ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದರು ಯೋಜನೆ: ಎನ್‌ಸಿಎಸ್‌ಸಿಎಂ ಮೂಲಕ ಸಮೀಕ್ಷೆ ಸೂಚನೆ

Last Updated 13 ಜುಲೈ 2021, 16:02 IST
ಅಕ್ಷರ ಗಾತ್ರ

ಬೆಂಗಳೂರು: ಹೊನ್ನಾವರ ಬಂದರು ವಿಸ್ತರಣೆ ಯೋಜನೆಯ ಯಾವುದೇ ಭಾಗ ಆಮೆಗಳ ಆವಾಸ ತಾಣದೊಳಗೆ ಇದೆಯೇ ಎಂಬುದನ್ನು ಗುರುತಿಸಲು ಚೆನ್ನೈನ ನ್ಯಾಷನಲ್‌ ಸೆಂಟರ್‌ ಫಾರ್‌ ಸಸ್ಟೈನಬಲ್‌ ಕೋಸ್ಟಲ್‌ ಮ್ಯಾನೇಜ್‌ಮೆಂಟ್‌ (ಎನ್‌ಸಿಎಸ್‌ಸಿಎಂ) ಮೂಲಕ ಸಮೀಕ್ಷೆ ಮಾಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಾಸರಕೋಡು ಟೊಂಕ ಬಳಿ ಬಂದರು ವಿಸ್ತರಣೆ ಯೋಜನೆಯನ್ನು ಹೊನ್ನಾವರ ಪೋರ್ಟ್‌ ಕಂಪನಿ ಕೈಗೊತ್ತಿಕೊಂಡಿದೆ.

ಹೊನ್ನಾವರ ತಾಲ್ಲೂಕಿನ ಹಸಿಮೀನು ವ್ಯಾಪಾರಿಗಳ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಯೋಜನೆ ಕಾರ್ಯರೂಪಕ್ಕೆ ಬಂದರೆ ಆಮೆಗಳ ಆವಾಸ ಸ್ಥಾನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

‘ಆಮೆಗಳ ಆವಾಸ ಸ್ಥಾನ ಎಂಬುದು ಗಂಭೀರ ವಿಷಯ. ಹೀಗಾಗಿ, ಯೋಜನೆ ವಿಸ್ತರಣೆಯಾಗಲಿರುವ 45 ಹೆಕ್ಟೇರ್‌ ಜಾಗದ ಯಾವುದೇ ಭಾಗ ಆಮೆಗಳ ವಾಸಸ್ಥಾನವೇ ಎಂಬುದನ್ನು ಗುರುತಿಸಬೇಕಾಗುತ್ತದೆ. ಎನ್‌ಸಿಎಸ್‌ಸಿಎಂ ಮೂಲಕ ಈ ಸಮೀಕ್ಷೆ ಮಾಡಿಸಬೇಕು’ ಎಂದು ಪೀಠ ತಿಳಿಸಿತು.

ಅರ್ಜಿಯಲ್ಲಿನ ಇತರ ಅಹವಾಲುಗಳ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಪೀಠ ಸೂಚನೆ ನೀಡಿತು.

ಈ ನಡುವೆ 0.8 ಹೆಕ್ಟೇರ್ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ನೀಡಿರುವ ಮಧ್ಯಂತರ ಆದೇಶವು ಮುಂದುವರಿಯಲಿದೆ. ಈ ವಿಷಯದಲ್ಲಿ ಕೈಗೊಂಡ ಯಾವುದೇ ಕ್ರಮವೂ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT