ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಲಾ ನೀರು ಕುತ್ತಿಗೆಗೆ ಬಂದೈತ್ರಿ..! ಬಂಕಲಗಾ ಗ್ರಾಮಸ್ಥರ ಅಳಲು

ಬಂಕಲಗಾ ಗ್ರಾಮಕ್ಕೆ ನುಗ್ಗಿದ ಭೀಮಾ ನದಿ ಪ್ರವಾಹ: ‘ಕಾಳಜಿ’ ಕೇಂದ್ರ ಜನ
Last Updated 17 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಾತ್ರಿನ್ಯಾಗ್‌ ನೀರು ಬಂತರಿ.ಎಲ್ಲಾ ಮಂದಿ ಕಲ್ತು ಕೂಗ್‌ ಬಡದು ಹೇಳಿದ್ರು. ಉಟ್ಟ ಬಟ್ಟಿ ಮ್ಯಾಲ ಓಡಿ ಬಂದ ಜೀವಾ ಉಳಿಸಿಕೊಂಡೇವ್‌. ಕೂಸು,ಕುರಿ– ಮರಿ ಎಳಕೊಂಡು ಬಂದ್‌ ಇಲ್ಲಿ ಕುಂತೇವ್‌. ಮನ್ಯಾನ್‌ ದೇವ್ರ ಫೋಟೊ ತರಲಿಲ್ಲ; ಉಳದಾನೋ, ತೇಲಿ ಹೋಗ್ಯಾನೋ ಯಾಂಬಲ್ಲ...’

ಅಫಜಲಪುರ ತಾಲ್ಲೂಕಿನ ಭಂಕಲಗಾ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ಪ‍ಡೆದಿರುವ, ಗ್ರಾಮ ಪಂಚಾಯಿತಿ ಸದಸ್ಯೆ ಹೂವಮ್ಮ ಜಮಾದಾರ ಅವರ ಅಳಲು ಇದು.

‘ನೀರು ಕುತ್ತಿಗೆಗೆ ಬಂದದ. ಆಳಕಿ ಮಾಡಾವ್ರಿಗೆ (ಆಡಳಿತ ನಡೆಸುತ್ತಿರುವವರು) ಯಾಕ್‌ ಕಾನಸವಲ್ತರಿ..’ ಎಂದು ಅವರು ಪ್ರಶ್ನಿಸಿದರು.

ಭಂಕಲಗಾ ಗ್ರಾಮ ಭೀಮಾ ಪ್ರವಾಹದಿಂದ ಅರ್ಧದಷ್ಟು ಮುಳುಗಿದೆ. ಸಾವಿರಕ್ಕೂ ಹೆಚ್ಚು ಮಂದಿಯನ್ನು ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಸಮುದಾಯ ಭವನಗಳಿಗೆ ಸ್ಥಳಾಂತರಿಸಲಾಗಿದೆ. ಹೂವಮ್ಮನಂತೆ ಅಲ್ಲಿನ ಪ್ರತಿಯೊಬ್ಬ ಹೆಣ್ಣುಮಕ್ಕಳದೂ ಒಂದೊಂದು ಗೋಳಿನ ಕತೆ.

‘ಗಂಡ– ಹೆಂಡತಿ ದುಡಿದು ತಿನ್ನುತ್ತಿದ್ದೆವು. ಏಕಾಏಕಿ ನೀರು ಬಂದು ನಮ್ಮ ಎರಡು ಎತ್ತು, ಚಕ್ಕಡಿ,
ನಾಲ್ಕು ಆಡು ತೇಲಿಹೋದವು. ಮುತ್ತಿನಂತೆ ಸಾಕಿದ್ದ ಜೋಡೆತ್ತುಗಳು ಕಣ್ಣ ಮುಂದೆಯೇ ನೀರುಪಾಲಾದವು. ಮಕ್ಕಳ ಕಾಲಗಡಗ, ಬೆಳ್ಳಿ ಉಡದಾರ, ಬೋರಮಾಳ ಸರಾ, ತಾಳಿಗುಂಡು, ಚಾರುಚೂರು ರೊಕ್ಕ ಎಲ್ಲವೂ ನೀರಿನಲ್ಲಿ ಹೋಗಿವೆ. ಈಗ ಏನೂ ಉಳಿದಿಲ್ಲ. ಮುಂದಿನ ಜೀವನ ಹೇಗೋ, ಏನೋ’ ಎಂದು ಕಣ್ಣೀರು ಹಾಕಿದರು ಸಿದ್ದಮ್ಮ ಜಮಾದಾರ. ಕಾಲಿಗೆ ಗಾಜು ಚುಚ್ಚಿ ಬಾವು ಬಂದಿದ್ದರೂ ಅವರಿಗೆ ಇನ್ನೂ ಚಿಕಿತ್ಸೆ ಸಿಕ್ಕಿಲ್ಲ.

ಆರು ತಿಂಗಳ ಪುಟ್ಟ ಮಕ್ಕಳಿಂದ ಹಿಡಿದು 98 ವರ್ಷ ವಯಸ್ಸಿನ ಹಿರಿಯರೂ ಈ ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ.

‘ಬಹುಪಾಲು ಮಂದಿಗೆ ಕೆಮ್ಮು, ಜ್ವರ, ಶೀತ, ತಲೆನೋವು, ಚರ್ಮದ ತುರಿಕೆ ಕಾಡುತ್ತಿದೆ. ಮೂರು ದಿನಗ
ಳಾದರೂ ವೈದ್ಯರು ಬಂದು ತಪಾಸಣೆ ಮಾಡಿಲ್ಲ.ಗ್ರಾಮಕ್ಕೆ ಸಂ‍‍ಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಮೇಲೆ 10 ಅಡಿಗಿಂತ ಹೆಚ್ಚು ನೀರು ಹರಿಯುತ್ತಿದೆ. ಹೊಲಕ್ಕೆಹೋಗುವ ದಾರಿಯನ್ನೇ ಬಳಸಿಕೊಂಡು, ನೀರು– ಕೆಸರಿನ ಮಧ್ಯೆ ನಡೆದು ಬಂದಿದ್ದೇವೆ.ಕೆಲವು ಮಕ್ಕಳು ಕೂಡ ಮುಳ್ಳು, ಗಾಜಿನ ಚೂರು ತುಳಿದುಗಾಯಗೊಂಡು, ಕುಂಟುತ್ತಲೇ ಓಡಾಡುತ್ತಿದ್ದಾರೆ’ ಎಂದು ಅಲ್ಲಿದ್ದವರು ಹೇಳಿದರು.

ಕೆಲವರುಅಳಿದುಳಿದ ಅಕ್ಕಿ, ಜೋಳ, ತೊಗರಿ ಚೀಲ, ಪಾತ್ರೆ, ಬಟ್ಟೆ, ಹಳೆಯ ಟ್ರಂಕು, ಹಿರಿಯರು ಕೊಟ್ಟ ಸಂದೂಕುಗಳು, ಮುಂತಾದ ಗೃಹೋಪಯೋಗಿ ವಸ್ತುಗಳನ್ನು ತಂದಿಟ್ಟುಕೊಂಡಿದ್ದಾರೆ. ಟ್ರ್ಯಾಕ್ಟರ್‌ಗಳಲ್ಲಿ ಸಾಮಾನು– ಸರಂಜಾಮುಗಳನ್ನು ಹೇರಿಕೊಂಡು ಊರು ಖಾಲಿ ಮಾಡುತ್ತಿರುವವರು ಶನಿವಾರವೂ ಕಣ್ಣಿಗೆ ಬಿದ್ದರು.

ಹಸಿ ಬಾಣಂತಿಗೆ ಇಲ್ಲ ಬಿಸಿನೀರು

ಬಂಕಲಗಿಯ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ನಾಲ್ವರು ಹಸಿ ಬಾಣಂತಿಯರೂ ಇದ್ದಾರೆ. ಅದರಲ್ಲೂ ಇಬ್ಬರಿಗೆ ಹೆರಿಗೆ ಆಗಿ ಕೇವಲ ಒಂದು ತಿಂಗಳಾಗಿದೆ. ಬೆಣ್ಣೆ ಉಂಡೆಯಂಥ ಕೂಸುಗಳನ್ನು ಕಂಕುಳಲ್ಲಿ ಅವುಚಿಕೊಂಡು ಕೊಠಡಿ ಮೂಲೆಯಲ್ಲಿ ಆಶ್ರಯ ಪಡೆದಿದ್ದಾರೆ ಅವರು.

ಬಾಣಂತಿ ಹಾಗೂ ಮಕ್ಕಳನ್ನು ಎರೆಯಲು ಬಿಸಿನೀರು ಸಿಗುತ್ತಿಲ್ಲ. ಉರುವಲಿಗೆ ಕಟ್ಟಿಗೆಯೂ ಇಲ್ಲ. ಇದರಿಂದ ಕಂದಮ್ಮಗಳು ರಾತ್ರಿಯಿಡೀ ನಿದ್ದೆ ಮಾಡದೇ ಅಳುತ್ತವೆ ಎಂದರು ಭಾಗ್ಯಶ್ರೀ ವಿಠಲ ಜಮಾದಾರ.

‘ಮೂರು ದಿನದಿಂದ ನನಗೆ ಮತ್ತು ಕೂಸಿಗೆ ಜ್ವರ ಬರುತ್ತಿವೆ. ಊರಿನಲ್ಲೂ ವೈದ್ಯರಿಲ್ಲ. ಅಫಜಲಪುರಕ್ಕೆ ಹೋಗಿ ಅಡ್ಮಿಟ್‌ ಆಗೋಣವೆಂದರೆ ದಾರಿ ಬಂದ್‌ ಆಗಿದೆ. ಅನಿವಾರ್ಯವಾಗಿ ಹೊಲದ ಮನೆಗೆ ಹೋಗುತ್ತಿದ್ದೇನೆ’ ಎಂದು ಮುನ್ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT