ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆ ಬರೀ ಕಾಗದದ ಮೇಲೆ: ಸರ್ಕಾರದ ವೈಖರಿಗೆ ಹೈಕೋರ್ಟ್‌ ಅಸಮಾದಾನ

ಸರ್ಕಾರದ ವೈಖರಿಗೆ ಹೈಕೋರ್ಟ್‌ ಅಸಮಾದಾನ
Last Updated 28 ಮಾರ್ಚ್ 2022, 21:05 IST
ಅಕ್ಷರ ಗಾತ್ರ

ಬೆಂಗಳೂರು: ‘ಗೋಶಾಲೆ ನಿರ್ಮಾಣಕ್ಕೆ ಪ್ರತಿ ಜಿಲ್ಲೆಯಲ್ಲೂ ಸ್ಥಳ ಗುರುತಿಸಲಾಗಿದೆ. ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಲಾಗಿದೆ... ಎಂದೆಲ್ಲಾ ಹೇಳುತ್ತೀರಿ. ಆದರೆ, ಅವು ಎಲ್ಲೆಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಕೇಳಿದರೆ ಬರೀ ಕಾಗದ ತೋರಿಸುತ್ತೀರಲ್ಲಾ...’ ಎಂದು ರಾಜ್ಯ ಸರ್ಕಾರದ ಕಾರ್ಯ ವೈಖರಿಗೆ ಹೈಕೋರ್ಟ್‌ ಮತ್ತೊಮ್ಮೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

‘ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಗೋ ಶಾಲೆ ಆರಂಭಿಸಬೇಕು ಮತ್ತು ಈಗಿರುವ ಗೋ‌
ಶಾಲೆಗಳಿಗೆ ಸೂಕ್ತ ಪ್ರಮಾಣದಲ್ಲಿ ಮೇವು, ನೀರು ಮತ್ತು ಜಾಗ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್‌.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಸರ್ಕಾರಿ ವಕೀಲ ಎಚ್‌.ಆರ್‌. ಶೌರಿ, ‘ಸರ್ಕಾರ ಈಗಾಗಲೇ ಜಮೀನುಗಳನ್ನು ಗುರುತಿಸಿದೆ. ಗುರುತಿಸಲಾದ ಜಮೀನು ಗಳಲ್ಲಿ ಗೋಶಾಲೆ ನಿರ್ಮಾಣಕ್ಕಾಗಿ ಹಣವನ್ನೂ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.

ಇದಕ್ಕೆ ನ್ಯಾಯಮೂರ್ತಿ ಕೃಷ್ಣಕುಮಾರ್, ‘ಎಲ್ಲೆಲ್ಲಿ, ಎಷ್ಟು ಗೋಶಾಲೆ ಕಾರ್ಯ ನಿರ್ವಹಿಸುತ್ತಿವೆ’ ಎಂದು ಕೇಳಿದರು. ಈ ಪ್ರಶ್ನೆಗೆ ಶೌರಿ ನಿರುತ್ತರಾದರು.

ಆಗ ಮುಖ್ಯ ನ್ಯಾಯಮೂರ್ತಿಗಳು, ‘ನೀವು ಗೋಶಾಲೆ ಎಲ್ಲಿದೆ ಎಂದರೆ ಬರಿ ಜಮೀನು ಗುರುತಿಸಿದ್ದೇವೆ, ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳುತ್ತೀರಿ, ಎಲ್ಲೆಲ್ಲೆ ಕಾರ್ಯ ನಿರ್ವಹಿಸುತ್ತಿವೆ, ಎಲ್ಲೆಲ್ಲಿ ನಿರ್ಮಾಣ ಮಾಡುತ್ತಿದ್ದೀರಿ, ಎಲ್ಲಿ ಅಭಿವೃದ್ಧಿಪಡಿಸಿದ್ದೀರಿ ಎಂದರೆ ನಿಮ್ಮ ಬಳಿ ಉತ್ತರವೇ ಇಲ್ಲ. ನಿಮ್ಮ ಗೋಶಾಲೆಯೆಲ್ಲಾ ಬರೀ ಕಾಗದದ ಮೇಲೆ ಇದ್ದಂತಿದೆ’ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಕಡತಕ್ಕೆ ತಡಬಡಾಯಿಸಿದ ಶೌರಿ...!

ಸರ್ಕಾರದ ಹೆಚ್ಚುವರಿ ವಕೀಲ ಶೌರಿ ಅವರಿಗೆ ನ್ಯಾಯಮೂರ್ತಿ ಕೃಷ್ಣಕುಮಾರ್, ‘ಹೋಗಲಿ, ಎಲ್ಲೆಲ್ಲಿ ಜಮೀನು ಗುರುತಿಸಿದ್ದೀರಿ, ಹಣ ಎಷ್ಟು ಬಿಡುಗಡೆ ಮಾಡಿದ್ದೀರಿ ಎಂಬ ವಿವರ ವನ್ನಾದರೂ ನೀಡಿ’ ಎಂದಾಗ, ಶೌರಿ ಕಡತಕ್ಕಾಗಿ ತಡಬಡಾಯಿಸಿದರು.

ಇದಕ್ಕೆ ಮತ್ತಷ್ಟು ಅಸಹನೆ ಹೊರಹಾಕಿದ ನ್ಯಾಯಪೀಠ, ‘ನಿಮ್ಮ ಉತ್ತರ ನಮಗೆ ತೃಪ್ತಿ ನೀಡುತ್ತಿಲ್ಲ. ಮುಂದಿನ ವಿಚಾರಣೆ ವೇಳೆಗೆ ವಸ್ತುಸ್ಥಿತಿ ವರದಿಯನ್ನು ಕೋರ್ಟ್‌ಗೆ ಹಾಜರುಪಡಿಸಿ‘ ಎಂದು ಖಡಕ್‌ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ಹಿಂದಿನ ವಿಚಾರಣೆ ವೇಳೆ ಸರ್ಕಾರಿ ವಕೀಲರು, ‘ರಾಜ್ಯದಾದ್ಯಂತ ಒಟ್ಟು 97 ಗೋಶಾಲೆಗಳನ್ನು ತೆರೆಯಲಾಗಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT