ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಳ ಇಲ್ಲದಿದ್ದರೂ ರೈತರಿಗೆ ಮಾರುಕಟ್ಟೆ ವ್ಯವಸ್ಥೆ

ಕೊರೊನಾ ಪರಿಸ್ಥಿತಿಯಲ್ಲಿ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘದಿಂದ ಅಭಯ
Last Updated 20 ಏಪ್ರಿಲ್ 2021, 20:10 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿವರ್ಷದಂತೆ ಈ ಬಾರಿಯೂ ಮೇ ತಿಂಗಳಿನಲ್ಲಿ ಮಾವು–ಹಲಸು ಮೇಳ ಆಯೋಜನೆಗೆತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘ (ಹಾಪ್‍ಕಾಮ್ಸ್) ಒಲವು ತೋರಿದೆ. ಕೊರೊನಾ ಕಾರಣದಿಂದ ಮೇಳ ಸಾಧ್ಯವಾಗದಿದ್ದರೆ, ರೈತರಿಗೆ ಪರ್ಯಾಯ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದಾಗಿಯೂ ಸಂಸ್ಥೆಭರವಸೆ ನೀಡಿದೆ.

ಕೊರೊನಾ ಪರಿಸ್ಥಿತಿಯಿಂದ ‘ಮಾವು ಮೇಳ’ ಆಯೋಜನೆ ಕೈಬಿಟ್ಟಿರುವ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು (ಕೆಎಸ್‌ಎಂಡಿಎಂಸಿ)ಮಾವು ಬೆಳೆಗಾರರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಹಾಗೂ ಗ್ರಾಹಕರಿಗೆ ಮಾವು ತಲುಪಿಸುವ ಉದ್ದೇಶದಿಂದ ಅಂಚೆ ಇಲಾಖೆ ಮುಖಾಂತರ ಆನ್‌ಲೈನ್‌ ಮೂಲಕ ಮಾವು ಮಾರಾಟಕ್ಕೆ ಮುಂದಾಗಿದೆ.

ಹಾಪ್‍ಕಾಮ್ಸ್ ಕೂಡ ಪ್ರತಿವರ್ಷ ಮಾವು ಹಾಗೂ ಹಲಸಿನ ಮೇಳ ಆಯೋಜಿಸುತ್ತಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಲಾಕ್‌ಡೌನ್‌ ಇದ್ದಿದ್ದರಿಂದ ಮೇಳ ಆಯೋಜನೆ ಸಾಧ್ಯವಾಗಿರಲಿಲ್ಲ. ಇದರಿಂದ ಮಾವು ಬೆಳೆಗಾರರಿಗೆ ಸಮಸ್ಯೆಯಾಗಿತ್ತು. ಈ ಬಾರಿಯೂ ಕೊರೊನಾ ತೀವ್ರಗೊಂಡಿರುವುದರಿಂದ ಮಾವು ಬೆಳೆಗಾರರಿಗೆ ತೊಂದರೆಯಾಗದಂತೆ ಎಲ್ಲ ಮಳಿಗೆಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲುಹಾಪ್‌ಕಾಮ್ಸ್‌ ಯೋಜನೆ ರೂಪಿಸಿದೆ.

‘ವಾಡಿಕೆಯಂತೆ ಸಂಸ್ಥೆಯ ವತಿಯಿಂದ ಮಾವು ಹಾಗೂ ಹಲಸಿನ ಮೇಳ ನಡೆಸುವ ಉದ್ದೇಶ ಇದೆ. ಆದರೆ, ಕೊರೊನಾ ಸೋಂಕು ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವುದರಿಂದ ಮೇಳ ಆಯೋಜಿಸುವುದು ಅನುಮಾನ. ಮೇಳವನ್ನು ತೆರೆದ ಜಾಗದಲ್ಲಿ ಆಯೋಜಿಸಬೇಕು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಹೆಚ್ಚು ಜನ ಸೇರುವುದು ಅಪಾಯಕಾರಿ. ಎಲ್ಲ ಮಳಿಗೆಗಳಲ್ಲಿ ಸ್ಥಳೀಯವಾಗಿ ಮೇಳ ಆಯೋಜಿಸುವುದರಿಂದ ಗ್ರಾಹಕರ ಬಳಿಗೆ ಎಲ್ಲ ಬಗೆಯ ಮಾವು ಹಾಗೂ ಹಲಸು ತಲುಪುತ್ತದೆ. ಬೆಳೆಗಾರರಿಗೆ ಮಾರುಕಟ್ಟೆ ವಿಸ್ತರಿಸಿದಂತೆಯೂ ಆಗುತ್ತದೆ’ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್‌ ಎಸ್‌.ಮಿರ್ಜಿ ‘ಪ್ರಜಾವಾಣಿ’ಗೆ ವಿವರಿಸಿದರು.

‘ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಮಾವು ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಈ ಬಾರಿ ರಾಮನಗರ ಭಾಗದಿಂದ 60 ಟನ್‌ ಮಾವು ಬಂದಿದ್ದು, ಎಲ್ಲ ಮಾರಾಟ ಆಗಿದೆ. ಬೆಳೆಗಾರರಿಂದ ಗ್ರಾಹಕರಿಗೆ ನೇರವಾಗಿ ಆನ್‌ಲೈನ್ ಮೂಲಕ ಮಾವು ಹಾಗೂ ಹಲಸು ತಲುಪಿಸುವ ವ್ಯವಸ್ಥೆ ಕಲ್ಪಿಸಲು ಹಾಪ್‌ಕಾಮ್ಸ್‌ ಕೂಡ ಚಿಂತನೆ ನಡೆಸಿದೆ’ ಎಂದೂ ಹೇಳಿದರು.

‘ಮುಚ್ಚಿದ ಮಳಿಗೆ ತೆರೆಯೋಣ’ ಅಭಿಯಾನ ಆರಂಭ

ಬೆಂಗಳೂರು ನಗರದಾದ್ಯಂತ ಕಳೆದ ವರ್ಷ 235 ಹಾಪ್‌ಕಾಮ್ಸ್‌ ಮಳಿಗೆಗಳು ಚಾಲ್ತಿಯಲ್ಲಿದ್ದವು. ಇವುಗಳ ಪೈಕಿಕೆಲವು ಕಾರಣಾಂತರಗಳಿಂದ ಮುಚ್ಚಲ್ಪಟ್ಟಿದ್ದು, ಅವುಗಳನ್ನು ಮತ್ತೆ ತೆರೆಯಬೇಕೆಂಬ ಉದ್ದೇಶದಿಂದ ‘ಮುಚ್ಚಿದ ಮಳಿಗೆ ತೆರೆಯೋಣ’ ಅಭಿಯಾನವನ್ನು ಸಂಸ್ಥೆ ಹಮ್ಮಿಕೊಂಡಿದೆ.

‘ನಗರದಲ್ಲಿ ಪ್ರಸ್ತುತ 175 ಹಾಪ್‌ಕಾಮ್ಸ್‌ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ವಿವಿಧ ಕಾರಣಗಳಿಂದ 60 ಮಳಿಗೆಗಳ ಕಾರ್ಯಾಚರಣೆ ಸ್ಥಗಿತಗೊಂಡಿವೆ. ಇದಕ್ಕೆ ಪರೋಕ್ಷವಾಗಿ ಕೊರೊನಾ ಕಾರಣ ಇರಬಹುದು. ಕೆಲ ಮಳಿಗೆಗಳು ಗ್ರಾಹಕರ ಕೊರತೆಯಿಂದ ಮುಚ್ಚಲ್ಪಟ್ಟಿವೆ. ಈ ಎಲ್ಲ ಮಳಿಗೆಗಳನ್ನು ಮತ್ತೆ ತೆರೆಯಬೇಕೆಂಬ ಆಶಯದೊಂದಿಗೆ ‘ಮುಚ್ಚಿದ ಮಳಿಗೆ ತೆರೆಯೋಣ’ ಅಭಿಯಾನವನ್ನು ಏಪ್ರಿಲ್‌ನಿಂದ ಜೂನ್‌ವರೆಗೆ ಹಮ್ಮಿಕೊಂಡಿದ್ದೇವೆ. ಮಳಿಗೆಗಳನ್ನು ತೆರೆದು, ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಈ ಅಭಿಯಾನದಡಿ ಹಲವು ಕಾರ್ಯಗಳು ಪ್ರಗತಿಯಲ್ಲಿವೆ’ ಎಂದುಉಮೇಶ್‌ ಎಸ್‌.ಮಿರ್ಜಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT