ಗುರುವಾರ , ಆಗಸ್ಟ್ 11, 2022
23 °C
6 ವರ್ಷಗಳಲ್ಲಿ 60 ಖಾಸಗಿ ಕಂಪನಿಗಳಿಗೆ ಲೈಸೆನ್ಸ್‌

ಎಂಎನ್‌ಸಿಗಳು ರೈತರ ಬಾಗಿಲಿಗೆ ಬಂದರೆ ಹೆಮ್ಮೆ ಅಲ್ಲವೇ: ಆರಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬಹುರಾಷ್ಟ್ರೀಯ ಕಂಪನಿಗಳು ರೈತನ ಮನೆ ಬಾಗಿಲಿಗೆ ಕೃಷಿ ಉತ್ಪನ್ನ ಖರೀದಿಸಲು ಬರುತ್ತವೆ ಎಂದರೆ ಹೆಮ್ಮೆ ಪಡಬೇಕು. ಅದರಲ್ಲಿ ಭಯಪಡುವಂತಹದ್ದು ಏನಿದೆ’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಪ್ರಶ್ನಿಸಿದರು.

ವಿಧಾನಪರಿಷತ್ತಿನಲ್ಲಿ ಕೆಲವು ತಿದ್ದುಪಡಿಗಳೊಂದಿಗೆ ಬಂದ ಎಪಿಎಂಸಿ ಮಸೂದೆಯ ಕುರಿತು ಅವರು ಮಾತನಾಡಿದರು.

ಇದು ರೈತರ ಪರವಾದ ಕಾಯ್ದೆ. ಕೆಲವರು ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ನಿಜವಾಗಿ ತೊಂದರೆ ಆಗುವುದು ದಲ್ಲಾಳಿಗಳಿಗೇ ಹೊರತು ರೈತರಿಗಲ್ಲ ಎಂದು ಹೇಳಿದರು.

ಅಡಿಕೆ ಬೆಳೆಗಾರರು ಎಪಿಎಂಸಿಗೆ ಅಡಿಕೆ ಒಯ್ದಾಗ ಸೆಸ್‌ ಮತ್ತು ದಲ್ಲಾಳಿ ಕಮಿಷನ್‌ ಸೇರಿ ಒಂದು ಲೋಡ್‌ಗೆ ₹1 ಲಕ್ಷ ದಷ್ಟು ಪಾವತಿಸಬೇಕಾಗುತ್ತಿತ್ತು. ಹೊಸ ಕಾಯ್ದೆಯಿಂದ ಅಷ್ಟು ಮೊತ್ತ ರೈತರಿಗೆ ಉಳಿತಾಯವಾಗುತ್ತದೆ. ಎಪಿಎಂಸಿಯೊಳಗೆ ತೂಕ ಮತ್ತು ಧಾರಣೆಯಲ್ಲೂ ವಂಚನೆ ಆಗುತ್ತಿದೆ ಎಂದು ಅವರು ಹೇಳಿದರು.

6 ವರ್ಷಗಳಲ್ಲಿ 60 ಕಂಪನಿಗಳಿಗೆ ಮಣೆ:

‘ಕಳೆದ ಆರು ವರ್ಷಗಳಲ್ಲಿ ಕೃಷಿ ಉತ್ಪನ್ನಗಳ ಖರೀದಿ ಮಾಡುವ 60 ಖಾಸಗಿ ಕಂಪನಿಗಳಿಗೆ ರಾಜ್ಯ ಸರ್ಕಾರ ಪರವಾನಗಿ ನೀಡಿದೆ. ಒಂದು ಕಡೆ ಅಧಿಕಾರದಲ್ಲಿದ್ದಾಗ ಖಾಸಗಿಯವರಿಗೆ ಲೈಸೆನ್ಸ್‌ ನೀಡುವ ಕಾಂಗ್ರೆಸ್‌, ಈಗ ವಿರೋಧಿಸುತ್ತಿದೆ. ಈ ಎಡಬಿಡಂಗಿತನ ಏತಕ್ಕೆ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಪ್ರಶ್ನಿಸಿದರು.

ಬಿಎಸ್‌ಪಿಯ ಮಹೇಶ್‌ ಮಾತನಾಡಿ, ಎಪಿಎಂಸಿ ಹೊರಗೆ ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಿರುವುದರಿಂದ ಬಹುರಾಷ್ಟ್ರೀಯ ಕಂಪನಿಗಳು ಏಕಸ್ವಾಮ್ಯ ಮಾಡಿಕೊಳ್ಳುತ್ತವೆ ಎಂಬ ಭಯ ರೈತರಿಗಿದೆ. ಆದ್ದರಿಂದ ಸ್ವಾಮಿನಾಥನ್‌ ವರದಿ ಪ್ರಕಾರ ಕನಿಷ್ಠ ಬೆಂಬಲ ಬೆಲೆ, ಉತ್ಪಾದನಾ ವೆಚ್ಚವನ್ನು ನಿಗದಿ ಮಾಡಬೇಕು ಎಂದು ಸಲಹೆ ನೀಡಿದರು.

ಬಿಜೆಪಿಯ ಸಿದ್ದು ಸವದಿ ಮಾತನಾಡಿ, ‘ದೊಡ್ಡ ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳು ತಪ್ಪು ಅಭಿಪ್ರಾಯ ಮೂಡಿಸಿ ಹೋರಾಟ ಹುಟ್ಟು ಹಾಕಿದ್ದಾರೆ.  ನಾವು ಬೆಳೆಯುವ ಗೋಧಿ, ಗೋವಿನ ಜೋಳ, ಹೆಸರು ಇತ್ಯಾದಿಗಳಿಗೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ಕದ್ದು ಮುಚ್ಚಿ ರಾತ್ರಿ ವೇಳೆ ಸಾಗಿಸುತ್ತೇವೆ. ಇದನ್ನು ತಡೆಯಲು ಎಪಿಎಂಸಿಯವರು ಕಾದು ನಿಂತಿರುತ್ತಾರೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.