ಮಂಗಳವಾರ, ಸೆಪ್ಟೆಂಬರ್ 28, 2021
22 °C

ಇಂದಿರಾ ಕ್ಯಾಟೀನ್ ಕುರಿತ ಟ್ವೀಟ್: ಸಿ.ಟಿ. ರವಿ ರಾಜ್ಯದ್ರೋಹಿ ಎಂದ ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ರಾಜ್ಯದ್ರೋಹಿ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷವು, ‘ರಾಜ್ಯದ್ರೋಹಿ ಸಿ.ಟಿ.ರವಿ ಅವರೇ, ಕಳೆದ 2 ವರ್ಷಗಳಲ್ಲಿ ನಿಮ್ಮ ಸರ್ಕಾರ ಜಾರಿಗೊಳಿಸಿರುವ ಒಂದೇ ಒಂದು ಜನಪರ ಯೋಜನೆಯ ಹೆಸರು ಹೇಳಿ. ಇಂದಿರಾ ಕ್ಯಾಂಟೀನ್‌ಗೆ ಅನುದಾನ ಕೊಡಲಾಗದ, ಒಂದೂ ಜನಪರ ಯೋಜನೆ ಜಾರಿಗೊಳಿಸಲಾಗದ ಸಿಟಿ ರವಿಯ ಈ ಮಾತು ಕೈಲಾಗದವನು ಮೈ ಪರಚಿಕೊಂಡಂತೆ! ಅಂದಹಾಗೆ, ದೀನದಯಾಳ್ ಯಾವ ದೊಣ್ಣೆನಾಯಕನೆಂದು ಮೇಲ್ಸೇತುವೆಗೆ ಹೆಸರಿಟ್ಟಿದ್ದೀರಿ’ ಎಂದು ಪ್ರಶ್ನಿಸಿದೆ.

ಓದಿ: 

‘ಇಂದಿರಾ ಗಾಂಧಿಯವರ ಮೇಲಿನ ದ್ವೇಷಕ್ಕೆ ಅಪಘಾತ ಮಾಡಿ ಇಬ್ಬರು ಅಮಾಯಕರನ್ನು ಕೊಂದ ‘ಚೆಂಡು ಹೂ’ ರವಿಗೆ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕಂತೆ! ಅದೇ ದ್ವೇಷದಲ್ಲಿ ಇಂದಿರಾ ಗಾಂಧಿಯವರ ಮಹತ್ತರವಾದ ಉಳುವವನೇ ಹೊಲದೊಡೆಯ ಕಾರ್ಯಕ್ರಮವನ್ನು ರದ್ದುಗೊಳಿಸುವಿರಾ? ಬಾಂಗ್ಲಾದೇಶವನ್ನು ಪಾಕ್‌ನೊಂದಿಗೆ ಸೇರಿಸುವಿರಾ?’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

‘ಇಂದಿರಾ ಗಾಂಧಿ ಕರುಣಿಸಿದ ಅನ್ನ ತಿಂದು ಬೆಳೆದು ಅವರ ವಿರುದ್ಧವೇ ದ್ವೇಷ ಕಾರುತ್ತಿರುವ ಸಿ.ಟಿ.ರವಿ ಮನೆಗೆ ಮಗನಲ್ಲ, ನಾಡಿಗೆ ಪ್ರಜೆಯಲ್ಲ! ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕಾರ್ಯಕ್ರಮದ ಫಲವಾಗಿ ಲಕ್ಷಾಂತರ ಕುಟುಂಬಗಳು ಬೆಳಕು ಕಂಡು ಹಸಿವು ನೀಗಿಸಿಕೊಂಡಿದ್ದನ್ನು ಮರೆತಿರುವ ರವಿ ಅವರು ತಾಯಿಗೂ, ತಾಯ್ನಾಡಿಗೂ ದ್ರೋಹ ಬಗೆಯುವ ಮನುಷ್ಯ’ ಎಂದು ಕಾಂಗ್ರೆಸ್ ಟೀಕಿಸಿದೆ.

ಓದಿ: 

‘ಈಗಿನ ಹಲವು ಬಿಜೆಪಿ ನಾಯಕರು ಇಂದಿರಾ ಗಾಂಧಿಯವರ ಗರೀಬಿ ಹಠಾವೋ ಕಾರ್ಯಕ್ರಮದ ಫಲಾನುಭವಿಗಳೇ. ಸಿ.ಟಿ.ರವಿ ಕೂಡ ಅದರಲ್ಲೊಬ್ಬರು. ಇಂದಿರಾ ಗಾಂಧಿಯವರ ಗರೀಬಿ ಹಠಾವೋ ಕಾರ್ಯಕ್ರಮ ಇಲ್ಲದೇ ಇದ್ದಿದ್ದರೆ ಸಿ.ಟಿ. ರವಿ ಇಂದು ಹರಿದ ಚಡ್ಡಿ ಹಾಕಿಕೊಂಡು ಯಾರದ್ದೋ ಮನೆಯ ಕೊಟ್ಟಿಗೆಯಲ್ಲಿ ಸೆಗಣಿ ಬಾಚುತ್ತಿದ್ದರು’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

‘ರಾಜ್ಯದಾದ್ಯಂತ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಮಾಡಿ, ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಘೋಷಣೆ ಮಾಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ವಿನಂತಿಸಿ ರವಿ ಟ್ವೀಟ್ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು