ಬುಧವಾರ, ಏಪ್ರಿಲ್ 21, 2021
27 °C

ಮಾದಕ ವಸ್ತು ಪರೀಕ್ಷೆಗೆ ಪ್ರತ್ಯೇಕ ಪ್ರಯೋಗಾಲಯ ತೆರೆಯಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾದಕ ವಸ್ತುಗಳು ಮತ್ತು ನಿಷೇಧಿತ ಪದಾರ್ಥಗಳ ಪರೀಕ್ಷೆಗೆ ಪ್ರತ್ಯೇಕ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿರುವ ಹೈಕೋರ್ಟ್, ಎಲ್ಲ ಪೊಲೀಸ್‌ ಠಾಣೆಗಳಿಗೆ ಫೀಲ್ಡ್ ಟೆಸ್ಟ್ ಕಿಟ್ ನೀಡುವ ಸಂಬಂಧ ಗೃಹ ಇಲಾಖೆಯ ಮನವೊಲಿಸುವಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ (ಎಸ್‌ಪಿಪಿ) ನಿರ್ದೇಶನ ನೀಡಿತು.

ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ(ಎನ್‌ಡಿಪಿಎಸ್) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿ ಅರ್ಜುನ್ ದೀಪಕ್ ಮೆಹ್ತಾ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ಪೀಠ, ಈ ಆದೇಶ ಹೊರಡಿಸಿತು. 

‘ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿರುವ ಜೀವನ್‌ಬಿಮಾನಗರ ಪೊಲೀಸ್ ಠಾಣೆ ಪೊಲೀಸರು ನಿಷೇಧಿತ ವಸ್ತು ದೊರೆತಾಗ ಫೀಲ್ಡ್ ಟೆಸ್ಟ್ ನಡೆಸಿಲ್ಲ. ಎನ್‌ಸಿಬಿ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ವಶಪಡಿಸಿಕೊಂಡ ವಸ್ತುಗಳನ್ನು 72 ಗಂಟೆಗಳಲ್ಲಿ ರಾಸಾಯನಿಕ ವಿಶ್ಲೇಷಣೆಗೆ ಕಳಹಿಸಬೇಕು ಮತ್ತು 15 ದಿನಗಳಲ್ಲಿ ವರದಿ ಪಡೆಯಬೇಕು. ಈ ಪ್ರಕರಣದಲ್ಲಿ ವರದಿ ಪಡೆದಿಲ್ಲ’ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

‘ನಿಷೇಧಿತ ವಸ್ತುಗಳು ವಾಣಿಜ್ಯ ಪ್ರಮಾಣಕ್ಕಿಂತ ಹೆಚ್ಚಿಗೆ ಸಂಗ್ರಹವಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ. ಈ ಸಂದರ್ಭದಲ್ಲಿ ಜಾಮೀನು ನೀಡಲು ಆಗುವುದಿಲ್ಲ’ ಎಂದು ಪೀಠ ಹೇಳಿತು. 

‘ಇಡೀ ರಾಜ್ಯದಲ್ಲಿ ಒಂದೇ ಒಂದು ವಿಧಿ ವಿಜ್ಞಾನ ಪ್ರಯೋಗಾಲಯ ಇರುವ ಕಾರಣ 15 ದಿನಗಳಲ್ಲಿ ವರದಿ ಪಡೆಯಲು ಆಗುತ್ತಿಲ್ಲ. ಮಾದಕ ವಸ್ತುಗಳ ಪರೀಕ್ಷೆಗಾಗಿಯೇ ಪ್ರತ್ಯೇಕ ಪ್ರಯೋಗಾಲಯ ತೆರೆಯುವ ಸಂಬಂಧ ಗೃಹ ಇಲಾಖೆಯ ಮನವೊಲಿಸಲು ಪ್ರಯತ್ನ ಮಾಡಬೇಕು’ ಎಂದು ಪೀಠ ಎಸ್‌ಪಿಪಿಗೆ ತಿಳಿಸಿತು. ಆದೇಶದ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ರವಾನಿಸುವಂತೆ ನಿರ್ದೇಶನ ನೀಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು