ಮಂಗಳವಾರ, ಜೂನ್ 28, 2022
20 °C

ಬೇಗ್ ಆಸ್ತಿ ಮುಟ್ಟುಗೋಲಿಗೆ ಹಿಂದೇಟು: ಹೈಕೋರ್ಟ್ ಆಶ್ಚರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐ ಮಾನಿಟರಿ ಅಡ್ವೈಸರಿ (ಐಎಂಎ)

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ವಿಷಯದಲ್ಲಿ ಪ್ರತಿಕ್ರಿಯೆ ಸಲ್ಲಿಸಲು ರಾಜ್ಯ ಸರ್ಕಾರ ಸಮಯಾವಕಾಶ ಕೋರಿದೆ. ನಿರ್ಧಾರ ಕೈಗೊಳ್ಳಲು ಸರ್ಕಾರದ ಹಿಂಜರಿಕೆ ಬಗ್ಗೆ ಹೈಕೋರ್ಟ್‌ ಆಶ್ಚರ್ಯ ವ್ಯಕ್ತಪಡಿಸಿದೆ.

‘ಹಗರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಅಂತಿಮ ವರದಿ ಆಧರಿಸಿ ಈ ವಿಷಯದಲ್ಲಿ ಮುಂದುವರಿಯಲಾಗುವುದು’ ಎಂದು ಸರ್ಕಾರ ಈ ಹಿಂದೆ ತಿಳಿಸಿತ್ತು.

‘ಸರ್ಕಾರ ತನ್ನ ನಿಲುವು ಮರು ಪರಿಶೀಲಿಸಿ ಐಎಂಎ ನಿರ್ದೇಶಕರ ಆಸ್ತಿ ಮತ್ತು ಠೇವಣಿದಾರರ ಹಣದಿಂದ ಸಂಪಾದಿಸಿರುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ಕೆಪಿಐಡಿ) ಕಾಯ್ದೆಯ ಸೆಕ್ಷನ್‌ 3ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಾಲಯ ನಿರ್ದೇಶನ ನೀಡಿತ್ತು. 

‘ನಮ್ಮ ಅಧಿಕಾರಿಗಳಿಗೆ ಇಂತಹ ವಿಷಯಗಳಲ್ಲಿ ಪರಿಣಿತಿ ಇಲ್ಲ. ವಿಶೇಷವಾಗಿ ಆಸ್ತಿಗಳು ಕಂಪನಿಯ ಆಡಳಿತದೊಂದಿಗೆ ಸಂಬಂಧವಿಲ್ಲದ ಜನರದ್ದಾಗಿದೆ’ ಎಂದು ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.

‘ಸರ್ಕಾರ ತನ್ನ ನಿರ್ಧಾರ ಮರುಪರಿಶೀಲನೆ ನಡೆಸಬೇಕು ಎಂದು ಏ.17ರಂದೇ ಆದೇಶ ನೀಡಲಾಗಿದೆ. ಸುಮಾರು ಎರಡು ತಿಂಗಳಾದರೂ ಸರ್ಕಾರ ಸುಮ್ಮನಿದೆ. ಸರ್ಕಾರ ನಿರ್ಧಾರ ಕೈಗೊಳ್ಳುವ ಹೊತ್ತಿಗೆ ಆಸ್ತಿ ಬೇರೆಯವರಿಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ. ಸಿಬಿಐ ಅಂತಿಮ ವರದಿಗಾಗಿ ಕಾಯುವಷ್ಟು ಅಸಹಾಯಕ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಹೇಳಿತು.

ಏತನ್ಮಧ್ಯೆ, ಐಎಂಎಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳ ತನಿಖೆ ಪೂರ್ಣಗೊಂಡಿದೆ ಎಂದು ಸಿಬಿಐ ಅಧಿಕಾರಿಗಳು ವಿವರಣೆ ನೀಡಿದರು. ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಶೀಘ್ರವೇ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು