ಮಂಗಳವಾರ, ಮೇ 24, 2022
31 °C

ಬಿಜೆಪಿ ಕಾರ್‍ಯಕಾರಿಣಿಗೆ ಹೊಸಪೇಟೆ ಸಜ್ಜು: ರಾರಾಜಿಸುತ್ತಿರುವ ಬಾವುಟ, ಕಟೌಟ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ನಗರ ಸಿದ್ಧಗೊಂಡಿದ್ದು, ಎಲ್ಲೆಡೆ ಬಿಜೆಪಿಯ ಬಾವುಟ, ಕಟೌಟ್‌, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ಏ.16, 17ರಂದು ನಡೆಯಲಿರುವ ಕಾರ್ಯಕಾರಿಣಿಗೆ ನಗರದ ಭಟ್ರಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಭವ್ಯ ವೇದಿಕೆ ನಿರ್ಮಿಸಲಾಗುತ್ತಿದೆ. ಹಂಪಿ ವಾಸ್ತುಶಿಲ್ಪ ಹೋಲುವ ರೀತಿಯಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ನಗರದಿಂದ ಇತರೆ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಲ್ಲಿ ಬಿಜೆಪಿಯ ಬಾವುಟಗಳು, ನಾಯಕರ ಕಟೌಟ್‌, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಕಾರ್ಯಕಾರಿಣಿಗಾಗಿಯೇ ಬೃಹತ್‌ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ಪ್ರತಿನಿಧಿಗಳಿಗಾಗಿ ನಗರದ ವಿವಿಧ ಹೋಟೆಲ್‌ಗಳಲ್ಲಿ 800ಕ್ಕೂ ಹೆಚ್ಚು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪಕ್ಷದ ಮಾಜಿ ಮುಖ್ಯಮಂತ್ರಿಗಳು, ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, 800ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ತೆಂಗಿನಕಾಯಿ, ಅಶ್ವತ್ಥನಾರಾಯಣ, ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಅವರು ಗುರುವಾರ ಸಿದ್ಧತೆ ಪರಿಶೀಲಿಸಿದರು. 

ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ನಾಯಕರು, ಏ. 16ರಂದು ಬೆಳಿಗ್ಗೆ 11ಕ್ಕೆ ವಿಭಾಗ ಸಹಪ್ರಭಾರಿಗಳು, ಸಂಘಟನಾ ಕಾರ್ಯದರ್ಶಿಗಳ ಸಭೆ ಜರುಗಲಿದೆ. ಮಧ್ಯಾಹ್ನ 2.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಗೋಪೂಜೆ, ಪಕ್ಷದ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಚಾಲನೆ ದೊರೆಯಲಿದೆ. ಪಕ್ಷದ ಕಾರ್ಯಚಟುವಟಿಕೆಗಳ ಕುರಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಮಾತನಾಡುವರು. ಏ. 17ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿರುವ ಸಭೆಯಲ್ಲಿ ಎರಡು ನಿರ್ಣಯ ಕೈಗೊಳ್ಳಲಾಗುವುದು. ಸಂಜೆ 5ಕ್ಕೆ ಜೆ.ಪಿ. ನಡ್ಡಾ ಸಮಾರೋಪ ಭಾಷಣ ಮಾಡುವರು. ಬಳಿಕ ಬೂತ್‌ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ವಿವರಿಸಿದರು. 

ಪ್ರತಿ ಮೂರು ತಿಂಗಳಿಗೊಮ್ಮೆ ರಾಜ್ಯ ಕಾರ್ಯಕಾರಿಣಿ ನಡೆಯುತ್ತದೆ. ಮಂಗಳೂರು, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆದಿದೆ. ನೂತನ ವಿಜಯನಗರ ಜಿಲ್ಲೆಯಲ್ಲಿ ಈ ಸಲ ಹಮ್ಮಿಕೊಳ್ಳಲಾಗಿದೆ. ಮುಂದಿನ ಚುನಾವಣೆಗೆ ಈ ಸಭೆ ದಿಕ್ಸೂಚಿಯಾಗಲಿದೆ. ಪಕ್ಷದ ಕಾರ್ಯಚಟುವಟಿಕೆಗಳಿಗೆ ಸಭೆ ಸೀಮಿತವಾಗಿರಲಿದೆ. ವಿಶೇಷ ಸಂಪುಟ ಸಭೆ ನಡೆಯುವುದಿಲ್ಲ ಎಂದು ತಿಳಿಸಿದರು.

ಪಕ್ಷದ ಸಂಘಟನೆ ಇನ್ನಷ್ಟು ಬಲಗೊಳ್ಳಬೇಕು. ಪಕ್ಷದ ಕಾರ್ಯಕರ್ತರಲ್ಲಿ ನಾಯಕತ್ವ ಗುಣ ಬೆಳೆಸಿ, ಆ ಮೂಲಕ ಚುನಾವಣೆಯಲ್ಲಿ ಯಶ ಗಳಿಸುವುದು ಸಭೆಯ ಉದ್ದೇಶ. 2023ರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿವರಿಸಿದರು.

19, 20ಕ್ಕೆ ಕಟೀಲ್‌ ನೇತೃತ್ವದ ತಂಡ ಬಳ್ಳಾರಿಗೆ’
‘ಮುಂದಿನ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿಯ ಮೂರು ತಂಡಗಳು ರಾಜ್ಯದಾದ್ಯಂತ ಪ್ರವಾಸ ಕಾರ್ಯ ಆರಂಭಿಸಿವೆ. ಏ. 19, 20ರಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ನೇತೃತ್ವದ ತಂಡ ಬಳ್ಳಾರಿಗೆ ಬಂದು ವಸ್ತುಸ್ಥಿತಿಯ ಅಧ್ಯಯನ ನಡೆಸಲಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ತೆಂಗಿನಕಾಯಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು