ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿಂದಲೇ ಚೆಕ್‌ಗೆ ಸಹಿ ಹಾಕಲು ಅನುಮತಿ ಕೋರಿದ ಮುರುಘಾ ಶ್ರೀ: ಹೈಕೋರ್ಟ್ ಅತೃಪ್ತಿ

ಎಲ್ಲವೂ ಸೆಲ್ಫ್ ಚೆಕ್
Last Updated 29 ಸೆಪ್ಟೆಂಬರ್ 2022, 8:48 IST
ಅಕ್ಷರ ಗಾತ್ರ

ಬೆಂಗಳೂರು:ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿಪೋಕ್ಸೊ ಮತ್ತು ಎಸ್ಸಿ-ಎಸ್ಟಿ ಜಾತಿನಿಂದನೆ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ(ಎಸ್ ಜೆ ಎಂ) ಬೃಹನ್ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಜೈಲಿನಿಂದಲೇ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ ಸಹಿ ಮಾಡಲು ಅವಕಾಶ ನೀಡಬೇಕು ಎಂಬ ಕೋರಿ ಸಲ್ಲಿಸಿದ್ದಪ್ರಸ್ತಾವಕ್ಕೆ ಹೈಕೋರ್ಟ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.

ಈ ಸಂಬಂಧ ಆರೋಪಿ ಶಿವಮೂರ್ತಿ ಶರಣರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಶರಣರ ಪರ ಹಾಜರಾಗಿದ್ದ ವಕೀಲೆ ಸ್ವಾಮಿನಿ ಗಣೇ‌ಶ್ ಮೋಹನಂಬಾಳ್, ಶರಣರು ಯಾವೆಲ್ಲಾ ಚೆಕ್ ಗಳಿಗೆ ಸಹಿ ಮಾಡುತ್ತಾರೆ ಎಂಬ ದಾಖಲೆಗಳನ್ನು ನ್ಯಾಯಪೀಠಕ್ಕೆ ಮಂಡಿಸಿದರು.

ಚೆಕ್ ಗಳನ್ನು ವಿವರವಾಗಿ ಪರಿಶೀಲಿಸಿದ ನ್ಯಾಯಪೀಠ, "ಎಲ್ಲಾ ಚೆಕ್ ಗಳೂ ಸೆಲ್ಫ್ ಆರ್ ಟಿ ಜಿ ಎಸ್ ಎಂದಿವೆ. ₹ 14, 30... ಲಕ್ಷಗಳಷ್ಟು ಬೃಹತ್ ಮೊತ್ತದ ಈ ಚೆಕ್ ಗಳನ್ನು ಸೆಲ್ಫ್ ಎಂದು ನಮೂದಿಸಿಕೊಂಡು ಬಂದಿದ್ದೀರಿ. ಯಾಕೊ ಇವು ಸರಿ ಕಾಣುತ್ತಿಲ್ಲ. ನಿಮ್ಮ ಈ ಮನವಿಯಲ್ಲಿ ಸ್ಪಷ್ಟತೆಯೇ ಇಲ್ಲ. ನೌಕರರಿಗೆ ಸಂಬಳ ನೀಡಬೇಕಾದ ಚೆಕ್ ಗಳು ಸೆಲ್ಫ್ ಎಂದು ತೋರಿಸುತ್ತಿದ್ದೀರಲ್ಲಾ " ಎಂದು ಅನುಮಾನ ವ್ಯಕ್ತಪಡಿಸಿತು.

ಅರ್ಜಿದಾರರ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಕಿರಣ್ ಜವಳಿ, "ಅರ್ಜಿದಾರರು ಸಲ್ಲಿಸಿರುವ ಪ್ರಸ್ತಾವ ಮೇಲ್ನೋಟಕ್ಕೆ ಸಮರ್ಪಕವಾಗಿಲ್ಲ. ಈ ಪ್ರಸ್ತಾವವನ್ನು ನ್ಯಾಯಪೀಠವು ಚಿತ್ರದುರ್ಗ ಸೆಷನ್ಸ್ ಕೋರ್ಟ್ ಗೇ ವರ್ಗಾಯಿಸುವುದು ಸೂಕ್ತ. ಅಲ್ಲಿನ ನ್ಯಾಯಾಧೀಶರೇ ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ವಿಲೇವಾರಿ ಮಾಡುವಂತೆ ನಿರ್ದೇಶಿಸಬೇಕು" ಎಂದು ಕೋರಿದರು.

ಇದಕ್ಕೆ ಮೌಖಿಕವಾಗಿ ಸಮ್ಮತಿಸಿದ ನ್ಯಾಯಪೀಠ, "ನಿಮ್ಮ ಪ್ರಸ್ತಾವವನ್ನು ಸ್ಪಷ್ಟವಾಗಿ ವಿವರಿಸಿ. ನೌಕರರು ಹಸಿವಿನಿಂದ ಬಳಲಬಾರದು ಎಂಬುದಷ್ಟೇ ಕೋರ್ಟ್ ಕಾಳಜಿ. ಆದರೆ, ನೀವು ಈ ರೀತಿ ಸೆಲ್ಫ್ ಚೆಕ್ ಗಳನ್ನು ತೋರಿಸುತ್ತಿರುವುದು ಸರಿಯಲ್ಲ. ಸೆಷನ್ಸ್ ನ್ಯಾಯಾಲಯ‌ ಇದನ್ನು ತಕ್ಷಣವೇ ಪರಿಶೀಲಿಸುವಂತೆ ಆದೇಶಿಸುತ್ತೇವೆ" ಎಂದು ಹೇಳಿತು.

"ನಾಳೆ ಪೂರ್ಣ ಸ್ಪಷ್ಟತೆಯೊಂದಿಗೆ ಜ್ಞಾಪನಾ ಪತ್ರ (ಮೆಮೊ) ಸಲ್ಲಿಸಿ" ಎಂದು ವಿಚಾರಣೆಯನ್ನು ಇದೇ 30ಕ್ಕೆ (ಶುಕ್ರವಾರ) ಮುಂದೂಡಿತು.

ಪ್ರಕರಣವೇನು?:

‘ಮಠದ ದೈನಂದಿನ ಚಟುವಟಿಕೆ ಮತ್ತು ವ್ಯವಹಾರಗಳಿಗೆ ಅನುವಾಗುವಂತೆ ಮತ್ತು ಮಠದ ಸಿಬ್ಬಂದಿಯ ಸಂಬಳ ಬಿಡುಗಡೆಗೆ ಸಂಬಂಧಿಸಿದ ಚೆಕ್‌ ಮತ್ತು ಇತರೆ ದಾಖಲೆಗಳಿಗೆ ಜೈಲಿನಿಂದಲೇ ಸಹಿ ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ಶಿವಮೂರ್ತಿ ಶರಣರು ಚಿತ್ರದುರ್ಗ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಮನವಿಯನ್ನು ಜೈಲು ಅಧಿಕಾರಿಗಳು ತಿರಸ್ಕರಿಸಿದ್ದರು. ಪರಿಣಾಮ ಶರಣರ ಪರ ವಕೀಲರು ಚಿತ್ರದುರ್ಗ ಸೆಷನ್ಸ್‌ ನ್ಯಾಯಾಲಯದಲ್ಲಿ ಈ ಕುರಿತಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಬಿ.ಕೆ.ಕೋಮಲಾ ತಿರಸ್ಕರಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಈಗ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ಅರ್ಜಿಯಲ್ಲಿ ಏನಿದೆ?:

‘ಶಿವಮೂರ್ತಿ ಶರಣರು ಮಠ ಮತ್ತು ವಿದ್ಯಾಪೀಠಕ್ಕೆ ಏಕೈಕ (ಸೋಲ್‌) ಟ್ರಸ್ಟೀ ಮತ್ತು ಅಧ್ಯಕ್ಷರಾಗಿರತಕ್ಕದ್ದು ಎಂದು 2010ರ ನವೆಂಬರ್‌ 26ರಂದು ಟ್ರಸ್ಟ್‌ ಡೀಡ್‌ ನಿಗದಿಪಡಿಸಲಾಗಿದೆ. ಇದರ ಅನುಸಾರ ಶರಣರು ಮಠ ಮತ್ತು ವಿದ್ಯಾಪೀಠಗಳ ಆಡಳಿತದ ಸಂಪೂರ್ಣ ಅಧಿಕಾರ ಹೊಂದಿದ್ದು, ಮಠ ಮತ್ತು ವಿದ್ಯಾಪೀಠದ ಬ್ಯಾಂಕ್‌ ಖಾತೆಯು ಅವರ ಹೆಸರಿನಲ್ಲೇ ಇರತಕ್ಕದ್ದು, ಕೇವಲ ಅಧ್ಯಕ್ಷರು ಮಾತ್ರವೇ ಇದರ ಬ್ಯಾಂಕ್‌ ಖಾತೆಯ ನಿರ್ವಹಣೆ ನೋಡಿಕೊಳ್ಳಬೇಕು. ಇದರ ಲೆಕ್ಕಪರಿಶೋಧನೆಯನ್ನು ಅರ್ಹ ವ್ಯಕ್ತಿ ವರ್ಷಕ್ಕೊಮ್ಮೆ ನಡೆಸತಕ್ಕದ್ದು’ ಎಂದು ಟ್ರಸ್ಟ್‌ ದಾಖಲೆಯಲ್ಲಿ ವಿವರಿಸಲಾಗಿದೆ.

‘ಬೃಹನ್ಮಠವು, ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಎಸ್‌ಜೆಎಂ ವಿದ್ಯಾಪೀಠದ ಅಡಿಯಲ್ಲಿ ಹತ್ತಿರತ್ತಿರ 150 ವಿದ್ಯಾಸಂಸ್ಥೆಗಳನ್ನು ಹೊಂದಿದೆ. ಶರಣರು ಜೈಲಿನಲ್ಲಿ ಇರುವ ಕಾರಣ ಮಠದ ವಿದ್ಯಾಸಂಸ್ಥೆಗಳ ಸುಮಾರು 3,500 ನೌಕರರು ಸಂಬಳ ಇಲ್ಲದೆ ಪರದಾಡುವಂತಾಗಿದೆ.

ನೌಕರರ ಎರಡು ತಿಂಗಳ ಸಂಬಳದ ಒಟ್ಟು 200 ಚೆಕ್ ಗಳಿಗೆ ಸಹಿ ಮಾಡಲು ಅವಕಾಶ ಕಲ್ಪಿಸಿಕೊಡಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು. ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿರುತ್ತದೆ. 2022ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಸಂಬಳ ಪಾವತಿಗೆ ಅನುವಾಗುವಂತೆ ಅಕ್ಟೋಬರ್ 1ರಿಂದ 5ರವರೆಗೆ ಐದು ದಿನಗಳ ಕಾಲ 200 ಚೆಕ್ ಗಳಿಗೆ ಸಹಿ ಮಾಡಲು ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT