ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳವಾರ ವಿರುದ್ಧ ಕ್ರಮ: ಹೈಕೋರ್ಟ್‌

Last Updated 23 ನವೆಂಬರ್ 2021, 16:34 IST
ಅಕ್ಷರ ಗಾತ್ರ

ಬೆಂಗಳೂರು: ‘ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು.ತಳವಾರ ವಿರುದ್ಧ ಇರುವ ಭ್ರಷ್ಟಾಚಾರ ಮತ್ತು ಕರ್ತವ್ಯ
ನಿರ್ಲಕ್ಷ್ಯ ಆರೋಪದ ಕುರಿತಂತೆಲೋಕಾಯುಕ್ತ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಬಿ.ವಿ.ಕೃಷ್ಣರಾವ್ ಮತ್ತು ಐಎಎಸ್ ಅಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್‌ ನೀಡಿರುವ ಮೂರೂ ತನಿಖಾ ವರದಿಗಳನ್ನು ಆಧರಿಸಿ ಕ್ರಮ ಕೈಗೊಳ್ಳಬಹುದು’ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

‘ತಳವಾರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ನಿವೃತ್ತ ಉಪನ್ಯಾಸಕ ಆರ್.ನಾರಾಯಣ ಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವಯಂಪ್ರೇರಿತ ಅರ್ಜಿಯಾಗಿ ಪರಿವರ್ತಿಸಿಕೊಂಡು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ‘ಈ ಕುರಿತ ಅನುಪಾಲನಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಬೇಕು’ ಎಂದು ನಿರ್ದೇಶಿಸಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.

‘ತಳವಾರ ನೇಮಕಾತಿ ಹಾಗೂ ನಡತೆ ಬಗ್ಗೆ ಲೋಕಾಯುಕ್ತ, ಬಿ.ವಿ.ಕೃಷ್ಣರಾವ್ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯ ನಿರ್ವಾಹಕ ನಿರ್ದೇಶಕರಾಗಿದ್ದ ವಿಕಾಸ್ ಕಿಶೋರ್ ಸುರಳ್ಕರ್ ತನಿಖೆ ನಡೆಸಿ ಸರ್ಕಾರಕ್ಕೆ ಪ್ರತ್ಯೇಕ ವರದಿ ಸಲ್ಲಿಸಿದ್ದಾರೆ. ಈ ವರದಿಗಳನ್ನು ಆಧರಿಸಿ ಸರ್ಕಾರ ತನ್ನ ವಿವೇಚನಾ ಕ್ರಮ ಕೈಗೊಳ್ಳಬಹುದು’ ಎಂದು ನ್ಯಾಯಪೀಠ ಹೇಳಿದೆ.

ತಳವಾರ ನೇಮಕಾತಿ ಮತ್ತು ಅವರು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ನಡೆಸಿದ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಕುರಿತು ಲೋಕಾಯಕ್ತ ಸಂಸ್ಥೆ, ಬಿ.ವಿ. ಕೃಷ್ಣರಾವ್ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅಂತೆಯೇ, ತಳವಾರ ವಿರುದ್ಧ ಮಾಡಲಾಗಿದ್ದ 56 ವೈಯಕ್ತಿಕದೂರುಗಳನ್ನು ವಿಕಾಸ್ ಕಿಶೋರ್ ಸುರಳ್ಕರ್ ತನಿಖೆ ನಡೆಸಿ, 11 ದೂರುಗಳಲ್ಲಿ ತಳವಾರ ಅವರ ಕರ್ತವ್ಯ ನಿರ್ಲಕ್ಷತೆ ಮೇಲ್ನೋಟಕ್ಕೆ ಸಾಬೀತಾಗಿದೆ. ಅವರ ಕಾರ್ಯವೈಖರಿ ತೃಪ್ತಿಕರವಾಗಿರುವುದಿಲ್ಲ’ ಎಂದು ತಿಳಿಸಿತ್ತು.

‘ಸರ್ಕಾರವು ಈ ಮೂರೂ ವರದಿಗಳನ್ನು ಪರಿಗಣಿಸಿಲ್ಲ ಮತ್ತು ತಳವಾರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಕ್ಷೇಪಿಸಿ ನಾರಾಯಣ ಸ್ವಾಮಿ ಪಿಐಎಲ್ ಸಲ್ಲಿಸಿದ್ದರು. ಏತನ್ಮಧ್ಯೆ, ತಳವಾರ ನೀಡಿದ್ದ ದೂರಿನ ಅನುಸಾರ ಪೊಲೀಸರು ಅರ್ಜಿದಾರರನ್ನು ಬಂಧಿಸಿದ್ದ ಅಂಶ ವಿಚಾರಣೆ ವೇಳೆ ಬಯಲಾಗಿತ್ತು. ಇದರಿಂದ ಅವರನ್ನು ಪ್ರಕರಣದಿಂದ ಕೈಬಿಟ್ಟಿದ್ದ ಹೈಕೋರ್ಟ್‌, ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT