ಮಂಗಳವಾರ, ಜನವರಿ 19, 2021
18 °C
ಮನುಸ್ಮೃತಿ, ಪುರಾಣ ಮನೆಯಲ್ಲಿ ಓದಿ , ಪಠ್ಯದಲ್ಲಿ ಬೇಡ– ಮಲ್ಲಿಕಾರ್ಜುನ ಖರ್ಗೆ

‘ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕ ಹುದ್ದೆ ಭರ್ತಿ ಮಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಇದು ಹಿಂದುಳಿದ ಭಾಗವಾಗಿರುವುದರಿಂದ ಆರ್ಥಿಕ ಇಲಾಖೆಯ ನಿರ್ಬಂಧಗಳನ್ನು ಸಡಿಲಿಸಿ, ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಸದಾಶಿವನಗರದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಎಂಬುದನ್ನು ಬದಲಿಸಿ, ಕಲ್ಯಾಣ ಕರ್ನಾಟಕ ಎಂದು ಬದಲಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.

‘ಶಿಕ್ಷಣ ಹಿಮ್ಮುಖವಾಗಿರಬಾರದು. ಮನುಸ್ಮೃತಿ, ಪುರಾಣ, ಧಾರ್ಮಿಕ ವಿಚಾರಗಳನ್ನು ಮನೆಯಲ್ಲಿ ಓದಿಕೊಳ್ಳಿ. ಪಠ್ಯದಲ್ಲಿ ಅವುಗಳನ್ನು ತಂದರೆ ಘರ್ಷಣೆಗಳು ಆಗಬಹುದು. ಅಂತಹ ವಿಚಾರಗಳನ್ನು ಕೈ ಬಿಟ್ಟು ಆಧುನಿಕ ಶಿಕ್ಷಣ ನೀಡಬೇಕು’ ಎಂದರು.

‘ಇತ್ತೀಚೆಗೆ ಅನುಭವ ಮಂಟಪ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಇದಕ್ಕೆ ಪೂರಕವಾಗಿರಬೇಕು. ಶಿಕ್ಷಣವು ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾರಬೇಕು. ಕೆಲವು ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗುವಂತೆ ಮಾಡಬಾರದು’ ಎಂದು ಸಲಹೆ ನೀಡಿದರು.

ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ‘ಹಾಲಿ ಇರುವ ಶಿಕ್ಷಣ ನೀತಿ ಮಕ್ಕಳ ಕೇಂದ್ರಿತವಾಗಿಲ್ಲ. ನೂತನ ನೀತಿಯು 3ನೇ ವರ್ಷದಿಂದಲೇ ಮಕ್ಕಳಿಗೆ ಶಿಕ್ಷಣ ಒದಗಿಸಲಿದೆ. 3 ವರ್ಷದಿಂದ 6 ವರ್ಷದ ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ಶೇ 85ರಷ್ಟು ಕಲಿಕೆ ಇದೇ ಅವಧಿಯಲ್ಲಿ ಆಗುತ್ತದೆ’ ಎಂದರು.

‘ಬೆಂಗಳೂರು ಕೇಂದ್ರಿತ ಐಟಿ–ಬಿಟಿ ವಲಯವನ್ನು ರಾಜ್ಯದ ಇತರೆ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಈ ವಲಯದಲ್ಲಿ ರಾಜ್ಯದ ಒಟ್ಟಾರೆ ವಹಿವಾಟು 250 ಬಿಲಿಯನ್ ಡಾಲರ್ ಇದೆ. ಮುಂದಿನ ಐದು ವರ್ಷಗಳಲ್ಲಿ 300 ಬಿಲಿಯನ್ ಡಾಲರ್‌ಗೆ (₹21.90 ಲಕ್ಷ ಕೋಟಿ) ಏರಿಸಲು ಉದ್ದೇಶಿಸಲಾಗಿದೆ’ ಎಂದರು.

ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಸಿ. ಬಿಲಗುಂದಿ, ‘ಈ ಶಾಲೆಯ ಮೂಲಕ ರಾಜ್ಯದಲ್ಲಿ ಸಂಸ್ಥೆಯು 52 ಶಾಲೆಗಳನ್ನು ಹೊಂದಿದಂತಾಗಿದೆ. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಶಾಲೆಗಳ ನಿರ್ಮಾಣ ಮತ್ತು ವಿಸ್ತರಣೆಗೆ ಯೋಜನೆ ರೂಪಿಸಲಾಗುವುದು’ ಎಂದರು.  ಮಾಡಲು ಪ್ರಯತ್ನಿಸುತ್ತೇನೆ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಡಾ.ಶಿವಾನಂದ ಎಸ್.ದೇವರಮನಿ, ಕಾರ್ಯದರ್ಶಿ ನಿತಿನ್‌ ಬಿ. ಜವಳಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.