ಶನಿವಾರ, ಮೇ 21, 2022
25 °C

ಕಲ್ಲಿನ ರಾಶಿ ಎಲ್ಲಿಂದ ಬಂತು ಎನ್ನುವುದರ ತನಿಖೆ: ಗೃಹಸಚಿವ ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಅದರಲ್ಲೂ ಕಲ್ಲಿನ ರಾಶಿ ಎಲ್ಲಿಂದ ಬಂತು? ಹೇಗೆ ಬಂತು? ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾರು ಈ ಘಟನೆಯಲ್ಲಿ ಭಾಗಿಯಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

'ಈ ರೀತಿ ಯಾರೇ ಮಾಡಿರಲಿ, ಯಾವುದಕ್ಕೇ ಮಾಡಿರಲಿ ಎಲ್ಲದಕ್ಕೂ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಮತ, ಧರ್ಮದವರೇ ಆಗಿದ್ದರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಪ್ರತಿಭಟನೆ ಮಾಡುವ ಹಕ್ಕು ಸಾರ್ವಜನಿಕರಿಗೆ ಇದೆ. ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿ, ಕಲ್ಲು ತೂರಾಟ ನಡೆಸಿರುವುದು ಅಕ್ಷಮ್ಯ ಅಪರಾಧ. ಇದು ಆಕಸ್ಮಿಕವಾಗಿ ನಡೆದ ಘಟನೆ. ಆದರೆ, ಒಂದೂವರೆ ಗಂಟೆಯಲ್ಲಿ ಪೊಲೀಸರು ತಹಬದಿಗೆ ತಂದಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ' ಎಂದು ಭಾನುವಾರ ಇಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

'ಯುವಕ ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿದ್ದರ ಬಗ್ಗೆ ಕಂಪ್ಲೇಂಟ್‌ ಮಾಡಿದ್ದಾರೆ. ಪೊಲೀಸರು ಕಾನೂನಿನ ಪ್ರಕಾರ ಕ್ರಮವೂ ಕೈಗೊಂಡಿದ್ದಾರೆ. ಆದರೆ, ಸಾವಿರಕ್ಕೂ ಹೆಚ್ಚು ಜನ ಇದ್ದ ಗುಂಪು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಹಿಂಸಾಚಾರಕ್ಕಿಳಿದಿದೆ. ಪೊಲೀಸ್‌ ವಾಹನ ಜಖಂಗೊಂಡಿವೆ. ಪೊಲೀಸರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇನ್‌ಸ್ಪೆಕ್ಟರ್‌ ಗ್ರೇಡ್‌ನವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅನೇಕ ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ' ಎಂದರು.

ಮುಂದುವರಿದು, 'ಕಾನೂನು ಸುವ್ಯವಸ್ಥೆ ಕಾಪಾಡಲು ಬೇರೆಡೆಯಿಂದ ಪೊಲೀಸ್‌ ಪಡೆ ತರಿಸಿ ಬಂದೋಬಸ್ತ್‌ ಮಾಡಲಾಗಿದೆ. ಯಾರೇ ಕಾನೂನು ಕೈಗೆತ್ತಿಕೊಂಡರೂ ಅವರನ್ನು ಬಿಡುವುದಿಲ್ಲ. ಈಗಾಗಲೇ ಕೆಲವರ ಬಂಧನ ಮಾಡಲಾಗುತ್ತಿದೆ. ಎಷ್ಟು ಜನರು ಎನ್ನುವುದನ್ನು ಅನಂತರ ತಿಳಿಸುತ್ತೇನೆ. ಕೆ.ಜೆ. ಹಳ್ಳಿ, ಡಿ.ಜೆ. ಹಳ್ಳಿ ಪ್ರಕರಣದ ಮಾದರಿಯಲ್ಲೇ ಈ ಘಟನೆ ನಡೆದಿದೆ’ ಎಂದೂ ಹೇಳಿದರು.

ಇವನ್ನೂ ಓದಿ
ಪ್ರಚೋದನಕಾರಿ ಪೋಸ್ಟ್‌: ಹಳೇ ಹುಬ್ಬಳ್ಳಿ ಉದ್ವಿಗ್ನ, ಪೊಲೀಸರ ಮೇಲೆ ಕಲ್ಲು ತೂರಾಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು