ಬೆಂಗಳೂರು: ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ 1.32 ಲಕ್ಷ ಟನ್‌ಗೂ ಹೆಚ್ಚಿನ ಕಬ್ಬಿಣದ ಅದಿರನ್ನು ಅಕ್ರಮವಾಗಿ ತೆಗೆದು, ಸಾಗಿಸಿದ ಆರೋಪ ಎದುರಿಸುತ್ತಿರುವ ರಾಜಮಹಲ್ ಸಿಲ್ಕ್ಸ್ ಕಂಪನಿಯ ಪಾಲುದಾರ ಅಸ್ಲಾಂ ಪಾಷಾ ಎಂಬುವವರಿಗೆ ಸೇರಿದ ₹ 1.10 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಬೇಲೆಕೇರಿ ಬಂದರಿನಲ್ಲಿ ಲೋಕಾಯುಕ್ತ ತನಿಖಾ ತಂಡ ವಶಪಡಿಸಿಕೊಂಡಿದ್ದ ಕಬ್ಬಿಣದ ಅದಿರನ್ನು ಕಳ್ಳಸಾಗಣೆ ಮಾಡಿದ್ದ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಿತ್ತು. 2009–10ರ ಅವಧಿಯಲ್ಲಿ ರಾಜಮಹಲ್ ಸಿಲ್ಕ್ಸ್ ಕಂಪನಿಯು ಅಕ್ರಮ ಗಣಿಗಾರಿಕೆ ಮೂಲಕ ತೆಗೆದ ಅದಿರನ್ನು ಕಳ್ಳಸಾಗಣೆ ಮಾಡಿ, ರಫ್ತು ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಸಿಬಿಐ ಅಧಿಕಾರಿಗಳು ಅಂಕೋಲಾ ಜೆಎಂಎಫ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಸಿಬಿಐ ತನಿಖಾ ವರದಿ ಆಧರಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದರು. ರಾಜಧನ ಪಾವತಿಸದೇ ರಾಜ್ಯ ಸರ್ಕಾರಕ್ಕೆ ವಂಚಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಕಾರಣಕ್ಕಾಗಿ ಅಸ್ಲಾಂ ಪಾಶ ಅವರಿಗೆ ಸೇರಿದ ₹ 1.10 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.