ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2.25 ಕೋಟಿ ಮೌಲ್ಯದ ಆಭರಣ ಜಪ್ತಿ

*ಅಂತರರಾಜ್ಯ ಗ್ಯಾಂಗ್‌ ಸದಸ್ಯರ ಸೆರೆ * ಕಾರಿನಲ್ಲಿ ಬಂದು ಕೃತ್ಯ ಎಸಗುತ್ತಿದ್ದ ಆರೋಪಿಗಳು
Last Updated 2 ಜನವರಿ 2021, 16:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸರಣಿ ಕಳ್ಳತನ ಎಸಗಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸಮೇತ ಪರಾರಿಯಾಗುತ್ತಿದ್ದ ಗ್ಯಾಂಗ್‌ನ ಇಬ್ಬರು ಸದಸ್ಯರು, ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದೆ.

‘ಮನೆಯಲ್ಲಿ ಕಳವು ಮಾಡುತ್ತಿದ್ದ ಆರೋಪದಡಿ ಉತ್ತರ ಪ್ರದೇಶದ ಫಯೂಮ್ ಅಲಿಯಾಸ್ ಎಟಿಎಂ ಫಯೂಮ್ (35) ಹಾಗೂ ಮುರಸಲೀಂ ಮೊಹಮ್ಮದ್ ಅಲಿಯಾಸ್ ಸಲೀಂ (42) ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ ₹2.25 ಕೋಟಿ ಮೌಲ್ಯದ 4 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

‘ಸಂಜಯನಗರ, ಕೊಡಿಗೇಹಳ್ಳಿ, ಅನ್ನಪೂರ್ಣೇಶ್ವರಿನಗರ, ಬ್ಯಾಡರಹಳ್ಳಿ, ನಂದಿನಿ ಲೇಔಟ್, ರಾಜಗೋಪಾಲನಗರ, ಕೆ.ಜಿ.ಹಳ್ಳಿ, ಹೆಣ್ಣೂರು, ಅಮೃತಹಳ್ಳಿ, ಬಾಣಸವಾಡಿ, ಹೈಗ್ರೌಂಡ್ಸ್, ಜ್ಞಾನಭಾರತಿ ಹಾಗೂ ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿರುವ ಕೆಲ ಮನೆಗಳಲ್ಲಿ ಕಳ್ಳತನ ನಡೆದಿದ್ದವು. ಆ ಬಗ್ಗೆ ಆಯಾ ಠಾಣೆಯಲ್ಲಿ 35 ಪ್ರಕರಣಗಳು ದಾಖಲಾಗಿದ್ದವು.’

‘ಗ್ಯಾಂಗ್‌ನ ಇಬ್ಬರು ಸದಸ್ಯರು, ಇತ್ತೀಚೆಗೆ ಹೈದರಾಬಾದ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು, ಆರೋಪಿಗಳ ಬೆರಳಚ್ಚು ತರಿಸಿಕೊಂಡು ಪರಿಶೀಲನೆ ನಡೆಸಿದ್ದರು. ನಗರದಲ್ಲಿ ನಡೆದ ಕಳ್ಳತನ ಸ್ಥಳದಲ್ಲಿ ಸಿಕ್ಕ ಬೆರಳಚ್ಚಿಗೂ ಆರೋಪಿಗಳ ಬೆರಳಚ್ಚಿಗೂ ಹೋಲಿಕೆಯಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದೂ ಹೇಳಿದರು.

40 ಪ್ರಕರಣದಲ್ಲಿ ಭಾಗಿ: ‘ಆರೋಪಿ ಎಟಿಎಂ ಫಯೂಮ್ ವಿರುದ್ಧ ಉತ್ತರ ಪ್ರದೇಶದಲ್ಲಿ ದರೋಡೆ, ಕೊಲೆ, ಕೊಲೆ ಯತ್ನ ಸೇರಿದಂತೆ 40 ಪ್ರಕರಣಗಳು ದಾಖಲಾಗಿವೆ. ನೋಯಿಡಾ ಜೈಲಿನಲ್ಲಿದ್ದ ಆರೋಪಿ, ಜಾಮೀನು ಮೇಲೆ ಹೊರಬಂದು ತಲೆಮರೆಸಿಕೊಂಡಿದ್ದ. ಆತನ ಸುಳಿವು ನೀಡಿದವರಿಗೆ ಅಲ್ಲಿಯ ಸರ್ಕಾರ, ₹ 10 ಸಾವಿರ ಬಹುಮಾನವನ್ನೂ ಘೋಷಿಸಿತ್ತು.’

ಕಾರಿನಲ್ಲಿ ಬಂದು ಕಳ್ಳತನ; ‘ಉತ್ತರ ಪ್ರದೇಶ, ದೆಹಲಿ ಹಾಗೂ ಹರಿಯಾಣದಿಂದ ಆರೋಪಿಗಳು ಕಾರಿನಲ್ಲಿ ರಾಜ್ಯಕ್ಕೆ ಬರುತ್ತಿದ್ದರು. ಕಾಲೇಜು ಬ್ಯಾಗ್, ಕೈ ಚೀಲ ಹಿಡಿದುಕೊಂಡು ನಗರದಲ್ಲೆಡೆ ಓಡಾಡುತ್ತಿದ್ದರು. ಬಾಗಿಲು ಬಂದ್ ಇರುತ್ತಿದ್ದ ಮನೆಗಳಿಗೆ ಹೋಗಿ, ಕಾಲಿಂಗ್ ಬೆಲ್ ಒತ್ತುತ್ತಿದ್ದರು. ಯಾರಾದರೂ ಬಾಗಿಲು ತೆರೆದರೆ, ವಿಳಾಸ ಕೇಳಿದಂತೆ ಮಾಡಿ ವಾಪಸು ಹೋಗುತ್ತಿದ್ದರು. ಬಾಗಿಲು ತೆರೆಯದಿದ್ದರೆ, ಮನೆಯಲ್ಲಿ ಯಾರೂ ಇಲ್ಲವೆಂದು ತಿಳಿದು ಹಗಲು ಹಾಗೂ ರಾತ್ರಿ ಎರಡೂ ಸಮಯದಲ್ಲೂ ಕಳ್ಳತನ ಮಾಡುತ್ತಿದ್ದರು’ ಎಂದೂ ತಿಳಿಸಿದರು.

ಮೃತನ ಹೆಸರು ಹೇಳಿ ದಿಕ್ಕು ತಪ್ಪಿಸಿದ್ದರು: ‘ಉತ್ತರ ಪ್ರದೇಶದ ರೌಡಿ ಅಶೋಕ್ ಲಾಟಿ ಜೈಲಿನಲ್ಲಿದ್ದು, ಆತನ ಮೂಲಕವೇ ಚಿನ್ನಾಭರಣ ಮಾರಾಟ ಮಾಡಿಸುವುದಾಗಿ ಆರೋಪಿಗಳು ಹೇಳಿದ್ದರು. ಅದೇ ಸುಳಿವು ಮೇರೆಗೆ ಉತ್ತರ ಪ್ರದೇಶಕ್ಕೆ ಹೋಗಿದ್ದ ಸಿಸಿಬಿ ಪೊಲೀಸರ ತಂಡ, ರೌಡಿ ಬಗ್ಗೆ ಜೈಲಿನಲ್ಲಿ ವಿಚಾರಿಸಿತ್ತು. ಆದರೆ, ಆತ ವರ್ಷದ ಹಿಂದೆಯೇ ಮೃತಪಟ್ಟಿದ್ದ ಸಂಗತಿ ತಿಳಿಯಿತು. ತಾವು ಬಚಾವಾಗಲು ಆರೋಪಿಗಳು, ಆತನ ಹೆಸರು ಬಳಕೆ ಮಾಡಿ ಪೊಲೀಸರ ದಿಕ್ಕು ತಪ್ಪಿಸಿದ್ದು ಗೊತ್ತಾಯಿತು’ ಎಂದೂ ಕಮಲ್ ಪಂತ್ ಹೇಳಿದರು.

‘ಕಳ್ಳತನ ಮಾಡಿದ್ದ ಆಭರಣಗಳನ್ನು ಆರೋಪಿಗಳು, ಆರಂಭದಲ್ಲಿ ತಮ್ಮ ಹಾಗೂ ಸಂಬಂಧಿಕರ ಮನೆಯಲ್ಲಿ ಬಚ್ಚಿಡುತ್ತಿದ್ದರು’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT