ಸೋಮವಾರ, ಜನವರಿ 24, 2022
23 °C
ನೈಜ ಪತ್ರಕರ್ತರು ಮಾತ್ರವೇ ಇರತಕ್ಕದ್ದು..!

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ಹೈಕೋರ್ಟ್‌ ಅಂಕುಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಸ್ಪರ್ಧಿಸುವವರು ನೈಜ ಪತ್ರಕರ್ತರೇ ಆಗಿರಬೇಕು ಮತ್ತು ಕರ್ನಾಟಕ ಟ್ರೇಡ್‌ ಯೂನಿಯನ್‌ ಮಾದರಿ ನಿಯಮಗಳು–1953ರ ಅನುಸಾರ ಕಟ್ಟುನಿಟ್ಟಿನ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಹೈಕೋರ್ಟ್‌, ಕಾರ್ಮಿಕ ಇಲಾಖೆಗೆ ಕಟ್ಟುನಿಟ್ಟಿನ ತಾಕೀತು ಮಾಡಿದೆ.

ಈ ಸಂಬಂಧ ರಾಯಚೂರಿನ ‘ಈಶಾನ್ಯ ಟೈಂಸ್‌’ ಸಂಪಾದಕ ಎನ್‌. ನಾಗರಾಜ, ಶಿವಮೊಗ್ಗದ ‘ಕ್ರಾಂತಿದೀಪ’ ದಿನಪತ್ರಿಕೆ ಸಂಪಾದಕ ಎನ್‌.ಮಂಜುನಾಥ ಮತ್ತು ರಾಯಚೂರಿನ ‘ಸು‌ದ್ದಿ ಮೂಲ’ ದಿನಪತ್ರಿಕೆ ಮುಖ್ಯ ವರದಿಗಾರ ಬಿ.ವೆಂಕಟಸಿಂಗ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು (ಡಬ್ಲ್ಯು.ಪಿ ಸಂಖ್ಯೆ: 8001/2021) ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನವೆಂಬರ್‌ 8ರಂದು ವಿಲೇವಾರಿ ಮಾಡಿದ್ದು, ‘ಒಂದು ವೇಳೆ ಆದೇಶ ಪರಿಪಾಲನೆ ಆಗದೆ, ಯಾವುದೇ ತಕರಾರು ಉದ್ಭವವಾದಲ್ಲಿ ಅರ್ಜಿದಾರರು ಪುನಃ ಹೈಕೋರ್ಟ್‌ ಕದ ಬಡಿಯಬಹುದು’ ಎಂದು ತಿಳಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಹರೀಶ್‌ ಗಣಪತಿ, ‘ಸಮಾಜದ ನ್ಯೂನತೆಗಳನ್ನು ಎತ್ತಿ ತೋರಿಸುವ ಪತ್ರಕರ್ತರ ಸಂಘದಲ್ಲೇ ನ್ಯೂನತೆಗಳು ಗೂಡು ಕಟ್ಟಿಕೊಂಡಿವೆ!. ಸಂಘದಲ್ಲಿ ಟ್ರೇಡ್ ಯೂನಿಯನ್ ನಿಯಮಗಳ ಅನುಸಾರ ಮಾಲೀಕರೂ ಸದಸ್ಯತ್ವ ಹೊಂದಿರುವುದು ಆಕ್ಷೇಪಾರ್ಹ. ಸಂಘದಲ್ಲಿ 7,800 ಸದಸ್ಯರು ಇದ್ದಾರೆ. ಆದರೆ, ಇವರಲ್ಲಿ ನೈಜ ಪತ್ರಕರ್ತರ ಸಂಖ್ಯೆ ತುಂಬಾ ಕಡಿಮೆ ಇದೆ. ಆದ್ದರಿಂದ, 2018–2021ರ ಸಾಲಿಗೆ ಮರುಚುನಾವಣೆಗೆ ಆದೇಶಿಸಲು ನಿರ್ದೇಶಿಸಬೇಕು’ ಎಂದು ಕೋರಿದ್ದರು.

‘ಟ್ರೇಡ್‌ ಯೂನಿಯನ್ ಕಾಯ್ದೆ–1926ರ ಅನುಸಾರ ಕೆಯುಡಬ್ಲ್ಯುಜೆ ನೋಂದಣಿಯಾಗಿದೆ. ಇದಕ್ಕೆ ಕರ್ನಾಟಕ ವೃತ್ತಿಪರ ಸಂಘಗಳ ಚುನಾವಣಾ (ಮಾದರಿ) ನಿಯಮಗಳು–1953ರ ಅಡಿಯಲ್ಲೇ ಚುನಾವಣೆ ನಡೆಯಬೇಕು. ಸಂಘದಲ್ಲಿನ ಅವ್ಯವಹಾರಗಳ ಬಗ್ಗೆ 2018ರಲ್ಲಿ ಸಲ್ಲಿಸಲಾದ ರಿಟ್‌ ಅರ್ಜಿಗೆ (ಸಂಖ್ಯೆ 33642/2018) ಸಂಬಂಧಿಸಿದಂತೆ 2018ರ ಆಗಸ್ಟ್‌ 21ರಂದು ತೀರ್ಪು ನೀಡಿದ್ದ ಏಕಸದಸ್ಯ ನ್ಯಾಯಪೀಠವು, ಅರ್ಜಿದಾರರ ಮನವಿ ಪರಿಗಣಿಸಲು ಕಾರ್ಮಿಕ ಆಯುಕ್ತರಿಗೆ ಆದೇಶಿಸಿತ್ತು’ ಎಂದು ವಿವರಿಸಿದ್ದರು.

ಈ ಮೊದಲಿನ ಅರ್ಜಿದಾರ ಎಂ.ವೆಂಕಟೇಶ ಸಿಂಹ ಭೋವಿ ಸಲ್ಲಿಸಿದ್ದ ಮನವಿಯನ್ನು ಅಂದಿನ ಸಹಾಯಕ ಕಾರ್ಮಿಕ ಆಯುಕ್ತ ಎಚ್.ಎಲ್‌.ಗುರುಪ್ರಸಾದ್ ಅವರಿದ್ದ ಅರೆನ್ಯಾಯಿಕ ಪೀಠವು ವಿಚಾರಣೆ ನಡೆಸಿ, ‘ಅರ್ಜಿದಾರರು ತಕರಾರು ಎತ್ತಿರುವ ಅಂಶಗಳ ಬಗ್ಗೆ ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡಿ ಪರಿಹಾರ ಕಂಡುಕೊಳ್ಳಬಹುದು‘ ಎಂದು 2018ರ ಡಿಸೆಂಬರ್ 15ರಂದು ಆದೇಶಿಸಿತ್ತು. ಆದರೆ, ‘ಈ ಆದೇಶ ಕಾನೂನು ಬಾಹಿರ ಮತ್ತು ಏಕಪಕ್ಷೀಯವಾಗಿದೆ’’ ಎಂದು ಎನ್‌. ನಾಗರಾಜ ಮತ್ತು ಇತರರು ಆಕ್ಷೇಪಿಸಿದ್ದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಚುನಾವಣಾಧಿಕಾರಿ, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಆಯುಕ್ತರು, ಬನ್ನೇರುಘಟ್ಟ ರಸ್ತೆಯಲ್ಲಿರುವ ನಾಲ್ಕನೇ ವಿಭಾಗದ ಕಾರ್ಮಿಕ ಆಯುಕ್ತರು ಹಾಗೂ ಕೆಯುಡಬ್ಲ್ಯೂಜೆ ಮಾಜಿ ಅಧ್ಯಕ್ಷರೂ ಆದ ಚಿಕ್ಕಮಗಳೂರಿನ ಎನ್‌.ರಾಜು ಅವರನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಸರ್ಕಾರದ ಪರ ಕೆ.ಆರ್.ರೂಪಾ ವಾದ ಮಂಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು