ಗುರುವಾರ , ಅಕ್ಟೋಬರ್ 29, 2020
21 °C

ಬಾಡಿಗೆ: ಅಗ್ರಿಮೆಂಟ್‌ ಜಾಗದಲ್ಲಿ ಅಡ್ಜಸ್ಟ್‌ಮೆಂಟ್

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

Bangalore home rent

ದಾವಣಗೆರೆ: ನಗರದ ಅನೇಕ ಬಡಾವಣೆಗಳಲ್ಲಿ ಮನೆಗಳ ಮುಂದೆ ‘ಮನೆ ಬಾಡಿಗೆಗೆ ಇದೆ’ ಎಂಬ ನಾಮಫಲಕ ಸಾಮಾನ್ಯವಾಗಿದೆ. ಬಹುತೇಕ ಮಾಲೀಕರು ಬಾಡಿಗೆ ಇಳಿಸಿದ್ದಾರೆ. ದೊಡ್ಡ ದೊಡ್ಡ ವಾಣಿಜ್ಯ ಮಳಿಗೆಗಳು, ಮಾಲ್‌ಗಳೂ ಇದಕ್ಕೆ ಹೊರತಾಗಿಲ್ಲ. ಪಿ.ಜಿಗಳತ್ತ ಯಾರೂ ಮುಖ ಮಾಡುತ್ತಿಲ್ಲ.

‘ನಾಲ್ಕು ತಿಂಗಳಿಂದ ಮನೆ ಎದುರು ಬಾಡಿಗೆಯ ಬೋರ್ಡ್‌ ಹಾಕಿದ್ದೆ. ಯಾರೂ ಬಂದಿಲ್ಲ. ಬ್ಯಾಂಕ್‌ ಸಾಲದ ಕಂತು ಕಟ್ಟಲು ಬಂದಷ್ಟು ಬರಲಿ ಎಂದು 10 ದಿನದ ಹಿಂದೆ ಅರ್ಧ ಬಾಡಿಗೆಗೆ ನೀಡಿದ್ದೇನೆ’ ಎಂದು ವಿದ್ಯಾನಗರದ ಸಂತೋಷ್‌ ಹೇಳಿದರು.

ಕಲಬುರ್ಗಿ ನಗರದ ಖೂಬಾ ಲೇಔಟ್, ಗೋದುತಾಯಿ ಕಾಲೊನಿ, ವೆಂಕಟೇಶ ನಗರ, ಜೇವರ್ಗಿ ಕಾಲೊನಿ, ಐವಾನ್–ಇ–ಶಾಹಿಯಲ್ಲಿ ಡಬಲ್ ಬೆಡ್‌ರೂಮ್ ಮನೆಗೆಗಳನ್ನು ಕೋವಿಡ್‌ಗೂ ಮುನ್ನ ₹8 ಸಾವಿರದಿಂದ  ₹10 ಸಾವಿರ ಬಾಡಿಗೆಗೆ ನೀಡಲಾಗುತ್ತಿತ್ತು. ಇತ್ತೀಚಿಗೆ ಅದನ್ನು ₹6 ಸಾವಿರದಿಂದ ₹7 ಸಾವಿರಕ್ಕೆ ಇಳಿಸಲಾಗಿದೆ.

‘ಮೂರ್ನಾಲ್ಕು ತಿಂಗಳು ಕಾಯ್ದರೂ ಬಾಡಿಗೆದಾರರು ಬರದೇ ಇದ್ದುದರಿಂದ ಅನಿವಾರ್ಯವಾಗಿ ಬಾಡಿಗೆ ಕಡಿಮೆ ಮಾಡಿದ್ದೇವೆ. ಡಬಲ್ ಬೆಡ್‌ರೂಂ ಮನೆಗೆ ₹10 ಸಾವಿರ ಇದ್ದುದು, ಈಗ ₹8 ಸಾವಿರಕ್ಕೆ ಕೊಟ್ಟಿದ್ದೇವೆ’ ಎನ್ನುತ್ತಾರೆ ವೆಂಕಟೇಶ ನಗರದ ಮನೆ ಮಾಲೀಕರಾದ ಶ್ರುತಿ ಛಾತ್ರ.

ಬೀದರ್, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮನೆಗಳು ಖಾಲಿ ಇದ್ದರೂ ಹಲವು ಮಾಲೀಕರು ಬಾಡಿಗೆ ಕಡಿಮೆ ಮಾಡುವ ಔದಾರ್ಯ ತೋರಿಸಿಲ್ಲ. ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿ ಇತ್ತೀಚಿಗೆ ಕಟ್ಟಿಸಿದ ವಾಣಿಜ್ಯ ಸಂಕೀರ್ಣ ಹಾಗೂ ಮನೆಗಳ ಬಾಡಿಗೆ
ಕಡಿಮೆಯಾಗಿಲ್ಲವಾದರೂ ಹಳೆಯ ಚಾಳಗಳು, ವಠಾರಗಳಲ್ಲಿನ ಮನೆಗಳ ಬಾಡಿಗೆಯನ್ನು ಕಡಿಮೆ ಮಾಡಲಾಗಿದೆ.

ತುಮಕೂರಿನಲ್ಲಿ ಕಚೇರಿ ಮತ್ತು ವಾಣಿಜ್ಯ ಮಳಿಗೆಗಳ ಬಾಡಿಗೆ ಅರ್ಧಕ್ಕರ್ಧ ಕಡಿಮೆಯಾಗಿದೆ. ಕೋಲಾರದಲ್ಲಿ ಬಾಡಿಗೆ ನಿಧಾನವಾಗಿ ಕೊಟ್ಟರೂ ಪರವಾಗಿಲ್ಲ ಎಂದು ಮಾಲೀಕರು ಉದಾರಿಗಳಾಗಿದ್ದಾರೆ.


ಬೆಂಗಳೂರಿನಲ್ಲಿ ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳ ಮುಂದೆ ‘ಬಾಡಿಗೆಗೆ’ ಎಂಬ ಫಲಕಗಳು ಸಾಮಾನ್ಯವಾಗಿವೆ - –ಪ್ರಜಾವಾಣಿ ಚಿತ್ರ. ಅನೂಪ್ ರಾಘ್. ಟಿ.

ರಾಮನಗರದಲ್ಲಿ ಖಾಲಿಯಾದ ಮನೆಗಳಿಗೆ ಹೊಸ ಬಾಡಿಗೆದಾರರು ಬರುತ್ತಿಲ್ಲ. ಇದರಿಂದಾಗಿ ಗೃಹ ಸಾಲ ಪಡೆದು ಮನೆ ಕಟ್ಟಿದವರು ಸಂಕಷ್ಟದಲ್ಲಿದ್ದಾರೆ. ವಾಣಿಜ್ಯ ಮಳಿಗೆಗಳ ಮಾಲೀಕರು ವರ್ಷದ ಸರಾಸರಿ ಬಾಡಿಗೆ ಏರಿಸದೇ ಹಳೆಯ ಬಾಡಿಗೆ ದರವನ್ನೇ ಮುಂದುವರಿಸಿದ್ದಾರೆ’ ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ಬ್ರೋಕರ್ ಶಂಕರ್.

ದೊಡ್ಡಬಳ್ಳಾಪುರದಲ್ಲಿ ಮನೆ ಖಾಲಿ ಮಾಡಿ ಹೋದವರು ಲಾಕ್‌ಡೌನ್‌ ತೆರವಾದ ನಂತರವೂ ಮರಳಿ ಬಂದಿಲ್ಲ ಎನ್ನುತ್ತಾರೆ ಕೈಗಾರಿಕಾ ಪ್ರದೇಶದಲ್ಲಿನ ವೀರಾಪುರ ಗ್ರಾಮದ ಮನೆ ಮಾಲೀಕ ವೆಂಕಟೇಶ್.

ಸಾಲ ಮಾಡಿ ಬಾಡಿಗೆ ಮನೆ ಕಟ್ಟಿಸಿರುವವರು ಬಾಡಿಗೆಯನ್ನು ಶೇ 20ರಷ್ಟು  ಕಡಿಮೆ ಮಾಡಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಬಾಡಿಗೆ ಪಡೆಯುವುದನ್ನು ಒಂದೆರಡು ತಿಂಗಳು ಮುಂದೂಡಲಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರವು ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಕಾರಣಕ್ಕೆ ಬಹುತೇಕ ಅಧಿಕಾರಿಗಳು ಬೆಂಗಳೂರಿನಲ್ಲಿಯೇ ವಾಸ ಮಾಡುತ್ತಾರೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕಾರಣ ಕೈಗಾರಿಕೆಗಳು ಸಹ ಇಲ್ಲ. ಆದ್ದರಿಂದ ಬಾಡಿಗೆ ಮನೆಗಳಿಗೆ ದೊಡ್ಡ ಬೇಡಿಕೆ ಇಲ್ಲ.

ಉಡುಪಿಯಲ್ಲಿ ಬಾಡಿಗೆ ಶೇ 25ರಷ್ಟು ಇಳಿಕೆ: ಮಣಿಪಾಲ ಹಾಗೂ ಉಡುಪಿ ಹೃದಯಭಾಗದಲ್ಲಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ಶೇ 25ರಷ್ಟು ಇಳಿಕೆಯಾಗಿದೆ. ಮಳಿಗೆ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಬ್ಯಾಂಕ್ ಸಾಲ ಪಡೆದಿರುವ ಮಾಲೀಕರು, ಸಾಲ ಮರುಪಾವತಿ ಮಾಡಲು ಅನ್ಯದಾರಿ ಕಾಣದೆ ಬಾಡಿಗೆ ಇಳಿಕೆ ಮಾಡಿದ್ದಾರೆ. ಕೋವಿಡ್‌ಗೂ ಮುಂಚೆ ₹ 50,000 ಇದ್ದ ಬಾಡಿಗೆ ಈಗ ₹ 40,000 ಆಸುಪಾಸಿಗೆ ಬಂದಿದೆ. ಕೆಲವರು ಮಳಿಗೆಗಳನ್ನು ಮಾರಾಟಕ್ಕಿಟ್ಟಿದ್ದಾರೆ.

ಕಾಯಂ ನೆಲೆಗೆ ಯತ್ನಿಸುತ್ತಿರುವ ಕರಾವಳಿಗರು

ಮಂಗಳೂರು: ಕೋವಿಡ್–19 ಬಳಿಕ ಹೊರರಾಜ್ಯ, ಗಲ್ಫ್ ಹಾಗೂ ಇತರ ರಾಷ್ಟ್ರಗಳಲ್ಲಿ ವಿವಿಧ ಉದ್ದಿಮೆ ಹಾಗೂ ಉದ್ಯೋಗದಲ್ಲಿದ್ದವರು ಮರಳಿ ಊರಿಗೆ ಬರುತ್ತಿದ್ದು, ಕರಾವಳಿಯಲ್ಲಿ ಮನೆ, ಫ್ಲ್ಯಾಟ್‌, ಕಟ್ಟಡಗಳ ಖರೀದಿ ವ್ಯವಹಾರ ಹೆಚ್ಚಾಗುತ್ತಿದ್ದರೂ ಬೆಲೆ ಕುಸಿಯುತ್ತಿದೆ.

‘ಹೊರ ಊರಿನಲ್ಲಿದ್ದು, ಉದ್ದಿಮೆ–ಉದ್ಯೋಗ ಕಳೆದುಕೊಂಡವರು ಈ ಹಿಂದೆ ಹೆಚ್ಚುವರಿ ಹೂಡಿಕೆಯಾಗಿ ಖರೀದಿಸಿದ್ದ ಮನೆ, ಫ್ಲ್ಯಾಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನೊಂದೆಡೆ, ವರ್ಕ್‌ ಫ್ರಂ ಹೋಂ, ಬಾಡಿಗೆ ಮನೆಯಲ್ಲಿದ್ದವರೆಲ್ಲ, ಕಡಿಮೆ ಬೆಲೆಗೆ ಕಾಯಂ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಇದರಿಂದಾಗಿ ಖರೀದಿ ಹೆಚ್ಚಿದೆ. ಆದರೆ, ಬೆಲೆ ಹೆಚ್ಚಿಲ್ಲ’ ಎನ್ನುತ್ತಾರೆ ಲ್ಯಾಂಡ್‌ ಟ್ರೇಡರ್ಸ್‌ನ ಶ್ರೀನಾಥ್‌ ಹೆಬ್ಬಾರ್.

‘ಭವಿಷ್ಯದಲ್ಲಿ ಇನ್ನಷ್ಟು ದುಬಾರಿ ಆಗಬಹುದು ಎಂಬ ಕಾರಣಕ್ಕೂ ಹಲವರು ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ಸೆಕೆಂಡ್ ಹ್ಯಾಂಡ್ ಖರೀದಿ ಹೆಚ್ಚಾಗಿದೆ. ಐಷಾರಾಮಿ ಮನೆಗಳ ಬೆಲೆ ತೀವ್ರ ಕುಸಿತವಾಗಿದೆ’ ಎನ್ನುತ್ತಾರೆ ಉದ್ಯಮಿ ಕ್ಯಾನಿ ಮೆಂಡೋನ್ಸಾ.

‘ಕೃಪೆ’ ತೋರಿದ ಕೆಲ ಮಾಲೀಕರು

ಚಿಕ್ಕಮಗಳೂರಿನಲ್ಲಿ ಕೆಲವೇ ಕೆಲವು ಮಾಲೀಕರು ಅಂಗಡಿ, ಮಳಿಗೆ, ಮನೆಗಳಿಗೆ ಒಂದು ತಿಂಗಳ ಬಾಡಿಗೆ ಬಿಡುವ ‘ಕೃಪೆ’ ತೋರಿದ್ದಾರೆ. ಮತ್ತೆ ಕೆಲವರು ಬಾಡಿಗೆಯನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ಮಳಿಗೆಗಳ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಬಾಡಿಗೆ ವಿನಾಯಿತಿ ನೀಡಿದ್ದಾರೆ. ಪುತ್ತೂರಿನ ಇಗ್ನೇಶಿಯಸ್ ಡಯಾಸ್ ಮಾಲೀಕತ್ವದ ಡಯಾಸ್ ಕಾಂಪ್ಲೆಕ್ಸ್‌, ಬೆಳ್ತಂಗಡಿಯ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಳಿಗೆ, ಬಂಟ್ವಾಳ ಕೆಳಗಿನಪೇಟೆ ಉದ್ಯಮಿ ಇಕ್ಬಾಲ್ ನಿಶ್ಬಾ ಒಡೆತನದ ಬಿ.ಸಿ. ರೋಡ್‌, ಬಂಟ್ವಾಳ, ಉಪ್ಪಳ ಹಾಗೂ ಮಂಗಳೂರಿನ ಮಳಿಗೆಗಳು ಮತ್ತು ವಸತಿ ಸಮುಚ್ಚಯಗಳು, ಪಾಣೆಮಂಗಳೂರು ಬಿ.ಎಚ್. ಕಾಂಪ್ಲೆಕ್ಸ್ ಮಾಲೀಕ ಮಹಮ್ಮದ್ ಹಸನ್ ಬರಿಮಾರು, ಉಜಿರೆಯ ಅರಿಪ್ಪಾಡಿ ಮಠ ವಾಣಿಜ್ಯ ಸಂಕೀರ್ಣ, ಮಂಗಳೂರಿನ ಕೇರಳ ಸಮಾಜಂ ಕಟ್ಟಡ, ಯೆನೆಪೋಯ ಮತ್ತಿತರ ಕಾಂಪ್ಲೆಕ್ಸ್‌ಗಳು ಒಂದೆರಡು ತಿಂಗಳ ಬಾಡಿಗೆ ಮನ್ನಾ ಮಾಡಿವೆ.

ಕಲಬುರ್ಗಿಯ ಶರಣಬಸವೇಶ್ವರ ಟೆಂಪಲ್ ರಸ್ತೆಯಲ್ಲಿರುವ ಅಶೋಕ ಕಾಂಪ್ಲೆಕ್ಸ್ ಮಾಲೀಕ ಲಕ್ಷ್ಮಿನಾರಾಯಣ ಮನೋವರಕರ ಅವರು ಮಳಿಗೆಯಲ್ಲಿ ಬಾಡಿಗೆಗಿದ್ದ ಅಂಗಡಿಗಳಿಗೆ ವ್ಯಾಪಾರ ಆಗದಿರುವುದನ್ನು ಗಮನಿಸಿ ಮೂರು ತಿಂಗಳ ಬಾಡಿಗೆ ಮೊತ್ತ ₹ 10.50 ಲಕ್ಷವನ್ನು ಮನ್ನಾ ಮಾಡುವ ಮೂಲಕ ಸಂಕಟದಲ್ಲಿರುವವರ ನೆರವಿಗೆ ಬಂದಿದ್ದಾರೆ.


ಕಲಬುರ್ಗಿಯಲ್ಲಿರುವ ಅಶೋಕ ಕಾಂಪ್ಲೆಕ್ಸ್‌ನ ಮಳಿಗೆಗಳ ಮೂರು ತಿಂಗಳ ಬಾಡಿಗೆಯನ್ನು ಮಾಲೀಕ ಲಕ್ಷ್ಮಿನಾರಾಯಣ ಮನೋವರಕರ ಅವರು ಪಡೆದಿಲ್ಲ

ತುಮಕೂರಿನ ಅಶೋಕ ನಗರದಲ್ಲಿ ಆರು ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ನಾಗರಾಜ್, ಬಾಡಿಗೆದಾರರಿಗೆ ಒಂದು ತಿಂಗಳ ಬಾಡಿಗೆ ಮನ್ನಾ ಮಾಡಿದ್ದಾರೆ. ಬಾಕಿ ಉಳಿಸಿಕೊಂಡಿರುವ ಬಾಡಿಗೆ ನೀಡುವಂತೆಯೂ ಅವರು ಒತ್ತಡ ಹೇರಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ವಾಣಿಜ್ಯ ಮಳಿಗೆಗಳ ಮಾಲೀಕರು ಒಂದರಿಂದ ಮೂರು ತಿಂಗಳ ತನಕ ಬಾಡಿಗೆ ವಿನಾಯಿತಿ ನೀಡಿದ್ದಾರೆ.

ಹುಬ್ಬಳ್ಳಿ–ಧಾರವಾಡದಲ್ಲಿ ಬಾಡಿಗೆ ಕಡಿಮೆ ಇಲ್ಲ!

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡದಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೆಂಟರ್‌ಗಳು ಹೆಚ್ಚು. ಹಾಗಾಗಿ, ಹೊರಗಿನಿಂದ ಇಲ್ಲಿಗೆ ಹೆಚ್ಚು ಜನರು ಬರುತ್ತಾರೆ. ಸದ್ಯ ಎರಡೂ ಮುಚ್ಚಿರುವುದರಿಂದ, ಅವರ ಆಶ್ರಯ ತಾಣವಾಗಿದ್ದ ಪೇಯಿಂಗ್ ಗೆಸ್ಟ್‌ಗಳು, ಬಾಡಿಗೆ ಮನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳು ತಾತ್ಕಾಲಿಕವಾಗಿ ಖಾಲಿ ಇವೆ.

‘ಈಗ ವ್ಯಾಪಾರ–ವಹಿವಾಟು ಸಹಜ ಸ್ಥಿತಿಯತ್ತ ಮರಳುತ್ತಿದೆ. ಜನರು ವಾಪಸಾಗುತ್ತಿದ್ದಾರೆ. ಹಾಗಾಗಿ, ಬಾಡಿಗೆ ದರದಲ್ಲಿ
ವ್ಯತ್ಯಾಸವಾಗಿಲ್ಲ’ ಎಂದು ಹುಬ್ಬಳ್ಳಿಯ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ದುರ್ಗಾ ಡೆವಲಪರ್ಸ್ ಹಾಗೂ ಪ್ರಮೋಟರ್ಸ್‌ ವ್ಯವಸ್ಥಾಪಕ ನಿರ್ದೇಶಕ ಉಮೇಶ ಉಂಡಿ ಅಭಿಪ್ರಾಯಪಟ್ಟರು.

ಮೈಸೂರು, ಮಂಡ್ಯ, ಹಾಸನ: ಬಾಡಿಗೆಯಲ್ಲಿ ಡಿಸ್ಕೌಂಟ್

ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಆರಂಭದ ಮೂರು ತಿಂಗಳಲ್ಲಿ ಸಾಕಷ್ಟು ಮನೆ–ಮಳಿಗೆಗಳು
ಖಾಲಿ ಇದ್ದವು. ಆರ್ಥಿಕ ವಹಿವಾಟು ಕುಸಿದ ಪರಿಣಾಮ ಮನೆ ಬಾಡಿಗೆ ಹಾಗೂ ವಾಣಿಜ್ಯ ಮಳಿಗೆ ಎರಡರಲ್ಲೂ ಶೇ 10 ರಿಂದ 20ರವರೆಗೆ ಕಡಿಮೆ ಮಾಡಲಾಗಿದೆ. ಠೇವಣಿಯಲ್ಲಿ ಹಾಗೂ ಬಾಡಿಗೆ ದರದಲ್ಲಿ ರಿಯಾಯಿತಿ ನೀಡುತ್ತಿರುವ ಬೆಳವಣಿಗೆ ಮುಂದುವರಿದಿದೆ.

ಇನ್ನು ಮಾರುಕಟ್ಟೆ ಪ್ರದೇಶದ, ಜನದಟ್ಟಣೆ ಪ್ರದೇಶ, ಸರ್ಕಾರಿ ಕಚೇರಿಗಳ ಸಮೀಪ ಇರುವ ಮನೆಗಳ ಮಾಲೀಕರು ಬಾಡಿಗೆ ಕಡಿಮೆ ಮಾಡುತ್ತಿಲ್ಲ. ಇಂದಲ್ಲ ನಾಳೆ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಭರವಸೆಯೊಂದಿಗೆ ಹಲವು ಕಡೆ ಇನ್ನೂ ಮನೆಯನ್ನು ಖಾಲಿ ಇರಿಸಿಕೊಂಡವರೂ ಇದ್ದಾರೆ. ಬಾಡಿಗೆದಾರರಿಂದ ಈಗ ಪಡೆಯುತ್ತಿದ್ದುದರಲ್ಲಿ ಒಂದೆರಡು ಸಾವಿರ ರೂಪಾಯಿ ಕಡಿಮೆ ಮಾಡಿದ ಉದಾಹರಣೆಗಳೂ ಸಾಕಷ್ಟಿವೆ. ನಿರ್ವಹಣೆ ಕಷ್ಟವಾಗಿದ್ದರಿಂದ ಪಿ.ಜಿ.ಗಳು ಬಂದ್‌ ಆಗಿವೆ.

ಇನ್ನು,₹ 10ಸಾವಿರದಿಂದ ₹15 ಸಾವಿರ ಬಾಡಿಗೆ ನೀಡುತ್ತಿದ್ದವರು, ಇದೀಗ ₹8 ಸಾವಿರದಿಂದ ₹ 10 ಸಾವಿರ ಒಳಗಾಗಿ ಬಾಡಿಗೆ ಇರುವ ಮನೆ ಕಡೆಗೆ ಮುಖ ಮಾಡಿದ್ದಾರೆ. ಬದಲಾದ ಆರ್ಥಿಕ ಪರಿಸ್ಥಿತಿಯಲ್ಲಿ ತಮ್ಮ ಅಗತ್ಯಗಳು ಹಾಗೂ ಅನಿವಾರ್ಯತೆಗಳನ್ನು ಪಟ್ಟಿ ಮಾಡಿ, ಆ ಪ್ರಕಾರ ಬಜೆಟ್‌ ಹೊಂದಿಸಿಕೊಳ್ಳುತ್ತಿದ್ದಾರೆ.

ಮನೆ ಹಾಗೂ ಅಂಗಡಿ ಒಟ್ಟೊಟ್ಟಿಗೇ ಇದ್ದವರು ‘ಕ್ಲಿನಿಕ್‌ಗಾಗಿ ಹೇಳಿ ಮಾಡಿಸಿದ್ದು’ ಎಂದು ಜಾಹೀರಾತು ನೀಡುತ್ತಿದ್ದಾರೆ.

ಒಂದು ತಟ್ಟೆಗೆ ಹಲವರ ಕೈ: ವ್ಯಾಪಾರ ವಹಿವಾಟು ಕುಸಿದಿದೆ. ಇದ್ದ ಕೆಲಸ ಹೋಗಿದ್ದರಿಂದ ಕೈಲಿದ್ದ ಬಂಡವಾಳ, ಅಥವಾ ಸಾಲ
ಮಾಡಿ, ಮನೆಗಳ ಪಕ್ಕ ಚಿಕ್ಕ ಚಿಕ್ಕ ಅಂಗಡಿಗಳನ್ನು ಮಾಡಿಕೊಂಡಿದ್ದಾರೆ. ಹೀಗಾಗಿ ಒಂದೇ ಬಡಾವಣೆಯಲ್ಲಿ ಕಿರಾಣಿ, ಕೆಮಿಕಲ್ಸ್‌ ( ಸೋಪು, ಸ್ಯಾನಿಟೈಸರ್, ಫಿನಾಯಿಲ್) ಅಂಗಡಿಗಳು ಹೆಚ್ಚಾಗಿ ಶುರುವಾಗಿದ್ದರಿಂದ ವ್ಯಾಪಾರ ಹಂಚಿಹೋಗಿದೆ.

ಚಿಕ್ಕ ಫ್ಯಾಕ್ಟರಿಗಳು ಉತ್ಪಾದನೆ ವೆಚ್ಚ ನಿರ್ವಹಿಸಲಾಗದೆ ಮುಚ್ಚಿವೆ. ಹೀಗಾಗಿ ಗೋದಾಮು, ಅಂಗಡಿಗಳ ಬಾಡಿಗೆಯನ್ನು ಅನಿವಾರ್ಯವಾಗಿ ಕಡಿಮೆ ಮಾಡಲಾಗಿದೆ ಎನ್ನುತ್ತಾರೆ ಮನೆ ಮತ್ತು ಅಂಗಡಿಗಳ ಮಾಲೀಕರಾದ ಮೈಸೂರಿನ ಸಿ.ಸುರೇಶ್.

ಆಗ ಹೋಂ ಸ್ಟೇ ಈಗ ಬಾಡಿಗೆ ಮನೆ

ಕೊಡಗು ಜಿಲ್ಲೆಯಲ್ಲಿ ಅಂದಾಜು 5 ಸಾವಿರ ಹೋಂ ಸ್ಟೇಗಳು ಇದ್ದು, ಅವುಗಳಲ್ಲಿ ನೋಂದಣಿಯಾದವುಗಳ ಸಂಖ್ಯೆ 900 ಮಾತ್ರ. ಅಲ್ಲಿ ಮಾತ್ರ ಪ್ರವಾಸಿಗರ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನುಳಿದ ಅನಧಿಕೃತ ಹೋಂ ಸ್ಟೇಗಳು ಈಗ ಬಾಡಿಗೆಯ ಮನೆಗಳಾಗಿ ಪರಿವರ್ತನೆಯಾಗುತ್ತಿವೆ. ಆದರೆ, ನಗರ ಪ್ರದೇಶದಿಂದ ದೂರವಿರುವ, ಏಕಾಂತದ ಸ್ಥಳದಲ್ಲಿ ವಾಸಿಸಲು ಯಾರೂ ಮುಂದೆ ಬರುತ್ತಿಲ್ಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು