ಸೋಮವಾರ, ಆಗಸ್ಟ್ 8, 2022
23 °C
ಮುಂದುವರಿದ ಹಿರಿಯ ವಕೀಲರ ವಾದ ಮಂಡನೆ

ಹಿಜಾಬ್‌ ಸಂಘರ್ಷಕ್ಕೆ ಸಿಎಫ್‌ಐ ಕಾರಣ: ವಕೀಲ ನಾಗಾನಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಯಾವುದೇ ತರತಮವಿಲ್ಲದೆ ಸಾಮರಸ್ಯದ ಬಾಳುವೆ ನಡೆಸುತ್ತಿರುವ ಸಮಾಜದಲ್ಲಿ ಇವತ್ತು ಬೀದಿಗಳಲ್ಲಿ ತಮಟೆ ಬಾರಿಸುವ ಸಂಘಟನೆಗಳು ಬೆದರಿಕೆ ಒಡ್ಡುತ್ತಿವೆ. ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾದಂತಹ (ಸಿಎಫ್‌ಐ) ಮೂಲಭೂತವಾದಿ ಸಂಘಟನೆಗಳು ಹಿಜಾಬ್‌ ವಿವಾದದ ಬೆಂಕಿಗೆ ತುಪ್ಪ ಸುರಿಯುತ್ತಿವೆ’ ಎಂದು ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ ಅವರು ಹೈಕೋರ್ಟ್‌ಗೆ ಅರುಹಿದರು. 

ಹಿಜಾಬ್ ಧರಿಸಿ ತರಗತಿ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಕೆಲ ಶಾಲೆ-ಕಾಲೇಜು ಆಡಳಿತ ಮಂಡಳಿಗಳ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಎಲ್ಲ ರಿಟ್ ಅರ್ಜಿಗಳ ವಿಚಾರಣೆಯನ್ನು, ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಜೆ.ಎಂ.ಖಾಜಿ ಅವರಿದ್ದ ಮೂವರು ಸದಸ್ಯರ ಸಾಂವಿಧಾನಿಕ ನ್ಯಾಯಪೀಠ ಬುಧವಾರ ಮುಂದುವರಿಸಿತು.

ವಿಚಾರಣೆ ವೇಳೆ ಶಿಕ್ಷಣ ಸಂಸ್ಥೆಗಳ ಪರ ವಾದ ಮುಂದುವರಿಸಿದ ನಾಗಾನಂದ ಅವರು, ‘ಪ್ರತಿಯೊಬ್ಬ ಮಗುವಿನ ಸರ್ವಾಂಗೀಣ ಅಭಿವೃದ್ಧಿ ಜಾತ್ಯತೀತ ಕಲ್ಪನೆಯಲ್ಲಿಯೇ ಅರಳಬೇಕು. ಶಾಲೆಗಳು ಸರ್ವಧರ್ಮ ಸಮನ್ವಯತೆಯ ಕೇಂದ್ರಗಳಾಗಿರಬೇಕು. ಇದು ನಮ್ಮ ಸಂವಿಧಾನ ಮತ್ತು ಕಾನೂನುಗಳ ಸ್ಪಷ್ಟ ನಿಲುವು. ಇದನ್ನು ಬಿಟ್ಟು ಹಿಜಾಬ್‌ ಧಾರ್ಮಿಕವಾಗಿ ಕಡ್ಡಾಯ ಆಚರಣೆ ಎಂದು ತರಗತಿಗಳಿಗೆ ಧರಿಸಿ ಬರುವುದಾದರೆ ನಾಳೆ ಹಿಂದೂಗಳು ಕೇಸರಿ ಶಾಲು ಧರಿಸಿ ಬರುತ್ತೇವೆ ಎನ್ನುತ್ತಾರೆ. ಮುಸಲ್ಮಾನ ಹುಡುಗರು ಟೋಪಿ ಧರಿಸಿ ಬರುತ್ತೇವೆ ಎಂದು ಪಟ್ಟು ಹಿಡಿಯುತ್ತಾರೆ. ಇದು ಹೀಗೇ ಮುಂದುವರಿಯುತ್ತಾ ಹೋದರೆ ಎಲ್ಲಿ ಕೊನೆಗೊಳ್ಳುತ್ತದೆ’ ಎಂದು ಪ್ರಶ್ನಿಸಿದರು.

ಸಿಡಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಜನ್‌ ಪೂವಯ್ಯ, ‘ಧರ್ಮ ರೂಪುಗೊಂಡ ಕಾಲಘಟ್ಟವೇ ಬೇರೆ. ಬಹುಶಃ ಆ ಸಮಯದಲ್ಲಿ ಮಹಿಳೆಯರು ನಿರ್ದಿಷ್ಟ ಉಡುಪನ್ನು ಧರಿಸಬೇಕಾಗಿತ್ತು. ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯೇ ಬೇರೆ. ಹುಡುಗಿಯರು ಮತ್ತು ಹುಡುಗರ ಉಡುಪಿನ ಆಯ್ಕೆ ವಿಸ್ತೃತಗೊಂಡಿದೆ. ಕೇರಳದ ಕೆಲ ಶಾಲೆಗಳು ಲಿಂಗ ತಟಸ್ಥತೆಯನ್ನೂ ಜಾರಿಗೆ ತಂದಿವೆ. ಹೀಗಿರುವಾಗ ನಮ್ಮ ಪವಿತ್ರ ಗ್ರಂಥಗಳಲ್ಲಿ ಹೇಳಿರುವ ಎಲ್ಲವನ್ನೂ ನಾವು ಅನುಸರಿಸಲು ಸಾಧ್ಯವಿಲ್ಲ. ನಾವು ಕಾನೂನು, ಸಂವಿಧಾನದ ಚೌಕಟ್ಟಿನಲ್ಲಿ ಬದುಕಬೇಕು’ ಎಂದರು.

‘ಸಂವಿಧಾನದ 28 ನೇ ವಿಧಿಯ ಅನುಸಾರ ಸರ್ಕಾರದ ಅನುದಾನ ಪಡೆಯುವ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಒಬ್ಬ ವ್ಯಕ್ತಿಯು ತನ್ನ ಧಾರ್ಮಿಕ ವೇಷಭೂಷಣದಿಂದ ಹೊರತಾಗಿರಬೇಕು. ಶ್ರೀಮಂತ–ಬಡವ, ಹಿಂದೂ–ಮುಸ್ಲಿಂ ಎಂಬ ತಾರತಮ್ಯವನ್ನು ಹೋಗಲಾಡಿಸಲು ಒಂದೇ ಸಮವಸ್ತ್ರ ಧರಿಸಬೇಕು, ಜಾತ್ಯತೀತ ದೃಷ್ಟಿಕೋನವನ್ನು ಕಾಯ್ದುಕೊಳ್ಳಬೇಕು. ಹಿಜಾಬ್‌ ಕಡ್ಡಾಯ ಎಂದು ಹೇಳುತ್ತಿರುವವರಿಂದಾಗಿ ಇಂದು ಹಿಜಾಬ್‌ ಧರಿಸದ ಮುಸ್ಲಿಂ ಸಮುದಾಯದ ಮಕ್ಕಳು ಇರಿಸುಮುರಿಸು ಅನುಭವಿಸುವಂತಾಗಿದೆ. ಇದರರ್ಥ ಇವರೆಲ್ಲಾ ಇಸ್ಲಾಂ ಧರ್ಮವನ್ನು ಪಾಲಿಸುತ್ತಿಲ್ಲ ಎಂದರ್ಥವೇ’ ಎಂದು ಪ್ರಶ್ನಿಸಿದರು.

‘ಶಿಕ್ಷಣದಲ್ಲಿ ಸಮಾನತೆ ಮುಖ್ಯವಾಗಿರಬೇಕೇ ಹೊರತು ಹಿಂದೂ, ಕೊಡವ, ಕ್ರಿಶ್ಚಿಯನ್ ಅಥವಾ ಮುಸ್ಲಿಂ-ಶಿಯಾ ಅಥವಾ ಸುನ್ನಿ ಎಂಬುದಲ್ಲ. ಶಿಕ್ಷಣವು ಸಂಪೂರ್ಣವಾಗಿ ಜಾತ್ಯತೀತ ಚಟುವಟಿಕೆಯಾಗಿದೆ. ಪ್ರತಿ ಶಾಲೆ ಕಾಲೇಜಿನಲ್ಲಿ ಜಾತ್ಯತೀತ ಶಿಕ್ಷಣವನ್ನು ನೀಡುವುದು, ಮೂಲಭೂತ ಸಾಂವಿಧಾನಿಕ ಮೌಲ್ಯಗಳು ಮತ್ತು ಹೆಣ್ಣು ಮಗುವಿನ ಘನತೆಯನ್ನು ಕಾಪಾಡುವುದು ಆದ್ಯತೆಯಾಗಬೇಕು’ ಎಂದು ಪ್ರತಿಪಾದಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು