಗೊಂಡಿಲ್ಲ.
ಈಚೆಗೆ ಕ್ಷೇತ್ರದಲ್ಲಿ ಕೆಲ ದಲಿತ ಸಂಘಟನೆಗಳು ಸಿದ್ದರಾಮಯ್ಯ ವಿರುದ್ಧ ಕರಪತ್ರ ಚಳವಳಿ ಆರಂಭಿಸಿದ್ದವು. ‘ಸಿದ್ದರಾಮಯ್ಯ ದಲಿತ ವಿರೋಧಿ’ ಎಂಬಂತೆ ಬಿಂಬಿಸುವ ಪ್ರಯತ್ನವೂ ನಡೆದಿತ್ತು. ಅಲ್ಲದೇ, 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆದಂತೆ ಇಲ್ಲಿಯೂ ಜೆಡಿಎಸ್–ಬಿಜೆಪಿ ಹೊಂ ದಾಣಿಕೆ ಮಾಡಿಕೊಳ್ಳಬಹುದು ಎಂಬ ಆತಂಕವೂ ಅವರಲ್ಲಿತ್ತು ಎನ್ನಲಾಗಿದೆ.
ಇಷ್ಟಾಗಿಯೂ ಸಿದ್ದರಾಮಯ್ಯ ಮೂರು ತಿಂಗಳಲ್ಲಿ ನಾಲ್ಕು ಬಾರಿ ಕೋಲಾರಕ್ಕೆ ಭೇಟಿ ನೀಡಿ ಸಭೆ ನಡೆಸಿದ್ದರು. ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೂಡ ಭೇಟಿ ನೀಡಿ ಗ್ರಾಮಗಳಲ್ಲಿ ಸಭೆ ನಡೆಸಿದ್ದರು. ಬೆಂಗಳೂರಿನ ಖಾಸಗಿ ಸಂಸ್ಥೆ ‘ಪೋಲ್ ಹೌಸ್’ ನೇತೃತ್ವದಲ್ಲಿ ‘ವಾರ್ ರೂಮ್’ ಸ್ಥಾಪಿಸಿ ಚುನಾವಣಾ ತಯಾರಿಯ ಚಟುವಟಿಕೆಗಳನ್ನು ಆರಂಭಿಸಿದ್ದರು. ಬಾಡಿಗೆ ಮನೆಯನ್ನು ಗುರುತಿಸಿಟ್ಟಿದ್ದರು. ಹೀಗಾಗಿ, ಕೋಲಾರ ‘ಹೈವೋಲ್ಟೇಜ್’ ಕ್ಷೇತ್ರವಾಗಿ ಬದಲಾಗಿತ್ತು. ರಾಜಕೀಯ ಚಟುವಟಿಕೆಗಳು, ತಂತ್ರಗಾರಿಕೆ ಬಿರುಸು ಪಡೆದುಕೊಂಡಿದ್ದವು. ಸಿದ್ದರಾಮಯ್ಯ ಸ್ಪರ್ಧಿಸಿದರೆ ಜಿಲ್ಲೆಯಾದ್ಯಂತ ಕಾಂಗ್ರೆಸ್‌ಗೆ ಬಲ ಬರುತ್ತದೆ ಎಂಬ ನಿರೀಕ್ಷೆ ಪಕ್ಷದ ಮುಖಂಡರಲ್ಲಿತ್ತು. ತಮ್ಮ ಗೆಲವಿಗೂ ಅನುಕೂಲಕರ ವಾತಾವರಣ ಸೃಷ್ಟಿಯಾಗಬಹುದು ಎಂದುಕೊಂಡಿದ್ದ ಜಿಲ್ಲೆಯ ಕಾಂಗ್ರೆಸ್ ಶಾಸಕರಲ್ಲಿ ಈಗ ಬೇಸರ ಮನೆಮಾಡಿದೆ.
ಸಿದ್ದರಾಮಯ್ಯ ಕೋಲಾರ ಭೇಟಿ ಮುಂದೂಡಿಕೆ
ಕೋಲಾರ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕೋಲಾರ ಭೇಟಿಯನ್ನು ದಿಢೀರ್ ಮುಂದೂಡಲಾಗಿದೆ.
ಕೋಲಾರ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಮಾರ್ಚ್ 19ರಂದು, ನಗರ ಪ್ರದೇಶದಲ್ಲಿ ಮಾರ್ಚ್ 21ರಂದು ಪ್ರಚಾರ ಹಾಗೂ ಸಾರ್ವಜನಿಕ ಸಭೆ ನಡೆಸಲು ವೇಳಾಪಟ್ಟಿ ನಿಗದಿಯಾಗಿತ್ತು.
ಈ ಸಂಬಂಧ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ಹಾಗೂ ನಸೀರ್ ಅಹಮದ್ ಪೂರ್ವಭಾವಿ ಸಭೆ ನಡೆಸಿ ಸ್ವಾಗತಕ್ಕೆ ಸಿದ್ಧರಾಗಿದ್ದರು.
ಈ ಹಿಂದೆಯೇ ಹೇಳಿದ್ದೆ: ಬಿ.ಎಸ್. ಯಡಿಯೂರಪ್ಪ
ತಿಪಟೂರು: ‘ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಈ ಹಿಂದಿಯೇ ಹೇಳಿದ್ದೆ. ಆ ಮಾತು ನಿಜ ಆಗಬಹುದು. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರ ಗೊತ್ತಾಗಲಿದೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು,
‘ಸಿದ್ದರಾಮಯ್ಯ ಅನಗತ್ಯವಾಗಿ ಓಡಾಡಿ, ಅಲ್ಲಿ, ಇಲ್ಲಿ ಎಂದು ಕಥೆ ಹೇಳುತ್ತಾರೆ. ಕೋಲಾರ, ಮತ್ತೊಂದು ಎಂದು ಹೇಳುವ ಅಗತ್ಯ ಇರಲಿಲ್ಲ. ಯಾಕೆ ಆ ರೀತಿ ಗೊಂದಲ ಮೂಡಿಸುತ್ತಾರೋ ಗೊತ್ತಿಲ್ಲ. ನನ್ನ ಪ್ರಕಾರ ವರುಣಾದಲ್ಲೇ ನಿಲ್ಲುತ್ತಾರೆ’ ಎಂದರು.
‘ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ನಾನೂ ರಾಜಕೀಯ ನಿವೃತ್ತಿ’
ಕೋಲಾರ: ‘ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಅವರ ಪರ ಕೆಲಸ ಮಾಡುತ್ತೇನೆ. ಅವರು ಇಲ್ಲಿ ಕಣಕ್ಕಿಳಿಯದಿದ್ದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ’ ಎಂದು ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘ರಾಜ್ಯಕ್ಕೆ ಮೊದಲನೇ ಮುಖ್ಯಮಂತ್ರಿ ನೀಡಿದ ಜಿಲ್ಲೆ ಕೋಲಾರ. ಮತ್ತೊಬ್ಬ ಮುಖ್ಯಮಂತ್ರಿಯನ್ನು ಇಲ್ಲಿಂದ ನೀಡಬೇಕೆಂಬುದು ನಮ್ಮ ಮಹದಾಸೆಯಾಗಿತ್ತು. ಆದರೆ, ಹೈಕಮಾಂಡ್ ಬೇಡವೆಂದರೆ ಅವರೇನು ಮಾಡುತ್ತಾರೆ?’ ಎಂದರು.
‘ಕೋಲಾರದಿಂದ ಸ್ಪರ್ಧಿಸಿದ್ದರೆ ಸಿದ್ದರಾಮಯ್ಯ ಖಂಡಿತ ಗೆಲ್ಲುತ್ತಿದ್ದರು. ಅವರು ಸ್ಪರ್ಧಿಸುತ್ತಾರೆ ಎಂಬ ವಿಶ್ವಾಸ ನನಗೆ ಇನ್ನೂ ಇದೆ. ನಾನು ಸ್ಪರ್ಧೆ ಮಾಡುವುದಿಲ್ಲ. ಈ ವಿಚಾರವಾಗಿ ಅವರೊಂದಿಗೆ ಮಾತನಾಡುವುದಿಲ್ಲ, ಬೇಕಾದರೆ ಅವರೇ ಮಾತನಾಡಲಿ’ ಎಂದು ಹೇಳಿದರು.
*
ಈಗಲೂ ಸಿದ್ದರಾಮಯ್ಯ ಅವರ ಸ್ಪರ್ಧೆಗೆ ಮೊದಲ ಆದ್ಯತೆ ಕೊಡುತ್ತೇನೆ. ಅವರು ಸ್ಪರ್ಧಿಸದಿದ್ದರೆ ಹಾಗೂ ಹೈಕಮಾಂಡ್ ಸೂಚಿಸಿದರೆ ನಾನು ಸ್ಪರ್ಧಿಸುತ್ತೇನೆ.
–ಬ್ಯಾಲಹಳ್ಳಿ ಗೋವಿಂದೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕೋಲಾರ
*
ಮೊದಲೇ ಹೇಳಿದ್ದರೆ ನಾನಾದರೂ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಈಗ ಕೈಕೊಟ್ಟರೆ ಹೇಗೆ? ಒಂದು ತಿಂಗಳಲ್ಲಿ ನಾನು ಹೇಗೆ ಸಿದ್ಧತೆ ನಡೆಸಲಿ. ನನ್ನ ಸ್ಪರ್ಧೆ ಸಾಧ್ಯತೆ ಕಡಿಮೆ.
–ಕೆ.ಶ್ರೀನಿವಾಸಗೌಡ, ಶಾಸಕ
*
ಚಾಮುಂಡೇಶ್ವರಿ, ಕೋಲಾರ, ವರುಣಾ ಹಾಗೂ ಬಾದಾಮಿ, ಕ್ಷೇತ್ರಗಳು ಸಿದ್ದರಾಮಯ್ಯ ಅವರಿಗೆ ಸುರಕ್ಷಿತವಿಲ್ಲ ಎನ್ನುವುದು ಸ್ಪಷ್ಟವಾಗಿದೆ.
–ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
*
ಕ್ಷೇತ್ರಕ್ಕಾಗಿ ಸಿದ್ದರಾಮಯ್ಯ ಅವರ ಅಲೆದಾಟ ತಪ್ಪಿದ್ದಲ್ಲ, ಇನ್ನೂ ಮುಂದುವರಿಯುತ್ತದೆ. ಸಿದ್ದರಾಮಯ್ಯ ಕೋಲಾರದಲ್ಲಿ ಗೆಲ್ಲುವುದಿಲ್ಲ ಎಂದು ವರದಿಗಳು ಹೇಳಿದ್ದವು.
–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.