ಶುಕ್ರವಾರ, ಜುಲೈ 30, 2021
26 °C

ಅಗ್ರಿ ಗೋಲ್ಡ್ ಹಗರಣ: ಸುಪ್ರೀಂ ಕೋರ್ಟ್‌ಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಲವು ರಾಜ್ಯಗಳಿಗೆ ವ್ಯಾಪಿಸಿರುವ ಅಗ್ರಿ ಗೋಲ್ಡ್ ಬಹುಕೋಟಿ ಹಗರಣದ ಸಂಬಂಧ ಕೆಲ ನಿರ್ದೇಶನಗಳನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಠೇವಣಿದಾರರ ಪರವಾಗಿ ಗ್ರಾಹಕರು ಮತ್ತು ಏಜೆಂಟರ ಕಲ್ಯಾಣ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ.

ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ಕೆಪಿಐಡಿ) ಕಾಯ್ದೆಯಡಿ ರಚನೆಯಾಗಿರುವ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಹರ್ಷಗುಪ್ತ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಬುಧವಾರ ವಿಚಾರಣೆಗೆ ಹಾಜರಾಗಿದ್ದರು.

‘ಐದು ರಾಜ್ಯಗಳಲ್ಲಿ ಈ ಕಂಪನಿಯ ಹೂಡಿಕೆದಾರರಿದ್ದಾರೆ. ಆಯಾ ರಾಜ್ಯ ಸರ್ಕಾರಗಳು ಮತ್ತು ಅಲ್ಲಿನ ನ್ಯಾಯಾಲಯಗಳು ವಿಭಿನ್ನ ರೀತಿಯಲ್ಲಿ ಆದೇಶ ಹೊರಡಿಸುತ್ತಿವೆ. ಕರ್ನಾಟಕದಲ್ಲಿದ್ದ ಅಗ್ರಿ ಗೋಲ್ಡ್ ಕಂಪನಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ’ ಎಂದು ಅವರು ವಿವರಿಸಿದರು.

‘ಹೀಗಾಗಿ, ಪ್ರಕರಣದಲ್ಲಿ ಒಮ್ಮತದ ತನಿಖೆ ನಡೆಸಲು ಯಾವುದಾದರೊಂದು ಸರ್ಕಾರವನ್ನು ನೋಡಲ್‌ ಆಗಿ ನೇಮಿಸುವ ಅಗತ್ಯವಿದೆ. ಈ ಸಂಬಂಧ ನಿರ್ದೇಶನ ನೀಡಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಹೊರಡಿಸಿರುವ ಆದೇಶಗಳ ಪ್ರತಿಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದ ಪೀಠ, ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿತು.

ಅಗ್ರಿ ಗೋಲ್ಡ್‌ ಕಂಪನಿಯ ಒಟ್ಟು 32 ಲಕ್ಷ ಹೂಡಿಕೆದಾರರಲ್ಲಿ 8.50 ಲಕ್ಷ ಮಂದಿ ಕರ್ನಾಟಕದ ವಿವಿಧ ಶಾಖೆಗಳಲ್ಲಿ ಹೂಡಿಕೆ ಮಾಡಿದವರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು