ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಇಲಾಖೆ ಅಧಿಕಾರಿಯಿಂದ ಕಿರುಕುಳ: ಆರೋಪ

ಮಹಿಳಾ ಸಿಬ್ಬಂದಿಯಿಂದ ಮಹಿಳಾ ಆಯೋಗಕ್ಕೆ ದೂರು
Last Updated 18 ಫೆಬ್ರುವರಿ 2022, 20:19 IST
ಅಕ್ಷರ ಗಾತ್ರ

ಬೆಂಗಳೂರು: ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಲಾಖೆಯ ಮಹಿಳಾ ಸಿಬ್ಬಂದಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

‘ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ (ಆಡಳಿತ) ಎನ್‌.ಚಂದ್ರಶೇಖರ್ ಅವರು ಮಹಿಳಾ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಕಚೇರಿಯಲ್ಲಿನ ತಮ್ಮ ಕ್ಯಾಬಿನ್‌ಗೆ ಕರೆದು ಮೈಕೈ ಮುಟ್ಟುತ್ತಾರೆ. ವೈಯಕ್ತಿಕ ವಿಚಾರಗಳನ್ನು ಕೆದಕಿ ಮಹಿಳಾ ಸಿಬ್ಬಂದಿಯ ಚಲನವಲನಗಳ ಬಗ್ಗೆ ಪುರುಷ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸುತ್ತಾರೆ’ ಎಂದು ಆಯೋಗಕ್ಕೆ ನೀಡಿರುವ ದೂರಿನಲ್ಲಿ ಮಹಿಳಾ ಸಿಬ್ಬಂದಿ ಆರೋಪಿಸಿದ್ದಾರೆ.

‘ಇವರ ಕಾಟ ತಡೆಯಲಾರದೆ ಅನೇಕರು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದರಿಂದ ಹಾಲಿ ಇರುವ ಸಿಬ್ಬಂದಿಗೆ ಕೆಲಸದ ಒತ್ತಡವೂ ಹೆಚ್ಚಾಗಿದೆ. ಈ ಬಗ್ಗೆ ಇಲಾಖೆಯ ಪ್ರತಿ ಮಹಿಳಾ ಸಿಬ್ಬಂದಿಯಿಂದ ವಾಸ್ತವ ತಿಳಿದು, ದೌರ್ಜನ್ಯ ತಡೆಯಿರಿ ಹಾಗೂ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದೂ ಮನವಿ ಮಾಡಿಕೊಂಡಿದ್ದಾರೆ.

‌‘ಚಂದ್ರಶೇಖರ್ ಅವರು ಐಎಎಸ್‌ ಹುದ್ದೆಗೆ ಪದೋನ್ನತಿ ಪಡೆದವರು. ಇವರು ಕಚೇರಿಗೆ ಮೊದಲು ಬಂದಾಗ ಸಿಬ್ಬಂದಿಯ ಜಾತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಜಾತಿ ಆಧಾರದಲ್ಲಿ ಸಿಬ್ಬಂದಿಯನ್ನು ಒಡೆಯುವ ಕೆಲಸ ಮಾಡಿದರು. ನಾನು ಹೇಳಿದಂತೆ ಕೇಳಬೇಕು ಎಂದು ದರ್ಪ ಮಾಡುತ್ತಿದ್ದರು. ಮಾತು ಕೇಳದವರಿಗೆ ಕಿರುಕುಳ ನೀಡುತ್ತಿದ್ದರು’ ಎಂದು ಹೆಸರು ಹೇಳಲು ಇಚ್ಛಿಸಿದ ಸಿಬ್ಬಂದಿಯೊಬ್ಬರು ಆರೋಪಿಸಿದರು.

‘ಮಹಿಳೆಯರನ್ನು ಏಕವಚನ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಗದರುವುದು, ಅಶ್ಲೀಲವಾಗಿ ಮಾತನಾಡುವುದು, ಖಾಸಗಿಯಾಗಿ ಊಟಕ್ಕೆ ಆಹ್ವಾನಿಸುವುದು ಸೇರಿದಂತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ಇದರಿಂದ ಬೇಸತ್ತು ದೂರು ನೀಡಿದ್ದೇವೆ’ ಎಂದರು.

‘ಚಂದ್ರಶೇಖರ್‌ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಲಾಲ್‌ಬಾಗ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ್ದೇವೆ. ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಅವರಿಗೂ ಮನವಿ ಸಲ್ಲಿಸಿದ್ದೇವೆ. ಅವರನ್ನು ಕೂಡಲೇ ಬೇರೆ ಕಡೆಗೆ ವರ್ಗಾಯಿಸಿ, ಕಿರುಕುಳದಿಂದ ಮುಕ್ತಿ ನೀಡಬೇಕು. ನಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ಧರಣಿ ಕೂರಲಿದ್ದೇವೆ’ ಎಂದೂ ಎಚ್ಚರಿಸಿದರು.

ಈ ಬಗ್ಗೆ ಮಾಹಿತಿ ಪಡೆಯಲು ಸಚಿವ ಮುನಿರತ್ನ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT