ಬೆಂಗಳೂರು:"ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ನೀಡಬಾರದು" ಎಂದು ಕೋರಲಾಗಿರುವ ರಿಟ್ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಬೆಂಗಳೂರಿನ ಜ್ಞಾನಭಾರತಿಯ ಮೃತ್ಯುಂಜಯ ನಗರದ ಡಿ.ಜಿ ರಾಘವೇಂದ್ರ ಬಿನ್ ಸೂರ್ಯ ದೇವಾಡಿಗ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಷಿ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಮಂಗಳವಾರ (ಡಿ.27) ವಿಚಾರಣೆ ನಡೆಸಿತು.
ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 29ಕ್ಕೆ (ಗುರುವಾರ) ಮುಂದೂಡಿದೆ.
ಇದೇ ವೇಳೆ ನ್ಯಾಯಪೀಠವು, ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
"ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2-ಎ ಗೆ ಸೇರಿಸಬೇಕು ಎಂಬ ಬೇಡಿಕೆಯನ್ನು ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ 2000 ಇಸ್ವಿಯಲ್ಲೇ ತಿರಸ್ಕರಿಸಿದೆ. ಈಗ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಆಧರಿಸಿದ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುತ್ತಿರುವುದು ಕಾನೂನು ಬಾಹಿರ ಕ್ರಮ" ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಅರ್ಜಿದಾರರ ಪರ ಎಚ್.ವಿ. ಮಂಜುನಾಥ್ ವಕಾಲತ್ತು ವಹಿಸಿದ್ದು, ಹಿರಿಯ ವಕೀಲ ರವಿವರ್ಮ ಕುಮಾರ್ ವಾದಮಂಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.