ಶುಕ್ರವಾರ, ಮೇ 20, 2022
19 °C
ರೈತರನ್ನು ಸ್ವಾಗತಿಸಲು ಸಜ್ಜಾದ ಹೆಸರಘಟ್ಟದ ಐಐಎಚ್ಆರ್ ಆವರಣ

ಇಂದಿನಿಂದ ‘ರಾಷ್ಟ್ರೀಯ ತೋಟಗಾರಿಕೆ ಮೇಳ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರೈತರಿಗೆ ತೋಟಗಾರಿಕೆ ಬೆಳೆಗಳ ನೂತನ ತಂತ್ರಜ್ಞಾನಗಳು ಹಾಗೂ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಆಯೋಜಿಸಿರುವ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕೆ ಇಂದು ಅಧಿಕೃತ ಚಾಲನೆ ಸಿಗಲಿದೆ.

ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ಕೈಲಾಶ್‌ ಚೌಧರಿ ಅವರು ಬೆಳಿಗ್ಗೆ 11 ಗಂಟೆಗೆ ಮೇಳವನ್ನು ಆನ್‌ಲೈನ್‌ ಮೂಲಕ ಉದ್ಘಾಟಿಸಲಿದ್ದಾರೆ. ರೈತರಿಗೆ ಬೆಲೆ ಮಾಹಿತಿ ಒದಗಿಸುವ ಉದ್ದೇಶದಿಂದ ಸಂಸ್ಥೆ ಅಭಿವೃದ್ಧಿ ಪಡಿಸಿರುವ  ‘ಅರ್ಕಾ ವ್ಯಾಪಾರ್’ ಮೊಬೈಲ್ ಆ್ಯಪ್‌ಗೂ ಚಾಲನೆ ನೀಡಲಿದ್ದಾರೆ. 

ಆರ್ಟ್‌ ಆಫ್ ಲಿವಿಂಗ್ ಸಂಸ್ಥೆಯ ಅಧ್ಯಕ್ಷ ಶ್ರೀ ಶ್ರೀ ರವಿಶಂಕರ್ ಗುರೂಜಿ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ. ಐಸಿಎಆರ್‌ ಸಂಸ್ಥೆಯ ಎ.ಕೆ.ಸಿಂಗ್ ಹಾಗೂ ತ್ರಿಲೋಚನ್ ಮಹಾಪಾತ್ರ, ಐಐಎಚ್‌ಆರ್‌ ನಿರ್ದೇಶಕ ಎಂ.ಆರ್.ದಿನೇಶ್ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

ಕೊರೊನಾ ಕಾರಣದಿಂದ ಈ ಬಾರಿ ಭೌತಿಕ ಹಾಗೂ ಆನ್‌ಲೈನ್‌ ಮೂಲಕ ಮೇಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಭೌತಿಕವಾಗಿ ಹೆಚ್ಚು ಜನರು ಸೇರುವುದನ್ನು ತಡೆಯಲು ಮೇಳಕ್ಕೆ ಬರುವವರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಸಂಸ್ಥೆ ಸೂಚಿಸಿದೆ. ಮೇಳಕ್ಕೆ ಪ್ರತಿದಿನ ಆರು ಸಾವಿರ ಮಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಿದೆ. 

ಮೇಳದಲ್ಲಿ ಭೌತಿಕವಾಗಿ ಭಾಗವಹಿಸುವ ರೈತರಿಗೆ ವಿಜ್ಞಾನಿಗಳು ತೋಟದಲ್ಲೇ ವಿವರಗಳನ್ನು ನೀಡಲಿದ್ದಾರೆ. ದೇಶದ ಇತರೆ ರಾಜ್ಯಗಳಿಂದ ಆನ್‌ಲೈನ್‌ ಮೂಲಕ ಭಾಗವಹಿಸುವ ರೈತರಿಗೆ ಅಲ್ಲಿನ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ವೀಕ್ಷಣೆ ವ್ಯವಸ್ಥೆ ಇದೆ. ರೈತರು ತಮ್ಮದೇ ಭಾಷೆಯಲ್ಲಿ ಕೃಷಿ ವಿಜ್ಞಾನಿಗಳೊಂದಿಗೆ ಸಂವಹನ ನಡೆಸುವ ವ್ಯವಸ್ಥೆಯೂ ಇದೆ. 

ಮೇಳದಲ್ಲಿ ವಿಶೇಷತೆಗಳು: ಸಮಗ್ರ ತೋಟಗಾರಿಕೆ ಪದ್ಧತಿ, ಮಣ್ಣುರಹಿತ ಕೃಷಿ ವಿಧಾನ, ಟೆರೇಸ್ ಗಾರ್ಡನಿಂಗ್, ಹೊಸ ತಂತ್ರಜ್ಞಾನಗಳ ಪರಿಚಯ, ರೈತರ ಮನೆ ಬಾಗಿಲಿಗೆ ಬೀಜ ಪೂರೈಸುವ ‘ಸೀಡ್ ಪೋರ್ಟಲ್’, ನಗರ ಕೃಷಿಕರಿಗಾಗಿ ಹೈಡ್ರೋಪಾನಿಕ್ಸ್ ವಿಧಾನದಲ್ಲಿ ತರಕಾರಿ, ಹೂವು ಬೆಳೆಯುವ ಬಗ್ಗೆ ತರಬೇತಿ, ಕಡಿಮೆ ಶ್ರಮ ಹಾಗೂ ಹೆಚ್ಚು ಇಳುವರಿ ನೀಡುವಂತಹ ಹೂವು, ಹಣ್ಣು, ತರಕಾರಿ ಹೊಸ ತಳಿಗಳ ಪ್ರಾತ್ಯಕ್ಷಿಕೆಗಳು ಸಂಸ್ಥೆಯ ಆವರಣದಲ್ಲಿ ಸಜ್ಜುಗೊಂಡಿವೆ.

ಮೇಳಕ್ಕೆ ಭೇಟಿ ನೀಡಲು ಇಚ್ಛಿಸುವವರು https://nhf2021.iihr.res.in ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಮೇಳದ ನೇರಪ್ರಸಾರವನ್ನು https://www.facebook.com/events/610609993112714 ಮೂಲಕ ವೀಕ್ಷಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು