ಸೋಮವಾರ, ಆಗಸ್ಟ್ 8, 2022
24 °C
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ

ಕಾನೂನು ಗೌರವಿಸದವರ ವಿರುದ್ಧ ಕಠಿಣ ಕ್ರಮ ಅಗತ್ಯ: ಶೋಭಾ ಕರಂದ್ಲಾಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ಹೈಕೋರ್ಟ್‌ ಆದೇಶ ನೀಡಿದ್ದರೂ ನೆಲದ ಕಾನೂನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ‌ ಮಾತನಾಡಿ, ನೆಲದ ಕಾನೂನು ಪಾಲಿಸದವರು ಹಾಗೂ ಗೌರವ ಕೊಡದವರು ಮುಂದೆ ದೇಶದ್ರೋಹಿ ಚಟುವಟಿಕೆಗಳಿಗೆ ಕಾರಣರಾಗಬಹುದು ಎಂದು ದೂರಿದರು.

ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕುರಿತು ಪ್ರತಿಕ್ರಿಯಿಸಿ ಮಕ್ಕಳು ದೇಶದ ಚರಿತ್ರೆ ಕಲಿಯಬೇಕು. ಇತಿಹಾಸದಲ್ಲಿ ನಡೆದುಹೋಗಿರುವ ತಪ್ಪುಗಳನ್ನು ತಿಳಿಯಬೇಕು. ಬ್ರಿಟಿಷರು, ಮೊಘಲರು ಭಾರತಕ್ಕೆ ಬಂದಿದ್ದು ಏಕೆ, ಘಜ್ನಿ ಮಹಮ್ಮದ್ 18 ಬಾರಿ ದಾಳಿ ಮಾಡಿದ್ದು ಏಕೆ ಎಂಬ ಸತ್ಯ ಮಕ್ಕಳಿಗೆ ತಿಳಿಯಬೇಕು. ದುರದೃಷ್ಟವಶಾತ್ ಪದವಿ ವಿದ್ಯಾರ್ಥಿಗಳಿಗೆ ದೇಶದ ಚರಿತ್ರೆಯ ಅರಿವು ಇಲ್ಲದಿರುವುದು ವಿಪರ್ಯಾಸ ಎಂದರು.

ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ರಾಜ್ಯ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಸತ್ವಯುತವಾಗಿದೆ. ರಾಜ್ಯದ ಏಕೀಕರಣದಂತಹ ವಿಚಾರಗಳು ಮಕ್ಕಳಿಗೆ ತಿಳಿಯಬೇಕು. ವಿವಾದ ಇಲ್ಲದಂತಹ ವ್ಯಕ್ತಿಗಳು ಸಮಿತಿಯಲ್ಲಿ ಇರಬೇಕು. ಮಕ್ಕಳ ಮನಸ್ಸನ್ನು ಪುಳಕಿತಗೊಳಿಸುವ, ವಿಕಸಿತಗೊಳಿಸುವ ಪಠ್ಯಗಳು ಇರಬೇಕು ಎಂದು ಅಭಿಪ್ರಾಯಪಟ್ಟರು.

ಮಳಲಿ ಮಸೀದಿ ವಿವಾದವನ್ನು ಸರ್ಕಾರ ಗಮನಿಸುತ್ತಿದೆ. ಇತಿಹಾಸದಲ್ಲಿ ಆಗಿರುವ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬೇಕು. ಹಿಂದೆ  ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ. ಇತಿಹಾಸ ತಜ್ಞರು ಉತ್ಖನನ ಮಾಡಿ ಸರಿ ತಪ್ಪುಗಳನ್ನು ನಿರ್ಧರಿಸಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಲವ್ ಜಿಹಾದ್ ಹಿಂದೂ ಹೆಣ್ಣುಮಕ್ಕಳನ್ನು ನರಕದ ಕೂಪಕ್ಕೆ ತಳ್ಳುವ ಪ್ರಕ್ರಿಯೆ. ಪ್ರೀತಿ ಹೆಸರಲ್ಲಿ ಮದುವೆಯಾಗಿ ವಂಚಿಸಿ ತಲಾಖ್ ನೀಡುತ್ತಾರೆ. ಲವ್ ಜಿಹಾದ್ ಪಿಡುಗು ಕೊನೆಯಾಗಬೇಕು. ಬಲವಾದ ಕಾನೂನು ಜಾರಿಯಾಗಬೇಕು ಎಂದರು.

ರೈತ ನಾಯಕ ಟಿಕಾಯತ್‌ಗೆ ಮಸಿ ಬಳಿದಿದ್ದು ಸರಿಯಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೋರಾಟಕ್ಕೆ ಬಲವಿದೆ. ಟಿಕಾಯತ್ ನಡೆಸುತ್ತಿರುವ ಹೋರಾಟದಿಂದ ರೈತರಿಗೆ ಎಷ್ಟು ಲಾಭವಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು