ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ | ಜನ ಎಚ್ಚರಿಕೆ ವಹಿಸದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ: ಡಾ. ಸುಧಾಕರ್

Last Updated 21 ಮಾರ್ಚ್ 2021, 11:47 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಸೋಂಕಿತರ ಸಂಖ್ಯೆ ಪುನಃ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಸರ್ಕಾರದ ಮಾರ್ಗ ಸೂಚಿಯ ಪ್ರಕಾರ ನಡೆದುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಎಚ್ಚರಿಸಿದ್ದಾರೆ.

ಪರಿಸ್ಥಿತಿಯ ಗಂಭೀರವಾಗುತ್ತಿರುವುದರಿಂದ ವಿರೋಧ ಪಕ್ಷಗಳ ನಾಯಕರ ಸಭೆಯನ್ನು ಕರೆದು ಸಲಹೆ ಪಡೆಯುವುದು ಅಗತ್ಯ. ಈ ಸಂಬಂಧ ಮುಖ್ಯಮಂತ್ರಿಯವರಿಗೂ ಮನವಿ ಮಾಡುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರಿನಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಪುನಃ ಸಾವಿರ ದಾಟಿದೆ. ಶನಿವಾರ ಒಂದೇ ದಿನ ಏಳು ಜನ ಮೃತಪಟ್ಟಿದ್ದಾರೆ. ಪ್ರಕರಣ ಹೆಚ್ಚಾಗುತ್ತಿರುವುದನ್ನು ಒಪ್ಪಿಕೊಳ್ಳಲೇಬೇಕು. ಸರ್ಕಾರ ಲಸಿಕೆ ನೀಡುತ್ತಿದೆ. ಆದರೆ, ಸಾರ್ವಜನಿಕರೂ ಕೂಡಾ ಜವಾಬ್ದಾರಿಯಿಂದ ವರ್ತಿಸಬೇಕು. ನೀವು ಸುರಕ್ಷಿತವಾಗಿದ್ದರೆ, ನಿಮ್ಮ ಮನೆ ಮಂದಿಯೂ ಸುರಕ್ಷಿತವಾಗಿರುತ್ತಾರೆ. ಸೋಂಕು ಹೆಚ್ಚುತ್ತಾ ಹೋದರೆ ಸರ್ಕಾರವೂ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಯುವ ಜನತೆ ಅನಗತ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಹೆಚ್ಚು ಜನ ಸೇರುವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ ಕೊರೋನಾ ವರೈಸ್‌ಗೆ ಪಾರ್ಟಿ, ಜಾತ್ರೆ ಎಂಬ ವ್ಯತ್ಯಾಸವಿಲ್ಲ. ಎಲ್ಲ ಕಡೆಯೂ ಹರಡುತ್ತದೆ. ನಾವು ಎಚ್ಚರಿಕೆಯಿಂದ ಇರಬೇಕು. ಎಲ್ಲಿಗೆ ಹೋಗಬೇಕು ಎಲ್ಲಿಗೆ ಹೋಗಬಾರದು ಎಂಬ ವಿವೇಚನೆ ಇರಬೇಕು ಎಂದರು.

ವಿರೋಧ ಪಕ್ಷಗಳ ನಾಯಕರ ಸಭೆಯನ್ನು ಕರೆದು ಸಲಹೆಗಳನ್ನು ಕೇಳುವುದು ಸೂಕ್ತ. ಒಂದು ವೇಳೆ ಕೋವಿಡ್ ಸಂಖ್ಯೆ ಹೆಚ್ಚಾದರೆ, ಸರ್ಕಾರ ವಿಫಲವಾಗಿದೆ ಎಂದು ಟೀಕೆ ಮಾಡುತ್ತಾರೆ. ಆದ್ದರಿಂದ ಅವರಿಂದಲೂ ಸಲಹೆ ಕೇಳುವುದು ಸೂಕ್ತ. ಬಡವರು, ಕೂಲಿ ಕಾರ್ಮಿಕರು ಮತ್ತು ಜನ ಸಾಮಾನ್ಯರನ್ನು ರಕ್ಷಿಸುವ ಕೆಲಸ ಆಗಬೇಕು ಎಂದು ಸುಧಾಕರ್‌ ತಿಳಿಸಿದರು.

ಸೋಂಕು ಒಂದು ಬಾರಿ ಏರಿಕೆಯಾದರೆ 45 ರಿಂದ 90 ದಿನಗಳವರೆಗೆ ಏರುತ್ತಲೇ ಹೋಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಇರಬೇಕು. ಗಡಿ ಭಾಗದಿಂದ ಬರುವವರು ನೆಗೆಟಿವ್‌ ಪ್ರಮಾಣಪತ್ರ ತರಬೇಕು. ಆಗ ಮಾತ್ರ ಅನುಮತಿ ನೀಡಲಾಗುವುದು ಎಂದು ಅವರು ಹೇಳಿದರು.

ಶಾಲಾ ಕಾಲೇಜುಗಳ ತರಗತಿಗಳು ಆರಂಭವಾಗಿದೆ. ಇದು ಸೂಕ್ಷ್ಮವಾದ ವಿಚಾರ. ಮಕ್ಕಳ ಆರೋಗ್ಯದ ಕಾಳಜಿಯೂ ಮುಖ್ಯವಾದುದು. ಮುಂದೇನು ಮಾಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿಯವರ ಜತೆ ಚರ್ಚಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT