ಮಂಗಳವಾರ, ಆಗಸ್ಟ್ 16, 2022
30 °C
ಜಾಲದಲ್ಲಿ ‘ದೊಡ್ಡವರ ಮಕ್ಕಳು’: ಸರ್ಕಾರಿ ವೆಬ್‌ಸೈಟ್‌ ಹ್ಯಾಕ್ ಮಾಡಿದ್ದ ಆರೋಪಿ

ಎರಡೇ ಜಾಲತಾಣ ಹ್ಯಾಕ್‌ನಿಂದ ₹ 19 ಕೋಟಿ !

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್‌ ಜಾಲ ಪ್ರಕರಣದಲ್ಲಿ ಸೆರೆಸಿಕ್ಕಿರುವ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (25), ಕೇವಲ ಎರಡೇ ಜಾಲತಾಣಗಳನ್ನು ಹ್ಯಾಕ್‌ ಮಾಡಿ ₹ 19 ಕೋಟಿ ಗಳಿಸಿದ್ದನೆಂಬ ಸಂಗತಿ ಸಿಐಡಿ ಸೈಬರ್ ಪೊಲೀಸರ ತನಿಖೆಯಿಂದ ಬಯಲಾಗಿದೆ.

ಡ್ರಗ್ಸ್ ಜಾಲದ ಆರೋಪಿಗಳು ಸೈಬರ್ ವಂಚನೆಯಲ್ಲೂ ಶಾಮೀಲಾಗಿದ್ದಾರೆ. ಇದರಲ್ಲಿ ರಾಜಕೀಯ ಮುಖಂಡರು, ಉದ್ಯಮಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಮಕ್ಕಳೂ ಭಾಗಿಯಾಗಿರುವ ಸಂಗತಿ ಹೊರಬಿದ್ದಿದೆ.

ಡಾರ್ಕ್‌ನೆಟ್‌ ಮೂಲಕ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಆರೋಪದಡಿ ಎಂ. ಸುಜಯ್‌ನನ್ನು ಬಂಧಿಸಲಾಗಿತ್ತು. ಕೆಂಪೇಗೌಡ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡಿದ್ದ ಪೊಲೀಸರು, ಆರೋಪಿಗಳಾದ ಹೇಮಂತ್ ಮುದ್ದಪ್ಪ, ಸುನೀಶ್ ಹೆಗ್ಡೆ, ಪ್ರಸಿದ್‌ ಶೆಟ್ಟಿ, ಕಾಂಗ್ರೆಸ್ ಮುಖಂಡ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಸೇರಿದಂತೆ 7 ಮಂದಿಯನ್ನು ಬಂಧಿಸಿದ್ದರು. ಡ್ರಗ್ಸ್ ಖರೀದಿಗಾಗಿ ಆರೋಪಿಗಳಿಗೆ ಬಿಟ್‌ ಕಾಯಿನ್‌ ನೀಡುತ್ತಿದ್ದ ಆರೋಪದಡಿ ಶ್ರೀಕೃಷ್ಣನನ್ನು ಸೆರೆ ಹಿಡಿದಿದ್ದರು.

ರಾಜ್ಯ ಸರ್ಕಾರದ ಇ– ಪ್ರೊಕ್ಯೂರ್‌ಮೆಂಟ್‌ ಜಾಲತಾಣವನ್ನು 2019ರಲ್ಲಿ ಹ್ಯಾಕ್ ಮಾಡಿರುವ ಬಗ್ಗೆ ಸಿಐಡಿ ಸೈಬರ್ ಕ್ರೈಂ ವಿಭಾಗದಲ್ಲಿ ಪ್ರಕರಣ ದಾಖಲಾಗಿತ್ತು. ಇದರಲ್ಲೂ ಶ್ರೀಕೃಷ್ಣ ಭಾಗಿಯಾಗಿದ್ದು ತನಿಖೆಯಿಂದ ಗೊತ್ತಾಗಿತ್ತು.

ಶ್ರೀಕೃಷ್ಣ, ಸುನೀಶ್ ಹೆಗ್ಡೆ, ಪ್ರಸಿದ್ಧ್ ಶೆಟ್ಟಿಯನ್ನು ಸಿಐಡಿ ಪೊಲೀಸರು ವಿಚಾರಣೆ ನಡೆಸಿದಾಗ ಈ ಮಾಹಿತಿ ಗೊತ್ತಾಗಿದೆ.

‘ಜಯನಗರದ ಶ್ರೀಕೃಷ್ಣ, ನೆದರ್‌ಲ್ಯಾಂಡ್‌ನಲ್ಲಿ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ಮುಗಿಸಿ ಬೆಂಗಳೂರಿಗೆ ವಾಪಸ್‌ ಬಂದು ಜಾಲತಾಣ ಹಾಗೂ ಸಾಮಾಜಿಕ ಜಾಲತಾಣ ಹ್ಯಾಕ್‌ ಮಾಡಲಾರಂಭಿಸಿದ್ದ. ಅದರಿಂದ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಾನೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಇ– ಪ್ರೊಕ್ಯೂರ್‌ಮೆಂಟ್‌ ಹಾಗೂ ಖಾಸಗಿ ಕಂಪನಿಯೊಂದರ ಜಾಲತಾಣ ಹ್ಯಾಕ್ ಮಾಡಿದ್ದ ಶ್ರೀಕೃಷ್ಣ,  ₹ 19 ಕೋಟಿ ಲಪಟಾಯಿಸಿದ್ದ. ಇದೇ ರೀತಿಯಲ್ಲಿ ಸಾಕಷ್ಟು ಜಾಲತಾಣಗಳನ್ನು ಹ್ಯಾಕ್ ಮಾಡಿ ಹಣ ಸಂಪಾದಿಸಿದ್ದಾನೆ. ಹಣ ಎಲ್ಲಿದೆ ಎಂಬುದನ್ನು ತಿಳಿಯಬೇಕಿದೆ’ ಎಂದೂ ಮೂಲಗಳು ಹೇಳಿವೆ.

ಶ್ರೀಕೃಷ್ಣನ ಹಣಕಾಸು ವ್ಯವಹಾರವನ್ನು ಸ್ನೇಹಿತ ರಾಬಿನ್ ನೋಡಿಕೊಳ್ಳುತ್ತಿದ್ದ. ಸಿಸಿಬಿ ವಶದಲ್ಲಿರುವ ಆತನನ್ನು ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಮುಖಂಡ, ಐಪಿಎಸ್ ಅಧಿಕಾರಿ ಪುತ್ರರ ಸ್ನೇಹಿತ

‘ಡ್ರಗ್ಸ್ ಪ್ರಕರಣದ ಆರೋಪಿ ಸುನೀಶ್‌ ಹೆಗ್ಡೆ ಹಾಗೂ ಶ್ರೀಕೃಷ್ಣ, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಮಕ್ಕಳ ಜೊತೆ ಸ್ನೇಹ ಹೊಂದಿದ್ದರು’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಸುನೀಶ್‌ ಹೆಗ್ಡೆ, ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನ ಆಪ್ತ ಸ್ನೇಹಿತ. ಶ್ರೀಕೃಷ್ಣ, ಹಿರಿಯ ಐಪಿಎಸ್ ಅಧಿಕಾರಿ ಪುತ್ರನ ಸ್ನೇಹಿತ. ಡ್ರಗ್ಸ್ ಹಾಗೂ ಸೈಬರ್ ವಂಚನೆ ಜಾಲದಲ್ಲಿ ದೊಡ್ಡವರ ಮಕ್ಕಳೂ ಶಾಮೀಲಾಗಿರುವ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು