ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರೆಸ್ವಾಮಿ ಸಂದರ್ಶನ: ‘ಗಾಂಧಿ ಹತ್ಯೆಗೆ ಮುನ್ನ ಬೆಂಗಳೂರಿಗೆ ಬಂದಿದ್ದ ಗೋಡ್ಸೆ’

Last Updated 26 ಮೇ 2021, 8:38 IST
ಅಕ್ಷರ ಗಾತ್ರ
ADVERTISEMENT
""
""

‘ಪ್ರಜಾವಾಣಿ’ಯ ವಿಶೇಷ ಸಂದರ್ಶನದಲ್ಲಿಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಬಿಚ್ಚಿಟ್ಟಿದ್ದರು. 'ಮಹಾತ್ಮ ಗಾಂಧಿ ಅವರನ್ನು ಕೊಲ್ಲುವ 15 ದಿನಗಳ ಮೊದಲು ನಾಥೂರಾಮ್‌ ಗೋಡ್ಸೆ ಬೆಂಗಳೂರಿಗೆ ಬಂದಿದ್ದ....' ಎನ್ನುವಂತಹ ಅಪರೂಪದ ವಿಷಯಗಳನ್ನು ಮೆಲುಕು ಹಾಕಿದ್ದರು. 2020ರ ಮಾರ್ಚ್‌ 4ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ...

ನಾಥೂರಾಮ್‌ ಗೋಡ್ಸೆ ಬೆಂಗಳೂರಿಗೆ ಬಂದಿದ್ದ...

‘ಆರ್‌ಎಸ್‌ಎಸ್‌ನ ರಾಷ್ಟ್ರೀಯ ಸಮಾವೇಶದಲ್ಲಿ ಭಾಗಿಯಾಗಲು ಬಂದಿದ್ದ ಆತ ಸ್ವಾಗತ ಸಮಿತಿಯ ಅಧ್ಯಕ್ಷ ವಾಸುದೇವಮೂರ್ತಿ ಅವರ ಮನೆಯಲ್ಲಿ ಉಳಿದಿದ್ದ. ಈ ಸುದ್ದಿಯನ್ನು ನನ್ನ ‘ಪೌರ ವಾಣಿ’ ಪತ್ರಿಕೆಯಲ್ಲಿ ಪ್ರಕಟಿಸಿದ್ದೆ. ಈ ವಿಚಾರವನ್ನು ನನ್ನ ನೆನಪಿನ ಸುರುಳಿಯಲ್ಲಿ ದಾಖಲಿಸಿದ್ದೆ. ಇದನ್ನು ಓದಿದ ಕೆಲವು ಆರ್‌ಎಸ್‌ಎಸ್‌ ಮುಖಂಡರು ನನ್ನ ಮನೆಗೆ ಬಂದರು. ಗೋಡ್ಸೆಗೂ ನಮ್ಮ ಸಂಘಟನೆಗೂ ಸಂಬಂಧ ಇಲ್ಲ. ಈ ಬಗ್ಗೆ ಸ್ಪಷ್ಟೀಕರಣ ಹಾಕಬೇಕು ಎಂದು ಕೋರಿದರು. ಅದಕ್ಕೆ ನಾನು ಒಪ್ಪಲಿಲ್ಲ. ಈ ರೀತಿ ಸ್ಪಷ್ಟೀಕರಣ ಹಾಕಿದರೆ ಸುದ್ದಿಯ ಪಾವಿತ್ರ್ಯ ಹೋಗುತ್ತದೆ ಎಂದೂ ಪ್ರತಿಪಾದಿಸಿದೆ. ಬಳಿಕ ಈ ವಿಚಾರವನ್ನು ನೆನಪಿನ ಸುರುಳಿಯ ಮೂರನೇ ಭಾಗದಲ್ಲಿ ದಾಖಲಿಸಿದ್ದೇನೆ ಎಂದರು.

ಈ ನಡುವೆ, ಗೋಡ್ಸೆ ಆರ್‌ಎಸ್‌ಎಸ್ ಸದಸ್ಯ ಎಂಬುದಕ್ಕೆ ಖಚಿತ ಸಾಕ್ಷ್ಯಗಳಿಲ್ಲ ಎಂಬ ಕಾರಣ ನೀಡಿ ಕೋರ್ಟ್‌ ಆರ್‌ಎಸ್ಎಸ್‌ಗೆ ಕ್ಲೀನ್‌ಚಿಟ್‌ ನೀಡಿತು. ಒಂದು ವೇಳೆ, ನನ್ನ ವರದಿಯನ್ನು ನೋಡಿದ್ದರೆ ಕ್ಲೀನ್‌ಚಿಟ್‌ ನೀಡುತ್ತಿರಲಿಲ್ಲ. ನಾನು ಪುರಾವೆ ಸಮೇತ ವರದಿ ಮಾಡಿದ್ದೆನಲ್ಲ. ಅದಕ್ಕಿಂತ ದೊಡ್ಡ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್‌ನಲ್ಲಿ ನನಗೆ ಸಾಕಷ್ಟು ಸ್ನೇಹಿತರು ಇದ್ದಾರೆ. ಅವರು ಸಿದ್ಧಾಂತ ಬೇರೆ. ನನ್ನ ಸಿದ್ಧಾಂತ ಬೇರೆ. ಹಾಗೆಂದು ಸ್ನೇಹವನ್ನು ಬಿಡಲು ಸಾಧ್ಯವೇ ಎಂದು ದೊರೆಸ್ವಾಮಿ ಪ್ರಶ್ನಿಸಿದರು.

ಬ್ರಿಟಿಷ್‌ ದಾಖಲೆಗಳ ಸುಡಲು ಟೈಂ ಬಾಂಬ್‌
‘ಸ್ವಾತಂತ್ರ್ಯ ಹೋರಾಟದಲ್ಲಿ ನಾವು ಬಳಸಿದ ಟೈಂ ಬಾಂಬ್‌ ಜನರನ್ನು ಕೊಲ್ಲುವ ಬಾಂಬ್‌ ಅಲ್ಲ. ಬ್ರಿಟಿಷರ ಅಮೂಲ್ಯ ದಾಖಲೆಗಳನ್ನು ನಾಶ ಮಾಡುವ ಬಾಂಬ್‌’ ಎಂದು ಎಚ್‌.ಎಸ್‌.ದೊರೆಸ್ವಾಮಿ ಹೇಳಿದರು.

‘ಹಾಕಿದ 10 ನಿಮಿಷಗಳಲ್ಲೇ ಉರಿ ಬರುವಂತಹ ಬಾಂಬ್ ಅದು. ಬಳಿಕ ಬೆಂಕಿ ಹೊತ್ತಿಕೊಳ್ಳುತ್ತಿತ್ತು. ನಾವು ಅದನ್ನು ಅಂಚೆ ಕಚೇರಿಯ ಬಾಕ್ಸ್‌ಗೆ ಹಾಕುತ್ತಿದ್ದೆವು. ಅದು ಅಮೂಲ್ಯ ದಾಖಲೆಗಳನ್ನು ಸುಡುತ್ತಿತ್ತು. ನಮ್ಮ ಕೆಲವು ಬುದ್ಧಿವಂತ ಗೆಳೆಯರು ಇಲಿಯ ಬಾಲಕ್ಕೆ ಬಾಂಬ್‌ ಕಟ್ಟಿ ತಾಲ್ಲೂಕು ಕಚೇರಿ, ಮುನ್ಸಿಪಲ್‌ ಕಚೇರಿಗಳಲ್ಲಿ ಹಾಕುತ್ತಿದ್ದರು. ಬೆಂಕಿ ಹೊತ್ತಿಕೊಂಡ ಕೂಡಲೇ ಇಲಿ ಇಡೀ ಕಚೇರಿಗೆ ಓಡಾಡುತ್ತಿತ್ತು. ಬೆಂಕಿಗೆ ಸಿಲುಕಿ ದಾಖಲೆಗಳೆಲ್ಲ ನಾಶವಾಗುತ್ತಿದ್ದವು’ ಎಂದರು.

ಸ್ವಾತಂತ್ರ್ಯ ಹೋರಾಟದ ಹಾದಿ
‘ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಬೇಕು ಎಂಬ ಹಂಬಲ ಚಿಕ್ಕಂದಿನಲ್ಲೇ ಇತ್ತು. ವಿದ್ಯಾಭ್ಯಾಸ ಮುಗಿಸದೆ ಹೋರಾಟದಲ್ಲಿ ಭಾಗಿಯಾಗುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದೆ. ಬಿಎಸ್‌ಸಿ ಮುಗಿಸಿ ಗಾಂಧಿನಗರದ ಶಾಲೆಯೊಂದರಲ್ಲಿ 1942ರ ಜೂನ್‌ನಲ್ಲಿ ಉಪನ್ಯಾಸಕನಾಗಿ ಸೇರಿದೆ. ಈ ವೇಳೆ, ಚಳವಳಿಯಲ್ಲಿ ಭಾಗಿಯಾಗಿ ಜೈಲು ಸೇರಿದೆ. ಬಳಿಕ ಉಪನ್ಯಾಸಕನಾಗಿ ಮುಂದುವರಿಯುವುದು ಸರಿಯಲ್ಲ ಎಂದು ತೀರ್ಮಾನಿಸಿ ಸಾರ್ವಜನಿಕ ಜೀವನದಲ್ಲಿ ಉಳಿದೆ’ ಎಂದು ಅವರು ತಿಳಿಸಿದರು.

1942ರಲ್ಲಿ ಬೆಂಗಳೂರಿನಲ್ಲಿ ಚಳವಳಿ ಆರಂಭವಾದ ರೀತಿಯೇ ಕುತೂಹಲಕಾರಿ. ನಾಯಕರೆಲ್ಲ ಬಂಧನಕ್ಕೆ ಒಳಗಾಗಿದ್ದರು. ಜನರಿಗೆ ದಿಕ್ಕೇ ತೋಚದಂತಾಗಿತ್ತು. ಜನರೆಲ್ಲ ಮೈಸೂರು ಬ್ಯಾಂಕ್‌ ಸರ್ಕಲ್‌ ಹತ್ತಿರ ಜಮಾಯಿಸಿದ್ದರು. ಹೋರಾಟದಲ್ಲಿ ಭಾಗಿಯಾಗಲು ನಾನು ಹೋಗುತ್ತಿದ್ದೆ. ಅವೆನ್ಯೂ ರಸ್ತೆಯ ಪಾದಚಾರಿ ಮಾರ್ಗದ ಬಳಿ 20 ವರ್ಷದ ಹುಡುಗನೊಬ್ಬ ಗಾಂಧಿ ಟೋಪಿ ಹಾಕಿಕೊಂಡು ನಿಂತಿದ್ದ. ಪೊಲೀಸರ ಮೇಲೆ ಕಲ್ಲು ಎಸೆಯಬೇಕು ಎಂಬ ಉದ್ದೇಶದಿಂದ ಕಲ್ಲು ಹಿಡಿದುಕೊಂಡು ನಿಂತಿದ್ದ. 2–3 ಸಲ ಪ್ರಯತ್ನ ಮಾಡಿದರೂ ಯಶಸ್ಸು ಸಿಗಲಿಲ್ಲ. ಬಳಿಕ ತಲೆಯಲ್ಲಿದ್ದ ಗಾಂಧಿ ಟೋಪಿಯನ್ನು ಪಾದಚಾರಿ ಮಾರ್ಗದ ಮೇಲಿಟ್ಟ. ಬಳಿಕ ಕಲ್ಲನ್ನು ತೂರಿದ. ಅದು ಪೊಲೀಸರಿಗೆ ತಾಗಿ ಅಲ್ಲೋಲ ಕಲ್ಲೋಲ ಉಂಟಾಯಿತು. ಪೊಲೀಸರು ಜನರ ಮೇಲೆ ಲಾಠಿ ಪ್ರಹಾರ ನಡೆಸಿದರು. ರೊಚ್ಚಿಗೆದ್ದ ಜನರು ಅವೆನ್ಯೂ ರಸ್ತೆಯ ಅಂಚೆ ಕಚೇರಿಯನ್ನು ಧ್ವಂಸ ಮಾಡಿದರು’ ಎಂದರು.

‘ಚಳವಳಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ಬೆಂಗಳೂರು ಹಾಗೂ ಮೈಸೂರಿನ ವಿದ್ಯಾರ್ಥಿಗಳು ಸಂಘಟನೆ ಮಾಡಿಕೊಂಡು ಊರೂರಿಗೆ ತೆರಳಿ ಶಾಲಾ ಕಾಲೇಜುಗಳನ್ನು ಮುಚ್ಚಿಸಿದರು. ಮೂರು ತಿಂಗಳ ಕಳೆಯುವಾಗ ವಿದ್ಯಾರ್ಥಿ ಮುಖಂಡರೆಲ್ಲ ಬಂಧನಕ್ಕೆ ಒಳಗಾದರು. ಚಳವಳಿ ಸ್ಥಗಿತವಾಗುವ ಹಂತಕ್ಕೆ ಬಂತು. ಆಗ ನಾವು ಚಳವಳಿಗೆ ಪ್ರವೇಶ ಮಾಡಿದೆವು’ ಎಂದು ಹೇಳಿದರು.

‘ನಾವು ಕಾರ್ಮಿಕ ಮುಖಂಡರನ್ನು ಕರೆದು ಚಳವಳಿಗೆ ಬೆಂಬಲ ನೀಡುವಂತೆ ಕೋರಿದೆವು. ನಮ್ಮ ನಾಯಕ ಎನ್‌.ಡಿ.ಶಂಕರ್ ಜೈಲಿನಲ್ಲಿದ್ದು, ಅವರ ಅನುಮತಿ ಇಲ್ಲದೆ ಸಹಕಾರ ನೀಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದರು. ಅದೇ ಹೊತ್ತಿಗೆ, ಜಗತ್ತಿನಲ್ಲಿ ಮತ್ತೊಂದು ಬೆಳವಣಿಗೆ ನಡೆಯಿತು. ರಷ್ಯ ಜರ್ಮನಿಯ ಜತೆಗೆ ಇತ್ತು. ಆದರೆ, ಹಿಟ್ಲರ್‌ ಕಮ್ಯುನಿಸ್ಟ್‌ ರಾಷ್ಟ್ರಗಳ ಮೇಲೆ ದಾಳಿ ಮಾಡಿದ. ಇದರಿಂದ ಎಚ್ಚೆತ್ತ ಅವರು ಇಂಗ್ಲೆಂಡ್‌ ಜತೆಗೆ ಸಂಪರ್ಕ ಸಾಧಿಸಿ ಬೆಂಬಲ ನೀಡುವುದಾಗಿ ತಿಳಿಸಿದರು. ಹೀಗಾಗಿ, ಭಾರತದ ಕಮ್ಯುನಿಸ್ಟ್‌ ನಾಯಕರೆಲ್ಲ ಬಿಡುಗಡೆಯಾದರು. ಈ ಸುದ್ದಿ ತಿಳಿದ ನಾವೆಲ್ಲ ಜೈಲಿನ ಹತ್ತಿರ ಹೋದೆವು. ಎನ್‌.ಡಿ.ಶಂಕರ್ ಅವರನ್ನು ಕರೆಸಿಕೊಂಡು ಗುಪ್ತ ಸಂಭಾಷಣೆ ನಡೆಸಿ ಬೆಂಬಲ ಕೋರಿದೆವು. ಅವರು ಅಸಹಾಯಕತೆ ವ್ಯಕ್ತಪಡಿಸಿದರು. ನೀವು ಸಹಕಾರ ನೀಡದಿದ್ದರೆ ಚಳವಳಿಯೇ ನಾಶವಾಗುತ್ತದೆ ಎಂದು ಹೇಳಿದೆವು. ಎರಡು ದಿನಗಳ ಕಾಲಾವಕಾಶ ಕೇಳಿದರು. ಮರುದಿನವೇ ನಮ್ಮ ಸಂಪರ್ಕ ಸಾಧಿಸಿದರು. ಕಮ್ಯುನಿಸ್ಟ್ ಪಕ್ಷಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಬರುವೆ ಎಂದು ಹೇಳಿದರು. ಬಳಿಕ ಕಾರ್ಮಿಕ ಮುಖಂಡರ ಜತೆಗೆ ಮಾತುಕತೆ ನಡೆಸಿ ಬೆಂಗಳೂರಿನ ಮೂರು ಮಿಲ್‌ಗಳನ್ನು ಮುಚ್ಚಿ ಹೋರಾಟ ಮಾಡಲು ನಿರ್ಧರಿಸಿದೆವು. ಈ ಮೂರು ಮಿಲ್‌ಗಳ ಎಂಟು ಸಾವಿರ ನೌಕರರು 15 ದಿನಗಳ ಕಾಲ ಬೀದಿಗೆ ಇಳಿದರು. ಈ ಹೋರಾಟ ರಾಜ್ಯದಾದ್ಯಂತ ವ್ಯಾಪಿಸಿ 20 ದಿನಗಳ ವರೆಗೆ ಮಿಲ್‌ಗಳು ಮುಚ್ಚಲ್ಪಟ್ಟವು’ ಎಂದರು.

ಟೈಂ ಬಾಂಬ್‌ನಿಂದ ಸ್ಥಾನಬದ್ಧತೆ
ನನ್ನ ಸ್ನೇಹಿತರೊಬ್ಬರು ಟೈಂ ಬಾಂಬ್‌ ತಯಾರಿಸುತ್ತಿದ್ದರು. ಅದನ್ನು ನಾನು ಕಾರ್ಯಕರ್ತರಿಗೆ ಹಂಚುತ್ತಿದ್ದೆ. 1942ರ ಡಿಸೆಂಬರ್‌ನಲ್ಲಿ ತುಮಕೂರಿನ ರಾಮಚಂದ್ರ ಎಂಬ ಕಾರ್ಯಕರ್ತ ಟೈಂಬಾಂಬ್‌ ಬೇಕು ಎಂದ. ಅದನ್ನು ಚೀಲದಲ್ಲಿ ತುಂಬಿ ಕೊಟ್ಟೆ. ಅದನ್ನು ತೆಗೆದುಕೊಂಡು ಹೋಗುವಾಗ ರಾಮಚಂದ್ರ ಸಿಕ್ಕಿ ಬಿದ್ದ. ಅವನನ್ನು ಪೊಲೀಸರು ಹೊಡೆದು ಬಡಿದು ಬೆಂಗಳೂರಿನ ಹಲಸೂರು ಗೇಟ್‌ ಠಾಣೆಯಲ್ಲಿ ಇಟ್ಟರು. ಆತ ನನ್ನ ಹೆಸರನ್ನು ಹೇಳಿದ. ಪೊಲೀಸರು ನನ್ನ ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸಿದರು.

ಅಣ್ಣನನ್ನು ಬಂಧಿಸಲು ಬಂದಿದ್ದಾರೆ ಎಂದು ತಿಳಿದು ನಾನು ಮಲಗಿದೆ. ನನ್ನನ್ನೇ ಎಬ್ಬಿಸಿ ವಿಚಾರ ತಿಳಿಸಿದರು. ಠಾಣೆಗೆ ಒಂದು ಗಂಟೆ ಬಂದು ಹೋಗಿ ಎಂದರು. ಇವರು ಒಂದು ಗಂಟೆಯಲ್ಲಿ ಬಿಡುವ ಜನರಲ್ಲ ಎಂಬುದು ಗೊತ್ತಾಯಿತು. ಜಾಗೃತೆಗೆ ಇರಲಿ ಎಂದು ಕೋಟ್‌ ಹಾಕಿಕೊಂಡು ₹5 ಕಿಸೆಯಲ್ಲಿ ಇಟ್ಟುಕೊಂಡು ಠಾಣೆಗೆ ಹೋದೆ. ಠಾಣೆಯಲ್ಲಿ ನನ್ನನ್ನು ನಿಲ್ಲಿಸಿ ಸುತ್ತ ಪೊಲೀಸರು ಲಾಠಿ ಹಿಡಿದುಕೊಂಡು ಜಮಾಯಿಸಿದರು. ಇವತ್ತು ಹೊಡೆದು ಸಾಯಿಸುತ್ತಾರೆ ಎಂಬ ಭಯ ಮೂಡಿತು. ಕೆಲವೇ ಕ್ಷಣದಲ್ಲಿ ಧೈರ್ಯ ಮಾಡಿಕೊಂಡೆ. ನಾನು ಆ ದಿನ ಬೆಂಗಳೂರಿನಲ್ಲೇ ಇರಲಿಲ್ಲ. ಶಿವಮೊಗ್ಗದ ಆಫಿಸರ್‌ ಮನೆಯಲ್ಲಿದ್ದೆ. ಬೇಕಿದ್ದರೆ ಸಾಕ್ಷಿ ಕರೆದುಕೊಂಡು ಬರುವೆ ಎಂದು ಧೈರ್ಯದಿಂದ ಹೇಳಿದೆ. ದೇವರ ದಯದಿಂದ ಪೊಲೀಸರು ಹೊಡೆಯಲಿಲ್ಲ. ನನ್ನ ಮಾತನ್ನು ನಂಬಿದಂತೆ ಕಾಣಿಸಿತು. ನಮ್ಮ ಆಫೀಸರ್‌ ಬರುವವರೆಗೆ ಇಲ್ಲೇ ಮಲಗಿ ಎಂದರು. ಮರುದಿನ ಬೆಳಿಗ್ಗೆ 8ಕ್ಕೆ ನಮ್ಮ ಮೂವರನ್ನು (ನಾನು, ರಾಮಚಂದ್ರ ಹಾಗೂ ಮತ್ತೊಬ್ಬ) ಐಜಿಪಿ ಕಚೇರಿಗೆ ಕರೆದುಕೊಂಡು ಹೋದರು. ಆ ಅಧಿಕಾರಿ 10 ಗಂಟೆಗೆ ಬರುತ್ತಾರೆ ಎಂದು ಗೊತ್ತಾಯಿತು.

ಪಕ್ಕದಲ್ಲಿದ್ದ ಅಧಿಕಾರಿಗೆ ‘ಉಪವಾಸ ಯಾಕೆ ಇರುತ್ತೀರಿ. ಕಾಫಿ ಕುಡಿದು ಬನ್ನಿ’ ಎಂದು ಹೇಳಿ ₹5 ಕೊಟ್ಟೆ. ಅವರು ಹೋದ ಬಳಿಕ ರಾಮಚಂದ್ರ ಅವರಿಗೆ ಗದರಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಉಳಿದವರ ಬಗ್ಗೆ ಮಾಹಿತಿ ನೀಡುತ್ತಾ ಬಂದರೆ ಹೋರಾಟಕ್ಕೆ ಯಶಸ್ಸು ಸಿಗುವುದು ಹೇಗೆ ಎಂದು ಪ್ರಶ್ನಿಸಿದೆ. ನನ್ನ ಮಾತು ರಾಮಚಂದ್ರ ಅವರಿಗೆ ಮನವರಿಕೆ ಆಯಿತು. ಬಾಂಬ್‌ ತಯಾರಿಸಿದ್ದು ನಾನೇ ಎಂದು ಪೊಲೀಸರಲ್ಲಿ ಒಪ್ಪಿಕೊಂಡರು. ಬೆಂಗಳೂರಿನ ಮಾವಳ್ಳಿಯಲ್ಲಿರುವ ಅವರ ಹಿತ್ತಲಿನಲ್ಲಿ ಪೊಲೀಸರು ಹುಡುಕಾಡಿದರು. ಏನೂ ಸಿಗಲಿಲ್ಲ. ಬಳಿಕ ತುಮಕೂರಿಗೆ ಕರೆದುಕೊಂಡು ಹೋದರು. ನನ್ನನ್ನು ಬಿಟ್ಟು ಬಿಡುತ್ತಾರೆ ಎಂದು ಭಾವಿಸಿದ್ದೆ. ನನ್ನನ್ನು ಜೈಲಿನಲ್ಲಿ ಸ್ಥಾನಬದ್ಧತೆಯಲ್ಲಿ (ವಿಚಾರಣೆ ಇಲ್ಲದೆ ವಶಕ್ಕೆ ಪಡೆಯುವುದು) ಇರಿಸಿದರು. 1943ರ ಡಿಸೆಂಬರ್‌ ವರೆಗೆ ಜೈಲಿನಲ್ಲಿ ಇದ್ದೆ.

‘ಸಾವರ್ಕರ್ ಹೇಡಿಯಾಗಿದ್ದು ಏಕೆ’
ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಸಾವರ್ಕರ್‌ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ. ಅವರು ಧೀರ, ಶೂರ. ಇಂಗ್ಲೆಂಡಿಗೆ ಹೋಗಿ ಜನರನ್ನು ಸಂಘಟಿಸಿ 20 ಬಂದೂಕುಗಳನ್ನು ಸಂಗ್ರಹಿಸಿ ಭಾರತದಲ್ಲಿರುವ ತಮ್ಮನಿಗೆ ಕಳುಹಿಸಿದರು. ಜನರಿಗೆ ಬಂದೂಕನ್ನು ಹಂಚುವಾಗ ತಮ್ಮನನ್ನು ಪೊಲೀಸರು ಬಂಧಿಸುತ್ತಾರೆ. ಬಳಿಕ ಸಾವರ್ಕರ್‌ನನ್ನು ಸಹ ಬಂಧಿಸಿ ಭಾರತಕ್ಕೆ ಕರೆದುಕೊಂಡು ಬರುತ್ತಾರೆ. ಈ ವೇಳೆ ಸಮುದ್ರದಲ್ಲಿ ಜಿಗಿದು ಪರಾರಿಯಾಗಲು ಯತ್ನಿಸುತ್ತಾರೆ. ಪೊಲೀಸರು ಬೆನ್ನಟ್ಟಿ ಬಂಧಿಸುತ್ತಾರೆ. ಸಾವರ್ಕರ್‌ಗೆ ಕರಿನೀರಿನ ಶಿಕ್ಷೆ ವಿಧಿಸಿದರು. ಮೂರು ವರ್ಷಗಳ ಕಾಲ ಅದನ್ನು ಅನುಭವಿಸುತ್ತಾರೆ. ಇಷ್ಟು ಸಮಯ ಕಳೆದ ಮೇಲೆ ಸಾವರ್ಕರ್‌ಗೆ ಭಯ ಮೂಡುತ್ತದೆ. ‘ನಾನು ತಪ್ಪು ಮಾಡಿದ್ದು, ಇನ್ನು ಮುಂದೆ ನಿಮ್ಮ ಜತೆಗೆ ಇರುತ್ತೇನೆ. ಬಿಡುಗಡೆ ಮಾಡಿ’ ಎಂದು ಬ್ರಿಟಿಷರಲ್ಲಿ ಕೋರುತ್ತಾರೆ. ಶೂರ ಧೀರ ಎನಿಸಿಕೊಂಡ ಸಾವರ್ಕರ್‌ ಹೇಡಿಯಾಗಿದ್ದು ಏಕೆ ಎಂಬುದು ಚಿದಂಬರ ರಹಸ್ಯ. ಇದರ ಬಗ್ಗೆ ಸಂಶೋಧನೆ ನಡೆಯಬೇಕು ಎಂಬುದು ನನ್ನ ಆಶಯ. ಶೂರ ಹೇಡಿ ಆಗಿದ್ದು ಏಕೆ ಎಂಬುದನ್ನು ಈಗಲೂ ಪ್ರಶ್ನೆ ಮಾಡುತ್ತೇನೆ.

ಹೋರಾಟವೇ ಜೀವನ
‘ಸಾರ್ವಜನಿಕ ಜೀವನದಲ್ಲಿ ಬೇರೆಯವರ ಹಂಗಿಗೆ, ಮುಲಾಜಿಗೆ ಒಳಗಾಗಬಾರದು. ಸ್ವತಂತ್ರವಾಗಿ ಬದುಕುವ, ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಬೇಕು. ಈ ರೀತಿ ಇದ್ದರೆ ಸಾಮಾಜಿಕ ಕಾರ್ಯಕರ್ತರಿಗೆ ಗೌರವ ಇರುತ್ತದೆ. ಗಾಂಧೀಜಿ ಅವರ ಕೃತಿಯಲ್ಲಿರುವ ಒಂದು ಮಾತು ನನ್ನ ಬದುಕು ಬದಲಿಸಿತು. ಹೋರಾಟದಿಂದ ಬದುಕು ತುಂಬುವುದಿಲ್ಲ ಅಲ್ಲವೇ. ಅದಕ್ಕಾಗಿ ‘ಸಾಹಿತ್ಯ ಮಂದಿರ’ ಪ್ರಕಾಶನಾಲಯ ಆರಂಭಿಸಿದೆ. ವರ್ಷದಲ್ಲಿ ಎರಡು ಪುಸ್ತಕಗಳನ್ನು ಪ್ರಿಂಟ್‌ ಮಾಡುತ್ತಿದ್ದೆ. ಅವುಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಮಾತನಾಡುತ್ತಿದ್ದೆ. ಅಲ್ಲಿ ಮಾರುತ್ತಿದ್ದೆ. ಅದರಿಂದ ತಿಂಗಳಿಗೆ ₹30 ಬಂದಾಗ ಸೊಪ್ಪು ಅನ್ನ ತಿಂದು ಬದುಕಿದ್ದೇವೆ. ತಿಂಗಳಿಗೆ ₹300 ಆದಾಯ ಬಂದಾಗ ಮೀನೂಟ ಮಾಡಿದ್ದೇವೆ. ಈ ಪ್ರಕಾಶನಾಲಯ 50 ವರ್ಷ ನನ್ನನ್ನು ಸಾಕಿದೆ. ಯಾರ ಹಂಗು ಇಲ್ಲದೆ ಜೀವನ ನಡೆಸಿದ್ದೇನೆ. ಹೋರಾಟವೇ ನನ್ನ ಬದುಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT